Advertisement

ಭತ್ತದ ಕೃಷಿಯಲ್ಲಿ ಮತ್ತಷ್ಟು ಸ್ವಾವಲಂಬನೆ ಅಗತ್ಯ

01:45 AM Jan 17, 2021 | Team Udayavani |

ಭತ್ತದ ಬೆಳೆಯಲ್ಲಿ ಕುಂಠಿತ ಮತ್ತು ಅಕ್ಕಿಯ ಕೊರತೆ ಕೇವಲ ದೇಶದ ಸಮಸ್ಯೆ ಮಾತ್ರವಾಗಿರದೆ   ಜಾಗತಿಕ ಮಟ್ಟದಲ್ಲೂ ಇದು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ವಿಶ್ವದಲ್ಲೇ ಮೂರನೇ ಅತೀ ದೊಡ್ಡ ಅಕ್ಕಿ ರಫ್ತು ದೇಶ ಎನಿಸಿಕೊಂಡಿದ್ದ ವಿಯೆಟ್ನಾಂನಲ್ಲಿಯೇ ಅಕ್ಕಿಗೆ ಬರಗಾಲ ಬಂದಿರುವುದು. ಕಳೆದ ಒಂದು ದಶಕದಲ್ಲಿಯೇ ಮೊದಲ ಬಾರಿಗೆ ಈ ವರ್ಷ ವಿಯೆಟ್ನಾಂ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದೆ. ಅಕ್ಕಿಯ ಅಭಾವದಿಂದಾಗಿ ವಿಯೆಟ್ನಾಂನ ಮಾರುಕಟ್ಟೆಗಳಲ್ಲಿ ಕಳೆದ 9 ವರ್ಷಗಳಲ್ಲಿಯೇ ಅಕ್ಕಿ ಬೆಲೆ ಗರಿಷ್ಠ  ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ  ವಿಯೆಟ್ನಾಂ ಜನವರಿ, ಫೆಬ್ರವರಿ ತಿಂಗಳ ಅವಧಿಯಲ್ಲಿ  ಟನ್‌ಗೆ 70,000 ಟನ್‌ ಅಕ್ಕಿ ರಫ್ತು ಮಾಡುವಂತೆ ಭಾರತದ ರಫ್ತುದಾರರಿಗೆ  ಬೇಡಿಕೆ ಇಟ್ಟಿದೆ. ವಿಪರ್ಯಾಸವೆಂದರೆ ವಿಯೆಟ್ನಾಂ ಬೇಡಿಕೆ ಸಲ್ಲಿಸುವ ಕೆಲವು ದಿನಗಳ ಮೊದಲು ಚೀನ ಕೂಡ ಮೂರು ದಶಕಗಳಲ್ಲೇ ಮೊದಲ ಬಾರಿಗೆ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಕೃಷಿ ವಲಯ ಮತ್ತಷ್ಟು ಸ್ವಾವಲಂಬನೆಯನ್ನು ಬಯಸುತ್ತಿದೆ ಎಂಬುದನ್ನು ಪುಷ್ಠೀಕರಿಸಿದೆ.

Advertisement

ಕೃಷಿ ಭಾರತದ ಬೆನ್ನೆಲುಬು ಎನ್ನುವುದನ್ನು ನಾವು ಪ್ರಾಥಮಿಕ ತರಗತಿಯಲ್ಲಿರುವಾಗಲೇ ಉರು ಹೊಡೆದ ವಿಷಯ ಮತ್ತು ಅದು ನಿಜವೂ ಹೌದು. ಸ್ವಾತಂತ್ರ್ಯ ಬಂದಾಗ ದೇಶ ಆಹಾರ ಧಾನ್ಯ ಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. 1960ರ ಹಸುರು ಕ್ರಾಂತಿ ಬಳಿಕ ಆಹಾರದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ದೇಶದಲ್ಲಿ ಈಗ ವರ್ಷಕ್ಕೆ 26 ಕೋ. ಟನ್‌ಗಳಷ್ಟು ಆಹಾರ ಉತ್ಪಾದನೆಯಾಗುತ್ತಿದೆ. 3 ಲ. ಕೋ. ರೂ. ಗಳಷ್ಟು ಮೌಲ್ಯದ ಕೃಷಿ ಉತ್ಪನ್ನಗಳನ್ನು ಸದ್ಯ ದೇಶ ರಫ್ತು ಮಾಡುತ್ತಿದೆ.

ಇವೆಲ್ಲವನ್ನು ನೋಡಿದರೆ ಭಾರತದಲ್ಲಿ ಕೃಷಿಯ ಪರಿಸ್ಥಿತಿ ಚೆನ್ನಾಗಿರುವಂತೆ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಕೃಷಿ ಭೂಮಿಯ ಫ‌ಲವತ್ತತೆ ಕ್ಷೀಣಿಸುತ್ತಿದೆ. ಪೋಷಕಾಂಶಗಳ ಕೊರತೆ, ನೀರಿನ ಸಮಸ್ಯೆ, ಕೃಷಿ ಭೂಮಿ ಕಡಿಮೆಯಾಗುತ್ತಿರುವುದು, ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು ಕೃಷಿಗೆ ಅದರಲ್ಲೂ ಭತ್ತದ ಬೆಳೆಗೆ ತೀವ್ರ ಹೊಡೆತ ನೀಡುತ್ತಿವೆ.

