ದಿನಗಳು ಉರುಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಬಳಕೆಯಾಗುತ್ತಿದ್ದು ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಪ್ರತಿ ಶಾಲೆ, ಕಾಲೇಜುಗಳಲ್ಲೂ ಆಗ ಬೇಕಿದೆ.
ಕಾಲೇಜು ಮೆಟ್ಟಿಲೇರುವಾಗ ಎಲ್ಲರಿಗೂ ತಮ್ಮದೇ ಆದ ಒಂದು ಸ್ವಂತ ಮೊಬೈಲ್ ಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಗೆಳೆಯ- ಗೆಳತಿಯರಿಗಿಂತ ಚೆಂದದ ಮೊಬೈಲ್ ಬೇಕೆನಿಸುತ್ತದೆ. ಆಗ ಹಠಕ್ಕಾದರೂ ಹೊಸ ಮೊಬೈಲ್ ಹೆತ್ತವರಲ್ಲಿ ಕಾಡಿಬೇಡಿ ಕೊಂಡುಕೊಳ್ಳುತ್ತೇವೆ. ಆ ವಯಸ್ಸಿಗೆ ಯಾವುದು ಬೇಕು, ಯಾವುದು ಬೇಡ ಎನ್ನುವ ಮಾಹಿತಿ ಇರದೆ ಸಮಯ ಕಳೆಯುವ ಸಾಧನವಾಗಿ ಬಿಡುತ್ತದೆ.
ಮೊಬೈಲ್ ಕೈಗೆ ಬಂದ ಮೇಲೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ಪ್ರಾರಂಭಿಸುವುದು ಸಾಮಾನ್ಯ. ಅದರ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೂ ಅದನ್ನು ಬೇರೆಯವರಿಂದ ಕೇಳಿಯಾದರೂ ತಿಳಿದು ಕೊಳ್ಳಲು ಆರಂಭಿಸುತ್ತಾರೆ.
ಆದರೆ ಅದರ ಸದ್ಬಳಕೆ ಹೇಗೆ ಎಂಬುದು ಕೆಲವೇ ಕೆಲವರು ಅರಿತಿರುತ್ತಾರೆ. ಈಗ ಅಂತೂ ಸಾವಿರಾರು ಆ್ಯಪ್‌ಗಳು ಬಂದಿದ್ದು, ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತವೆ. ಅದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಅನೇಕ ಆ್ಯಪ್‌ಗ್ಳಿಂದ ಸಾಮಾನ್ಯ ಜ್ಞಾನಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ.
ರಜೆಯನ್ನು ಬಳಸಿಕೊಳ್ಳಿ
ಬೇಸಗೆ ರಜೆ ಬಂತೆಂದರೆ ಸಾಕು, ಸಮಯ ಕಳೆದದ್ದೇ ತಿಳಿಯುವುದಿಲ್ಲ ಎಂಬ ಮಕ್ಕಳು ಸ್ವಲ್ಪ ವಿವಿಧ ರೀತಿಯ ಪರೀಕ್ಷೆಗಳನ್ನು ಎದುರಿಸಬೇಕು, ಇಲ್ಲವಾದಲ್ಲಿ ಸಣ್ಣಪುಟ್ಟ ಕ್ರಾಫ್ಟ್ ಗಳನ್ನು ಮಾಡುವುದನ್ನು ಕಲಿಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮನೆಗಳಲ್ಲಿ ಹೇಗೆ ವಿವಿಧ ರೀತಿಯ ಕ್ರಾಫ್ಟ್ ಗಳನ್ನು ಮಾಡುವುದು ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ ಯಾವುದೋ ಒಂದು ಹೊಸ ವಿಷಯ ತಿಳಿದ ಹಾಗೆ ಆಗುವುದಲ್ಲದೆ ಹೆಚ್ಚು ಹೆಚ್ಚು ತಿಳಿದುಕೊಂಡಾಗ ಬಿಡುವಿನ ಸಮಯದಲ್ಲಿ ಅದನ್ನು ಬಳಸಿಕೊಳ್ಳಬಹುದು. ಇದರಿಂದ ಪಾಕೆಟ್ ಮನಿಗಂತೂ ಯಾವುದೇ ಕೊರತೆಯಾಗುವುದಿಲ್ಲ.
ವಿವಿಧ ಭಾಷೆ ಕಲಿಯಲು ಅವಕಾಶ
ಇಂಗ್ಲಿಷ್, ಹಿಂದಿ ಕಲಿತರೆ ಸಾಕು ಎನ್ನುತ್ತಿದ್ದವರು ಈಗ ಬೇರೆ ಬೇರೆ ಭಾಷೆಗಳನ್ನು ಕಲಿಯಲು ಇಚ್ಛಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ಆ್ಯಪ್‌ಗಳು ನೀವು ಕೇಳಿದ ಭಾಷೆಯನ್ನು ನಿಮಗೆ ಸುಲಭದಲ್ಲಿ ಕಲಿಸಿಕೊಡುತ್ತವೆ. ಇದರಿಂದ ನಿಮ್ಮ ಭಾಷೆಯ ಜತೆ ಇನ್ನೊಂದು ಭಾಷೆಯನ್ನು ಕಲಿಯಲು ಅವಕಾಶವಾಗುತ್ತದೆ. ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುತ್ತಿರುವ ದಿನಗಳಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡರೆ ಸುಂದರ ಭವಿಷ್ಯ ನಮ್ಮದಾಗುವುದು.
ಯಾವ ಕೋರ್ಸ್ ಒಳ್ಳೆಯದು
ಒಂದು ಹಂತದ ಶಿಕ್ಷಣ ಮುಗಿದ ಬಳಿಕ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತದೆ. ಆದರೆ ಈಗ ಹಾಗಲ್ಲ ಯಾವುದನ್ನು ಆಯ್ಕೆ ಮಾಡಿದರೆ ಮುಂದೆ ಯಾವ ಯಾವ ಹಂತಗಳಿಗೆ ಹೋಗಬಹುದು. ಹಾಗೆ ಹೋದರೆ ಮುಂದೆ ದೊರೆಯುವ ಉದ್ಯೋಗ ಹೇಗಿರುತ್ತದೆ. ಇವೆಲ್ಲವನ್ನೂ ನಾವು ಕುಳಿತಲ್ಲಿಯೇ ತಿಳಿದುಕೊಳ್ಳಬಹುದು.
ಪ್ರೀತಿ ಭಟ್ ಗುಣವಂತೆ