Advertisement

ಆತ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಜಿ.ಮಾದೇಗೌಡರ ಅಂತ್ಯಸಂಸ್ಕಾರ

09:20 PM Jul 18, 2021 | Team Udayavani |

ಮಂಡ್ಯ : ಹಿರಿಯ ರಾಜಕೀಯ ಮುತ್ಸದ್ಧಿ, ಕಾವೇರಿ ಹೋರಾಟಗಾರ, ಮಾಜಿ ಮಂತ್ರಿ, ಮಾಜಿ ಸಂಸದ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಡಾ.ಜಿ.ಮಾದೇಗೌಡರು ಶನಿವಾರ ನಿಧನ ಹೊಂದಿದ್ದು, ಭಾನುವಾರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತನಗರದ ಆತ್ಮಲಿಂಗೇಶ್ವರ ದೇವಾಲಯ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5 : 20ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Advertisement

ಭಾನುವಾರ ಮುಂಜಾನೆ ಮಂಡ್ಯ ನಗರದ ಬಂದಿಗೌಡ ಬಡಾವಣೆಯ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಬೆಳಿಗ್ಗೆ 10:30 ಕ್ಕೆ ನಿವಾಸದಿಂದ ನಗರದ ಗಾಂಧಿಭವನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಗಾಂಧಿಭವನದ ಸಭಾಂಗಣದಲ್ಲಿಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಇದನ್ನೂ ಓದಿ : 2022-23 ವರ್ಷದಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ ಕಲಿಕೆಗೆ ಅವಕಾಶ :  ಅಶ್ವತ್ಥನಾರಾಯಣ

ಮಂಡ್ಯದಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮದ್ದೂರಿಗೆ ತರಲಾಯಿತು. ಅಲ್ಲಿಂದ ಅವರ ತವರು ಗ್ರಾಮದ ಗುರುದೇವರಹಳ್ಳಿಗೆ ಕೊಂಡೊಯ್ದು ಅಲ್ಲಿ, ಗ್ರಾಮಸ್ಥರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಭಾರತೀನಗರದ ಭಾರತೀ ಕಾಲೇಜಿನಲ್ಲಿ 15 ನಿಮಿಷಗಳ ಕಾಲ ಇಡಲಾಯಿತು. ಅಲ್ಲಿಂದ ಮೆರವಣಿಗೆ ಮೂಲಕ ಮಧ್ಯಾಹ್ನ 3:30ಕ್ಕೆ ಹನುಮಂತನಗರಕ್ಕೆ ತರಲಾಯಿತು.

ನಂತರ ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಜಿಲ್ಲಾಡಳಿತದಿಂದ ಗೌರವ ಸಲ್ಲಿಸಲಾಯಿತು. ನಂತರ ಪೊಲೀಸ್ ಸಶಸ್ತ್ರ ಮೀಸಲು ಪಡೆಯು ಗೌರವ ವಂದನೆ ಸಲ್ಲಿಸಿತು. ನಂತರ ಮೂರು ಬಾರಿ ಕುಶಾಲತೋಪು ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸಕಲ ಸರ್ಕಾರಿಗಳ ಗೌರವ ಸಲ್ಲಿಸಲಾಯಿತು.

Advertisement

ಮಾದೇಗೌಡರ ಮೊದಲ ಪುತ್ರ ಮಿಮ್ಸ್ನ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಮಧು ಜಿ.ಮಾದೇಗೌಡ ಅವರು, ತಮ್ಮ ತಂದೆಯ ವಿಧಿವಿಧಾನಗಳನ್ನು ಪೂರೈಸಿದರು. ನಂತರ ಗಂಧದ ಮರ, ಕರ್ಪೂರ, ತುಪ್ಪದಿಂದ ಮಾದೇಗೌಡರ ಅಂತ್ಯಕ್ರಿಯೆ ನಡೆಸಲಾಯಿತು.

ಅಂತ್ಯಕ್ರಿಯೆಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು, ರೈತನಾಯಕಿ ಸುನಂದಜಯರಾಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next