Advertisement
ಲೋಕಸಭಾ ಚುನಾವಣೆ ನೆಪದಲ್ಲಿ ಕೋಲಾರ ರಾಜಕಾರಣವನ್ನು ಪುನಃ ಪ್ರವೇಶಿಸಬೇಕೆಂಬ ಮುನಿಯಪ್ಪರ ಪ್ರಯತ್ನ ಶಾಸಕರ ರಾಜೀನಾಮೆ ನಾಟಕದಿಂದಾಗಿ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನೆಲೆ ಕಳೆದುಕೊಂಡಂತವರಾಗಿದ್ದಾರೆ.
Related Articles
Advertisement
ಇಕ್ಕಟ್ಟಿನಲ್ಲಿ ಗೌತಮ್: ಕೋಲಾರ ಲೋಕಸಭಾ ಅಭ್ಯರ್ಥಿಯಾಗಿರುವ ಕೆ.ವಿ.ಗೌತಮ್ ಅತ್ತ ದರಿ ಇತ್ತ ಪುಲಿ ಎಂಬಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೂ, ನಾಮಪತ್ರ ಸಲ್ಲಿಕೆಗೆ ಕೆ.ಎಚ್.ಮುನಿಯಪ್ಪರನ್ನು ಆಹ್ವಾನಿಸಿಕೊಂಡಿದ್ದರು. ಆನಂತರ ಪ್ರಜಾಧ್ವನಿ ಯಾತ್ರೆಗೆ ಗೈರಾದ್ದರು. ಈ ಕೊರತೆಯನ್ನು ತುಂಬಿಕೊಳ್ಳಲು ಮತ್ತೇ ಕೆ.ಎಚ್.ಮುನಿಯಪ್ಪರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಇದು ಸಹಜವಾಗಿಯೇ ಕೆ.ಎಚ್.ಮುನಿಯಪ್ಪ ವಿರೋಧಿ ಗುಂಪಿಗೆ ಅಸಮಾಧಾನ ಮೂಡಿಸಿದೆ. ಬಿಡುವಿರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದ್ದ ಗೌತಮ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ನಡೆಯುತ್ತಿರುವ ಪ್ರಚಾರ ಕಾರ್ಯಗಳಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿಗರಿಗೆ ಸ್ಥಾನವೇ ಸಿಗುತ್ತಿಲ್ಲ. ಪಕ್ಷದ ಕಾರ್ಯಕ್ರಮ ಎಂಬ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ಹೋಗಬೇಕಾಗಿದೆ. ಹೋದರು ಅಲ್ಲಿ ಮನ್ನಣೆ ಸಿಗುತ್ತಿಲ್ಲ. ಕೆಲವು ವಾರಗಳ ಹಿಂದಷ್ಟೇ ಕಾಂಗ್ರೆಸ್ ಭವನದಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿ ಎಂಬ ಕಾರಣಕ್ಕೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆದಿತ್ತು. ಎರಡು ಗುಂಪಿನ ನಡುವೆ ತಳ್ಳಾಟ ನೂಕಾಟವಾಗಿ ಸುದ್ದಿಯಾಗಿತ್ತು.
ಅತಂತ್ರ ಬೆಂಬಲಿಗರು: ಕೆ.ಎಚ್.ಮುನಿಯಪ್ಪ ಕೋಲಾರ ರಾಜಕಾರಣ ಪ್ರವೇಶಿಸುವುದು ಸದ್ಯಕ್ಕೆ ದೂರದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಎಚ್. ಮುನಿಯಪ್ಪ ಬೆಂಬಲಿಗರು ಭವಿಷ್ಯದಲ್ಲಿ ಪಕ್ಷದ ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವೇ ಆಗಲಿದೆ. ಇದರದಿಂದ ಕೆ.