Advertisement

ಭವಿಷ್ಯಕ್ಕಾಗಿ ಜಲ ಸಂರಕ್ಷಣೆ ಅಗತ್ಯ: ಪೋತದಾರ

12:07 PM Feb 01, 2019 | |

ವಿಜಯಪುರ: ನೀರಿನ ಕೊರತೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಹೀಗಾಗಿ ಕೃಷಿಯಲ್ಲಿ ನೀರಿನ ನಿರ್ವಹಣೆ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳು, ರೈತರು ಜೊತೆಗೂಡಿ ಜಲ ಸಂರಕ್ಷಣೆಗೆ ಜನಾಂದೋಲನ ನಡೆಸಬೇಕು. ನೀರಿನ ನರ್ವಹಣೆ ಕುರಿತು ಸ್ಪಷ್ಟ ನಿರ್ಧಾರ ಕೈಕೊಳ್ಳಬೇಕು. ಇದಕ್ಕಾಗಿ ನೀರು ಬಳಕೆದಾರರ ಸಹಕಾರಿ ಸಂಘ ರಚಿಸುವುದು ಅತ್ಯಗತ್ಯ ಎಂದು ಕೃಷ್ಣಾ ಕಾಡಾ ಆಡಳಿತಾಧಿಕಾರಿ ವಿ.ಕೆ.ಪೋತದಾರ ಹೇಳಿದರು.

Advertisement

ಧೂಳಖೇಡ ಗ್ರಾಮದಲ್ಲಿ ಧಾರವಾಡದ ಜಲ-ನೆಲ ನಿರ್ವಹಣೆ ಸಂಸ್ಥೆ, ಭೀಮರಾಯನಗುಡಿಯ ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಧೂಳಖೇಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಇಂಡಿ ಶಾಖಾ ಕಾಲುವೆ ನೀರು ಬಳಕೆದಾರರ ಸಹಕಾರ ಸಂಘಗಳ ಸಮನ್ವಯ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಲ-ನೆಲ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀರು ಬಳಕೆದಾರರ ಸಹಕಾರಿ ಸಂಘದ ಮೂಲಕ ಜಲ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತದೆ. ಹೀಗಾಗ ರೈತರು ಈ ಅವಕಾಶದ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು. ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗಾಗಿ ಅಘಾದ ಪ್ರಮಾಣದ ಬಂಡವಾಳ ಹೂಡಿ ನೀರಾವರಿ ವ್ಯವಸ್ಥೆ ನಿರ್ಮಿಸಲಾಗಿದೆ. ಆದರೆ, ನಾಡಿನ ನೀರಾವರಿ ವ್ಯವಸ್ಥೆಯ ಸಮೀಕ್ಷೆ ಹಾಗೂ ರೈತರ ಅಭಿಪ್ರಾಯ, ಅನುಭವಗಳನ್ನು ಗಮನಿಸಿದರೆ ವ್ಯವಸ್ಥೆಯಲ್ಲಿ ಕೆಲವು ನ್ಯೂನ್ಯತೆಗಳಿಂದ ಒಂದೆಡೆ ಕಾಲುವೆಗಳ ಕೊನೆ ಹಂತಗಳಿಗೆ ನೀರು ತಲುಪುತ್ತಿಲ್ಲ. ಮತ್ತೂಂದೆಡೆ ಅತಿಯಾದ ನೀರಿನ ದುರ್ಬಳಕೆಯಿಂದ ಫಲವತ್ತಾದ ಕೃಷಿ ಭೂಮಿ ಸವಳು-ಜವಳಿನಿಂದ ಬಳಲುತ್ತಿದೆ ಎಂದು ವಿವರಿಸಿದರು.

ವಾಲ್ಮಿ ಸಂಸ್ಥೆ ರಾಜ್ಯಾದ್ಯಂತ ನೆಲ-ಜಲ ಸಂರಕ್ಷಣೆ ಕುರಿತು ಜಾಗೃತಿ ಆಂದೋಲನ ಹಮ್ಮಿಕೊಳ್ಳುತ್ತಿದೆ. ಕೃಷಿಯಲ್ಲಿ ಸಮರ್ಪಕ ಜಲ-ನೆಲ ಸಂರಕ್ಷಣೆ, ಕೃಷಿ ಉತ್ಪಾದನೆ ಹಾಗೂ ಆದಾಯ ಹೆಚ್ಚಳಕ್ಕೆ ರೈತರು ಸಹಕಾರಿ ಕಾಯ್ದೆ ಅಡಿಯಲ್ಲಿ ರಚಿಸಲಾಗುತ್ತಿರುವ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ರಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪಂಚಪ್ಪ ಕಲಬುರ್ಗಿ ಮಾತನಾಡಿ, ಕೃಷಿಯಲ್ಲಿ ನೀರಿನ ಸದ್ಬಳಕೆಗಾಗಿ ರೈತರು ಅಂತರಜಲ ರಕ್ಷಣೆ, ಸೂಕ್ಷ್ಮ ನೀರಾವರಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ನೀರಾವರಿ ಕಾಲುವೆಗಳಿಂದ ಅನಧಿಕೃತವಾಗಿ ನೀರನ್ನು ಎತ್ತುವುದರಿಂದ ಘೋಷಿತ ಅಚ್ಚುಕಟ್ಟು ಪ್ರದೇಶಕ್ಕೆ ಅನ್ಯಾಯವಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮಗಳ ಅಗತ್ಯವಿದೆ ಎಂದರು.

ಕೃಷ್ಣಾ ಕಾಡಾದ ಮುಖ್ಯ ಲೆಕ್ಕಾಧಿಕಾರಿ ಡಾ| ಮಹೇಶ ಮಾಲಗತ್ತಿ, ಕೃಷಿ ಸಂಶೋಧನಾ ಕೇಂದ್ರದ ಜಲ-ನೆಲ ತಜ್ಞ, ಡಾ| ಎಂ.ಎಸ್‌. ಶಿರಹಟ್ಟಿ, ಕೃಷಿ ಉಪ ನಿರ್ದೇಶಕ ಡಾ| ಪ್ರಕಾಶ ಚವ್ಹಾಣ ವಿಶೇಷ ಉಪನ್ಯಾಸ ನೀಡಿದರು. ಕೃಷಿ ಅಧಿಕಾರಿ ಬಸವರಾಜ ಬಿರಾದಾರ, ರೈತ ಮುಖಂಡರಾದ ಬಿ.ಡಿ. ಪಾಟೀಲ-ಹಂಜಗಿ, ಅಪ್ಪಾಸಾಹೇಬ ಯರನಾಳ, ಮಹಾದೇವ ನಗರೆ, ಭೀಮಾಶಂಕರ ಭೆ„ರಗೊಂಡ, ಭೀಮಾಶಂಕರ ಸಿಂದಗಿ, ಸಂಘಟಕರಾದ ಚಿದಂಬರ ಕುಲಕರ್ಣಿ, ದುಂಡಪ್ಪ ಪೂಜಾರಿ, ದತ್ತಾತ್ರೇಯ ಪೂಜಾರ, ರವಿಶಂಕರ ಪೋದ್ದಾರ ಉಪಸ್ಥಿತರಿದ್ದರು.

Advertisement

ಇದೇ ವೇಳೆ ತೇಜ್‌ರಾಜ ಜನಗೌಡ ಅವರನ್ನು ಸನ್ಮಾನಿಸಲಾಯಿತು. ಭೀಮಾಶಂಕರ ಬಗಲಿ ಸ್ವಾಗತಿಸಿದರು. ಮಹಾದೇವಗೌಡ ಹುತ್ತನಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next