Advertisement
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ 5 ಜನ ಎಂಬಿಬಿಎಸ್ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಸರ್ಕಾರ ತಾಯ್ನಾಡಿಗೆ ಕರೆತಂದಿತು. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದ ಸರ್ಕಾರದ ಈ ನಡೆಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ ಬಳಿಕ ಅವರ ವಿದ್ಯಾಭ್ಯಾಸಕ್ಕೆ ತೊಡಕ್ಕಾಗದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು.
Related Articles
Advertisement
ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಶಿಕ್ಷಣ ಸಂಬಂಧ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಕೆಲವು ತಿಂಗಳುಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದು ಮುಂದೇನು ಮಾಡಬೇಕೆಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕೆನ್ನುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆಗ್ರಹವಾಗಿದೆ.
ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದುವರೆಗೂ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಮೈಸೂರು ಜೆಎಸ್‌ಎಸ್ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿದೆ. ಉಕ್ರೇನ್ ಕಾರ್ಕಿವ್ ಯೂನಿರ್ವಸಿಟಿ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದೆ. ಸದ್ಯ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆದುಕೊಳ್ಳಲಾಗುತ್ತಿದೆ. ಮತ್ತೆ ಉಕ್ರೇನ್‌ಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಕೆಲವು ಮೆಡಿಕಲ್ ಕಾಲೇಜುಗಳು ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿವೆ. ಇದರಿಂದ ಪ್ರಯೋಜನವಿಲ್ಲ ಆದ್ದರಿಂದ ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ರಾಜ್ಯ ಸರ್ಕಾರ ಶೀಘ್ರವೇ ಅವಕಾಶ ಕಲ್ಪಿಸಿಕೊಡಬೇಕು.? – ಮನೋಜ್, ಉಕ್ರೇನ್‌ನಿಂದ ಮರಳಿದ ಎಂಬಿಬಿಎಸ್ ವಿದ್ಯಾರ್ಥಿ
ಉಕ್ರೇನ್‌ನಿಂದ ಬಂದ ಜಿಲ್ಲೆಯ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೈಸೂರು ಜೆಎಸ್ ಎಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿದೆ. ಈಗಾಗಲೇ ಮೇಲ್ ಕಳಿಸಲಾಗಿದೆ. ಮೇ 11ರಿಂದ ದಾಖಲಾಗುವಂತೆ ತಿಳಿಸಿದೆ. ಆದರೆ ಇದು ತಾತ್ಕಾಲಿಕವಾಗಿದೆ. ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಗೆ ಮನವಿ ಮಾಡಲಾಗಿದ್ದು ಪ್ರಯೋಜನವಾಗಿಲ್ಲ. ಈ ಸಂಬಂಧ ರಾಜ್ಯ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಿ. -ಅರುಣ್‌ಕುಮಾರ್, ಎಂಬಿಬಿಎಸ್ ವಿದ್ಯಾರ್ಥಿ
ಸಂದೀಪ್ ಜಿ.ಎನ್. ಶೇಡ್ಗಾರ್