ಎಚ್.ಮುನಿಯಪ್ಪ ಬಣದ ಕೆಲವು ಮುಖಂಡರು ಈಗಾಗಲೇ ಗೌತಮ್ ಪ್ರಚಾ ರದ ನೆಪದಲ್ಲಿ ಶಾಸಕರ ಗುಂಪಿನ ಸಖ್ಯ ಸಂಪಾದಿಸಿಕೊಳ್ಳುತ್ತಿದ್ದಾರೆ. ಎರಡು ಗುಂಪುಗಳನ್ನು ಸಮತೋಲನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೆ.ಎಚ್. ಮುನಿಯಪ್ಪ ಬಣದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡಿರುವ ಹಾರ್ಡ್ ಕೋರ್ ಬೆಂಬಲಿಗರಿಗೆ ತಮ್ಮದೇ ಪಕ್ಷದಲ್ಲಿ ಉಸಿರುಗಟ್ಟಿಸುವಂತ ವಾತಾವರಣ ನಿರ್ಮಾಣವಾದಂತಾಗಿದೆ. ಪಕ್ಷದ ಜವಾಬ್ದಾರಿ ಹುದ್ದೆಗಳಲ್ಲಿದ್ದರೂ ಪ್ರಚಾರದ ಯಾವುದೇ ಜವಾಬ್ದಾರಿ ಹೊತ್ತುಕೊಳ್ಳದಂತ ಪರಿಸ್ಥಿತಿ ನಿರ್ಮಾಣವಾದಂತಾಗಿದೆ. ತಮ್ಮ ಕುಟುಂಬದವರಿಗೆ ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಕೆ.ಎಚ್.ಮುನಿಯಪ್ಪ ಮೂವತ್ತೈದು ವರ್ಷಗಳಿಂದಲೂ ತಮ್ಮನ್ನೇ ನೆಚ್ಚಿಕೊಂಡಿರುವ ಬೆಂಬಲಿಗರ ಬೆಂಬಲಕ್ಕೆ ಬರಲಾಗದಂತಾಗಿದ್ದಾರೆ. ಇದು ಕೋಲಾರ ಜಿಲ್ಲೆಯ ಕೆ.ಎಚ್.ಮುನಿಯಪ್ಪ ಬೆಂಬಲಿಗರಲ್ಲಿ ರಾಜಕೀಯ ಭವಿಷ್ಯ ಕುರಿತಂತೆ ಆತಂಕ ಮನೆ ಮಾಡುವಂತಾಗಿದೆ. ಕೆಲವು ಮುಖಂಡರು ಪರ್ಯಾಯ ರಾಜಕೀಯ ಹಾದಿಯ ಕುರಿತು ಈಗಾಗಲೇ ಚಿಂತನ ಮಂಥನದಲ್ಲಿ ತೊಡಗಿರುವುದು ಕೋಲಾರ ಕಾಂಗ್ರೆಸ್‌ನ ಹೊಸ ರಾಜಕೀಯ ಬೆಳವಣಿಗೆಯಾಗಿದೆ.
ಒಗ್ಗೂಡಿಸಲು ಆಸಕ್ತಿ ತೋರದ ಕಾಂಗ್ರೆಸ್ ಹೈಕಮಾಂಡ್ : ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಕೆಯನ್ನು ಶಮನ ಮಾಡಲು ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಕೋಲಾರದ ಎರಡೂ ಗುಂಪುಗಳಿಗೆ ರಾಜ್ಯದ ಇಬ್ಬರು ಪ್ರಮುಖರು ಪರೋಕ್ಷ ವಾಗಿ ಬೆನ್ನಿಗೆ ನಿಂತಿದ್ದಾರೆ. ಲೋಕ ಟಿಕೆಟ್ ಘೋಷಣೆ ಪ್ರಕರಣದಲ್ಲಿ ಇದು ಸ್ಪಷ್ಟವಾಗಿ ಬೆಳಕಿಗೆ ಬಂದಿತ್ತು. ಮುಂದಿನ ದಿನಗಳಲ್ಲಿಯೂ ಎರಡೂ ಗುಂಪುಗಳು ಒಗ್ಗೂಡಿ ಪಕ್ಷ ಕಟ್ಟುವಂತ ವಾತಾವರಣ ನಿರ್ಮಾಣ ವಾಗುವುದೇ ಇಲ್ಲ ಎನ್ನಲಾಗುತ್ತಿದೆ. ಇದರಿಂದ ಎರಡೂ ಗುಂಪಿನ ಮುಖಂಡರೇ ಪರಸ್ಪರ ಮುಖಾಮುಖೀಯಾಗಿ ಕುಳಿತು ತಮ್ಮ ಕಷ್ಟವನ್ನು ಬಗೆಹರಿಸಿಕೊಳ್ಳಬೇಕಿದೆ. ಆದರೆ, ಸದ್ಯಕ್ಕೆ ಕೋಲಾರ ಕಾಂಗ್ರೆಸ್ ನಲ್ಲಿ ಅಂತ ಪರಿಸ್ಥಿತಿ ಕಂಡು ಬರುತ್ತಿಲ್ಲ .
– ಕೆ.ಎಸ್.ಗಣೇಶ್