ಮೈಸೂರು: ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಸಂಬಂಧ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ನಡೆದಿದ್ದ ಜಟಾಪಟಿ ಮಾಸುವ ಮುನ್ನವೇ, ಸಂಸದರು ಮತ್ತೆ ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್ ರೂಪಿಸಿರುವ ಹೊಸ ವಸತಿ ಯೋಜನೆ ಕೈ ಬಿಟ್ಟು, ಹಳೆಯ ಯೋಜನೆ ಜಾರಿಗೆ ತರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಮತ್ತೂಂದು ಜಟಾಪಟಿಗೆ ಮುನ್ನುಡಿ ಬರೆದಿದೆ.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಾಪ್ ಸಿಂಹ, ರಾಮದಾಸ್ ನಿರ್ದೇಶನ ಪ್ರಕಾರ ರೂಪಿಸಿದ ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆ ರೂಪಿಸಿ 3 ವರ್ಷವಾದರೂ ಬಡವರಿಗೆ ವಸತಿ ನೀಡಲು ಸಾಧ್ಯವಾಗಿಲ್ಲ. ಈ ಹಿಂದೆ ಜಿ ಪ್ಲಸ್-3 ಮನೆಗಳು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಇದೀಗ ಜಿ ಪ್ಲಸ್-9 ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿ ಪ್ಲಸ್-3ನೇ ನಿರ್ಮಿಸಿ: ಜಿ ಪ್ಲಸ್-3 ಮನೆಗಳ ಬದಲು ಜಿ ಪ್ಲಸ್-9 ಮನೆಗಳ ನಿರ್ಮಾಣ ಮಾಡುವಂತೆ ಶಾಸಕರ ನಿರ್ದೇಶನ ಮೇರೆಗೆ ಯೋಜನೆ ಬದಲಾಯಿಸಿರುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಜಿ ಪ್ಲಸ್-3 ಮನೆಗಳ ನಿರ್ಮಾಣಕ್ಕೆ 4.9 ಕೋಟಿ ರೂ. ಸಾಕಾಗುತ್ತದೆ. ಆದರೆ, ಜಿ ಪ್ಲಸ್-9 ಮನೆಗಳ ನಿರ್ಮಾಣಕ್ಕೆ 18 ಕೋಟಿ ರೂ. ಅವಶ್ಯಕತೆ ಇದೆ. ಅಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ತರುತ್ತೀರಾ? ಅನುಷ್ಠಾನ ಸಾಧ್ಯವೇ ಎಂಬ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಹೀಗಾಗಿ ಈ ಹಿಂದೆ ರೂಪಿಸಿದ ಯೋಜನೆ ಪ್ರಕಾರ ಜಿ ಪ್ಲಸ್-3 ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.
ರಾಜಕೀಯ ಹಸ್ತಕ್ಷೇಪ: ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳು ಸರಿಯಾಗಿ ಹಂಚಿಕೆಯಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಭಾವಿಗಳಿಗೆ ಕೆಳ ಭಾಗದಲ್ಲಿ ಮನೆ ನೀಡಲಾಗಿದೆ. ಬಹಿರಂಗವಾಗಿ ಮನೆ ಹಂಚಿಕೆ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಶಾಸಕರಾದ ಎಚ್ .ಪಿ.ಮಂಜುನಾಥ್, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಇದ್ದರು.
ಯುಜಿ ಕೇಬಲ್ ಅಳವಡಿಕೆಗೆ ಹಸ್ತಕ್ಷೇಪ: ನಗರದಲ್ಲಿ ಸೆಸ್ಕ್ ಕೈಗೊಂಡಿರುವ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಕೆಲ ಪಾಲಿಕೆ ಸದಸ್ಯರು ಅಡ್ಡಿ ಪಡಿಸುತ್ತಿದ್ದಾರೆ. ತಪ್ಪುಗಳಾಗಿದ್ದರೆ ಪ್ರಶ್ನಿಸಲಿ. ವಿನಾಕಾರಣ ಕಾಮಗಾರಿಗೆ ಅಡ್ಡಿ ಪಡಿಸಿ ಪಾಲಿಕೆ ಸದಸ್ಯರು ವಸೂಲಾತಿಗೆ ಮುಂದಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಪಾಲಿಕೆ ಸದಸ್ಯರಿಂದ ಯುಜಿ ಕೇಬಲ್ ಅಳವಡಿಕೆಗೆ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತರುವಂತೆ ಸೆಸ್ಕ್ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು