Advertisement

ಜನತೆಯ ಪ್ರೀತಿ, ಆಶೀರ್ವಾದ ಮರೆಯಲಾರೆ: ನಿರ್ಗಮನ ಜಿಲ್ಲಾಧಿಕಾರಿ ಜಗದೀಶ್‌

07:52 AM Sep 01, 2021 | Team Udayavani |

ಉಡುಪಿ: ಜಿಲ್ಲೆಯ ಜನತೆ ತೋರಿರುವ ಅಭಿಮಾನ, ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಲ್ಲಿಯ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯ ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ ಎಂದು ನಿರ್ಗಮನ ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

Advertisement

ರಜತಾದ್ರಿಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟ ಕಾರಣ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಲಿಲ್ಲ ಎಂಬ ಕೊರಗು ಇದೆ. ಆದರೆ ಅಗತ್ಯ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಅತೀ ಕಡಿಮೆ ಸಾವು ಸಂಭವಿಸಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಜಿಲ್ಲೆಗೆ ದೊರೆತಿದೆ ಎಂದರು.

ಹಲವು ಯೋಜನೆಗಳ ಪ್ರಸ್ತಾವನೆ  ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ಅನೇಕ ಯೋಜನೆಗಳನ್ನು ರೂಪಿಸಿ ಅವುಗಳ ಪ್ರಸ್ತಾವನೆ

ಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಕಂದಾಯ ಸೇವೆಗಳನ್ನು ಒದಗಿಸುವಲ್ಲಿ ಜಿಲ್ಲೆ ಇಂದಿಗೂ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಅಲ್ಲದೇ ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಿಸಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸಹ ಪ್ರಥಮ ಸ್ಥಾನದಲ್ಲಿದೆ. ಕೋವಿಡ್‌ ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

Advertisement

ಉತ್ತಮ ಸಹಕಾರ :

ಶಾಸಕ ರಘುಪತಿ ಭಟ್‌ ಮಾತನಾಡಿ, ಮರಳು ವಿತರಣೆಯನ್ನು ಅಧಿಕಾರಿ ಸ್ವೀಕರಿಸಿದ ಒಂದೂವರೆ ತಿಂಗಳಿನಲ್ಲಿಯೇ ಕಾನೂನು ಚೌಕಟ್ಟಿನೊಳಗೆ ಪರಿಹಾರ ಮಾಡಿದ ಡಿಸಿ ಜಿ.ಜಗದೀಶ್‌, ಕೋವಿಡ್‌ ಸಮಸ್ಯೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಾತ್ರವಲ್ಲದೇ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಜಿ.ಜಗದೀಶ್‌ ಅವರ ಪತ್ನಿ ಸೌಮ್ಯಾ, ಮಕ್ಕಳಾದ ಅನುಷ್ಕಾ ಮತ್ತು ಅಭಿಘ್ನ,  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಕರಾವಳಿ ಕಾವಲು ಪಡೆ ಎಸ್ಪಿ ನಿಖೀಲ್‌, ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ  ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ನಿರೂಪಿಸಿದರು. ನೂತನ ಜಿಲ್ಲಾಧಿಕಾರಿ ಕೂರ್ಮ ರಾವ್‌ ಅವರು ಸೆ. 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next