ಕೊಲೊಂಬೋ: ಭೀಕರ ಈಸ್ಟರ್ ಸಂಡೇ ದಾಳಿಗೆ ತುತ್ತಾದ ಶ್ರೀಲಂಕಾದಲ್ಲಿ ದಾಳಿಯ ಭೀತಿ ಇನ್ನೂ ಕರಗಿಲ್ಲ. ಈಸ್ಟರ್ ದಾಳಿ ನಡೆಸಿರುವ ಸಂಘಟನೆಯ ಸಕ್ರಿಯ ಸದಸ್ಯರು ಇನ್ನೂ ತಲೆಮರೆಸಿಕೊಂಡಿದ್ದು, ಇನ್ನಷ್ಟು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾಗೆ ಅಮೆರಿಕ ಎಚ್ಚರಿಕೆ ನೀಡಿದೆ. ಅಲ್ಲದೆ, ತಲೆಮರೆಸಿಕೊಂಡ ಉಗ್ರರ ಶೋಧ ಕಾರ್ಯದಲ್ಲಿ ಶ್ರೀಲಂಕಾ ಸೇನೆಗೆ ನೆರವಾಗುವುದಾಗಿಯೂ ಅಮೆರಿಕ ತಿಳಿಸಿದೆ.
ಮೂವರ ಬಂಧನ: ಈಸ್ಟರ್ ಸಂಡೇ ಬಾಂಬಿಂಗ್‌ಗೆ ನಂಟು ಹೊಂದಿರುವ ವಾಹನವೊಂದರಿಂದ ಮೂವರು ಶಂಕಿತರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ. ಜತೆಗೆ, ಆ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ದಾಳಿ ಸಂಬಂಧ 106 ಶಂಕಿತರನ್ನು ಬಂಧಿಸಿದಂತಾಗಿದೆ.
42 ವಿದೇಶಿಯರ ಸಾವು: ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಚೀನದ ಪ್ರಜೆಗಳು ಮಂಗಳವಾರ ಅಸುನೀಗಿದ್ದು, ದಾಳಿಗೆ ಬಲಿಯಾದ ವಿದೇಶಿಯರ ಸಂಖ್ಯೆ 42ಕ್ಕೇರಿಕೆಯಾಗಿದೆ. ಈ ಪೈಕಿ 11 ಮಂದಿ ಭಾರತೀಯರೂ ಸೇರಿದ್ದಾರೆ.
ಮೇ 5ರಿಂದ ಪ್ರಾರ್ಥನೆ: ಈ ನಡುವೆ, ದಾಳಿಯಿಂದಾಗಿ ಸ್ಥಗಿತಗೊಂಡಿದ್ದ ಸಾಮೂಹಿಕ ಪ್ರಾರ್ಥನೆಗಳು ಕೆಲವೊಂದು ಕೆಥೋಲಿಕ್ ಚರ್ಚುಗಳಲ್ಲಿ ಮೇ 5ರಿಂದ ಪುನರಾರಂಭ ಆಗಲಿವೆ ಎಂದು ಕಾರ್ಡಿನಲ್ ಮಾಲ್ಕಮ್ ರಣಜಿತ್ ತಿಳಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಯಾರೂ ಬ್ಯಾಗ್‌ಗಳನ್ನು ಚರ್ಚ್‌ನೊಳಕ್ಕೆ ತರುವಂತಿಲ್ಲ ಎಂದೂ ಅವರು ಹೇಳಿದ್ದಾರೆ.
ನೆರವಿನ ಭರವಸೆ: ಉಗ್ರರ ಸರಣಿ ದಾಳಿಯಿಂದಾಗಿ ಸಂಪೂರ್ಣ ಕುಸಿದು ಹೋಗಿರುವ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಗರಿಷ್ಠ ಪ್ರಮಾಣದ ಹಣಕಾಸು ನೆರವು ಒದಗಿಸುವುದಾಗಿ ಹೊಟೇಲ್ ಮಾಲಕರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಭರವಸೆ ನೀಡಿದ್ದಾರೆ.