Advertisement
ಪ್ರದರ್ಶನ:ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು ಖಾಲಿ ಕವರನ್ನು ಕೊಟ್ಟು ಯಾವುದಾದರೂ ಪ್ರಶ್ನೆಯನ್ನು ಬರೆದು ಚೀಟಿಯನ್ನು ಮಡಚಿ ಕವರಿನಲ್ಲಿ ಇಡಲು ಹೇಳುತ್ತಾನೆ. ಅವನು ಚೀಟಿ ನೋಡದೆಯೇ ಆ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಾನೆ.
ಈ ಹತ್ತು ಮಂದಿಯಲ್ಲಿ ಒಬ್ಟಾತ ನಿಮ್ಮ ಸಹಾಯಕನೇ ಆಗಿರಬೇಕು (ಇದು ನಿಮ್ಮ ಪ್ರೇಕ್ಷಕರಾರಿಗೂ ಗೊತ್ತಾಗಬಾರದು) ಮತ್ತು ಆತ ಬರೆಯುವ ಪ್ರಶ್ನೆಯನ್ನು ನೀವು ಮೊದಲೇ ತಿಳಿದಿರಬೇಕು. ಉದಾಹರಣೆಗೆ ಆತನ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಎಂದಿಟ್ಟುಕೊಳ್ಳಿ. ನೀವು ಪ್ರೇಕ್ಷಕರಿಂದ ಕವರುಗಳನ್ನು ಸಂಗ್ರಹಿಸುವಾಗ ನಿಮ್ಮ ಸಹಾಯಕನ ಕವರನ್ನು ಕೆಳಗಡೆ ಇಟ್ಟು ಉಳಿದವನ್ನು ಅದರ ಮೇಲೆ ಜೋಡಿಸಬೇಕು. ನೀವು ಸ್ಟೇಜಿನ ಮೇಲೆ ಬಂದು ಎಲ್ಲಾ ಕವರುಗಳನ್ನು ಮೇಜಿನ ಮೇಲೆ ಇಡಿ. ಈಗ ನಿಮ್ಮ ಸಹಾಯಕನ ಕವರು ಕೆಳಗಡೆ ಇರುತ್ತದೆ. ಮೇಲಿನ ಕವರನ್ನು ತೆಗೆದು ನಿಮ್ಮ ಹಣೆಯ ಹತ್ತಿರ ಹಿಡಿಯಿರಿ. ಧ್ಯಾನ ಮಾಡುತ್ತಿರುವವರಂತೆ ನಟಿಸಿ, ಇದರ ಒಳಗೆ ಇರುವ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಅಂತ ನಿಮ್ಮ ಸಹಾಯಕ ಬರೆದಿಟ್ಟ ಪ್ರಶ್ನೆಯನ್ನು ಹೇಳಿ ಕವರಿನ ಒಳಗಿರುವ ಚೀಟಿಯನ್ನು ನೋಡಿ “ಯೆಸ್, ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು?’ ಅಂತ ಹೇಳುತ್ತಾ ಚೀಟಿಯನ್ನು ಕವರಿನ ಒಳಗೆ ಹಾಕಿ ಕಿಸೆಗೆ ಹಾಕಿಕೊಳ್ಳಿ. ನಿಮ್ಮ ಸಹಾಯಕ ಎದ್ದು ನಿಲ್ಲುತ್ತಾನೆ. “ಅವನು ಚೆನ್ನಾಗಿ ಓದಿದ್ರೆ ಪಾಸ್ ಆಗೋದು ಗ್ಯಾರೆಂಟಿ’ ಅಂತ ತಮಾಷೆಯ ಉತ್ತರ ಕೊಟ್ಟು ಎರಡನೆಯ ಕವರನ್ನು ನಿಮ್ಮ ಹಣೆ ಹತ್ತಿರ ಇಟ್ಟು ಮೊದಲು ಮಾಡಿದಂತೆಯೇ ನಟನೆಯನ್ನು ಮಾಡುತ್ತಾ ಮೊದಲನೇ ಕವರಿನ ಚೀಟಿಯಲ್ಲಿ ನೀವು ನೋಡಿದ ಪ್ರಶ್ನೆಯನ್ನು ಓದಿ ಹೇಳಿ. ನಂತರ ಆ ಕವರಿನ ಚೀಟಿಯನ್ನು ನೋಡಿ ಯೆಸ್ ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು ಅಂತ ಹೇಳಿ ನಿಮಗೆ ತೋಚಿದ ಯಾವುದಾದರೂ ಗಮ್ಮತ್ತಿನ ಉತ್ತರವನ್ನು ಕೊಡಿ. ಅಂದರೆ ಪ್ರತಿ ಬಾರಿಯೂ ಹಣೆಯ ಹತ್ತಿರ ಕವರನ್ನು ಇಟ್ಟು ಉತ್ತರ ಹೇಳುವಾಗ ಹಿಂದಿನ ಕವರಿನಲ್ಲಿದ್ದ ಚೀಟಿಯ ಪ್ರಶ್ನೆಯನ್ನು ಹೇಳಬೇಕು. ಕೊನೆಯ ಕವರು ಅಂದರೆ ನಿಮ್ಮ ಸಹಾಯಕನ ಕವರಿನಲ್ಲಿರುವ ಪ್ರಶ್ನೆಯನ್ನು ಹೇಳುವಾಗ ಅದರ ಹಿಂದಿನ, ಅಂದರೆ ಒಂಭತ್ತನೇ ಕವರಿನ ಚೀಟಿಯಲ್ಲಿದ್ದ ಪ್ರಶ್ನೆಯನ್ನು ಹೇಳಬೇಕು. ನೀವು ಮಾತಿನಲ್ಲಿ ಜಾಣರಾದರೆ ತಮಾಷೆಯ ಉತ್ತರಗಳನ್ನು ಕೊಡುತ್ತಾ ಪ್ರೇಕ್ಷಕರನ್ನು ಅಚ್ಚರಿಯ ಜತೆಗೆ ನಗೆಗಡಲಲ್ಲಿ ತೇಲಿಸಬಹುದು. – ಉದಯ್ ಜಾದೂಗಾರ್