ಚೆನ್ನೈ: ‘ನಾನು ಕೊಯಮತ್ತೂರು ಲೋಕಸಭಾ ಕ್ಷೇತ್ರದ ಜನತೆಗೆ ನಮಸ್ಕರಿಸುತ್ತೇನೆ ಮತ್ತು ಎನ್‌ಡಿಎಯಲ್ಲಿ ನಂಬಿಕೆ ಇಟ್ಟ 4.5 ಲಕ್ಷ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ದೂರದೃಷ್ಟಿಯನ್ನು ನಂಬಿದ್ದೀರಿ. ಎನ್‌ಡಿಎಗೆ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಐತಿಹಾಸಿಕ ಮತಗಳನ್ನು ನೀಡಿದ್ದೀರಿ, ಮತ್ತು ಇನ್ನೂ, ನಾವು ಗೆಲುವಿನ ಗುರುತು ತಲುಪಲು ಹಿಂದೆ ಇದ್ದೆವು. ಕೊಯಮತ್ತೂರಿನ ಜಯ ಸಾಧಿಸಿರುವ ಡಿಎಂಕೆ ಅಭ್ಯರ್ಥಿ ರಾಜ್ ಕುಮಾರ್ ಅವರಿಗೆ ನಾನು ಅಭಿನಂದಿಸಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
‘ಇತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ವತಂತ್ರ ಅಭ್ಯರ್ಥಿಗಳ ಜನಾದೇಶವನ್ನು ಗೆದ್ದು ಕೊಯಮತ್ತೂರು ಲೋಕಸಭಾ ಕ್ಷೇತ್ರದ ಸಂಸದರಾಗಬೇಕೆಂದು ಹಾರೈಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನಿಮ್ಮ ಪ್ರೀತಿ ಮತ್ತು ಜನಾದೇಶವನ್ನು ಗೆಲ್ಲಲು ನಾವು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತೇವೆ ಎಂದು ಪ್ರೀತಿಯ ಜನರಿಗೆ ನಾನು ಭರವಸೆ ನೀಡುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಭಾರೀ ಸೋಲು
4,50,132 ಮತಗಳನ್ನು ಪಡೆದ ಅಣ್ಣಾಮಲೈ ವಿರುದ್ಧ ಡಿಎಂಕೆಯ ಗಣಪತಿ ರಾಜ್‌ಕುಮಾರ್ ಪಿ ಅವರು 5,68,200 ಮತಗಳನ್ನು ಪಡೆದು 1,18,068 ಮತಗಳ ಭರ್ಜರಿ ಜಯ ತನ್ನದಾಗಿಸಿಕೊಂಡರು. ಎಐಎಡಿಎಂಕೆ ಅಭ್ಯರ್ಥಿ ಸಿಂಗೈ ಜಿ ರಾಮಚಂದ್ರನ್ ಅವರು ಗಮನಾರ್ಹವಾಗಿ 2,36,490 ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು. ನಾಮ್ ತಮಿಳರ್ ಕಚ್ಚಿ ಪಕ್ಷದ ಕಲಾಮಣಿ ಜಗನಾಥನ್ ಕೂಡ 82,657 ಮತಗಳನ್ನು ಪಡೆದರು.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಒಟ್ಟಾಗಿ ಎಬ್ಬಿಸಿದ ಅಲೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವಾಗಲಿ ಎಐಎಡಿಎಂಕೆ ಯಾಗಲಿ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ 11.24 %ಮತಗಳಿಸಿದೆ. ಎಐಎಡಿಎಂಕೆ 20.46% ಮತ ಗಳಿಸಿದೆ.