ಭಾರತದ ಜನಸಂಖ್ಯೆ 130 ಕೋಟಿಯಿಂದ 2030ಕ್ಕೆ 150 ಕೋಟಿ ತಲುಪಬಹುದು. ಆ ವೇಳೆಗೆ ದೇಶದಲ್ಲಿ 130 ಟನ್‌ ಭತ್ತ ಉತ್ಪಾದನೆಯಾದರೆ ಮಾತ್ರ ದೇಶ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದು ಭಾರತೀಯ ಕೃಷಿ ಸಂಶೋಧನ ಪರಿಷತ್‌ (ಐಸಿಎಆರ್‌) ತಿಳಿಸಿದೆ. 2017-18ರಲ್ಲಿ ದೇಶದಲ್ಲಿ 112 ದಶಲಕ್ಷ ಟನ್‌ ಭತ್ತ ಉತ್ಪಾದನೆಯಾಗಿತ್ತು. ಈ ಪ್ರಮಾಣ 3.2 ದಶಲಕ್ಷ ಟನ್‌ ಹೆಚ್ಚಿ 2018-19ರಲ್ಲಿ 116 ದಶಲಕ್ಷ ಟನ್‌ಗೆ ಏರಿಕೆಯಾಗಿತ್ತು. ಆದರೆ ವಿಪರ್ಯಾಸವೆಂಬಂತೆ 2019-20ರಲ್ಲಿ ಯಾವುದೇ ಏರಿಕೆ ಕಂಡಿಲ್ಲ. ಭತ್ತ ಸಂಶೋಧನೆಗೆ ಕೇಂದ್ರ ಸರಕಾರ ಶೇ. 75 ಹಾಗೂ ರಾಜ್ಯ ಸರಕಾರ ಶೇ. 25 ಧನಸಹಾಯ ನೀಡುತ್ತಿದೆ. ಆದರೆ ಈ ನಿಟ್ಟಿನಲ್ಲಿ ಮತ್ತಷ್ಟು ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿದೆ. ಭತ್ತದ ಇಳುವರಿ ಕಡಿಮೆಯಾದರೆ ಆಹಾರ ಕೊರತೆಯ ಜತೆಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಭಾರತದ ಪ್ರಮುಖ ಭತ್ತದ ತಳಿಗಳ ಇಳುವರಿ ಏರಿಕೆ ಕಂಡಿಲ್ಲ. ಇದರ ಜತೆಗೆ ಹವಾಮಾನ ವೈಪರೀತ್ಯ ತೀವ್ರ ಸಂಕಷ್ಟ ತಂದೊಡ್ಡಿದೆ. ಇಷ್ಟೆಲ್ಲ ಅಡೆ ತಡೆಗಳ ನಡುವೆ ಹೊಸ ಭತ್ತದ ತಳಿ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಖೀಲ ಭಾರತ ಸುಸಂಘಟಿತ ಸಂಶೋಧನ ಯೋಜನೆ ಕಾರ್ಯ ನಿರ್ವಹಿಸುತ್ತಿದೆ.

ಕಳೆದ ಆರು ವರ್ಷಗಳಲ್ಲಿ ಹಳ್ಳಿಗಳಲ್ಲಿ ತಳ ಮಟ್ಟದಲ್ಲಿ ಸಂಶೋ ಧನೆ ಮತ್ತು ಕೃಷಿಯ ನಡುವೆ ಸಂಪರ್ಕ ಸ್ಥಾಪಿಸಲು ಮತ್ತು ರೈತರಿಗೆ ವೈಜ್ಞಾನಿಕ ಜ್ಞಾನ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ಕೃಷಿ ಸಂಬಂಧಿಸಿದ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯವನ್ನು ಶಾಲಾ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವನ್ನು ಪ್ರಧಾನ ಮಂತ್ರಿಗಳು ಇತ್ತೀಚೆಗೆ ಪ್ರಸ್ತಾವಿಸಿದ್ದರು. ಕೃಷಿಯಲ್ಲಿ ಅದರಲ್ಲೂ ಭತ್ತದಂತಹ ಆಹಾರ ಬೆಳೆಗಳಲ್ಲಿ ಭಾರತ ಮತ್ತಷ್ಟು ಸ್ವಾವಲಂಬಿಯಾಗುವ ಅಗತ್ಯವಿದೆ. ಆತ್ಮ ನಿರ್ಭರ ಯೋಜನೆಯ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುವ ಆಶಯದೊಂದಿಗೆ ಸರಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕೃಷಿಕರು ಮುಂದಾಗಬೇಕು. ಇತ್ತೀಚಿನ ಕೊರೊನಾ ಕಾಂಡದ ಸಂದರ್ಭದಲ್ಲಿ ನಗರಗಳಲ್ಲಿ  ವಿವಿಧ ಉದ್ಯೋಗ, ವೃತ್ತಿಗಳಲ್ಲಿ  ತೊಡಗಿಸಿಕೊಂಡಿದ್ದವರು ಅದರಲ್ಲೂ ಯುವಜನರು ಹಳ್ಳಿಗಳತ್ತ ಮುಖಮಾಡಿ ತಮ್ಮ ಹಿರಿಯರ ಪಾಳುಬಿದ್ದ ಕೃಷಿ ಭೂಮಿ, ಗದ್ದೆಗಳಲ್ಲಿ ಕೃಷಿ ಚಟುವಟಿಕೆ, ಬೇಸಾಯದಲ್ಲಿ ತೊಡಗಿ ಕೊಂಡು ದುದು ಒಂದರ್ಥದಲ್ಲಿ ಪ್ರಶಂಸನೀಯ ನಡೆಯೇ. ಕೊರೊ ನಾದ ಕಾರಣದಿಂದಲಾದರೂ ಇಂದಿನ ಯುವಪೀಳಿಗೆಗೆ ಕೃಷಿಯತ್ತ ಒಲವು ಮೂಡುವಂತಾಯಿತು. ಯುವಜನಾಂಗ ಈ ಒಲವನ್ನು ಮುಂದೆಯೂ ಮುಂದುವರಿಸಿದ್ದೇ ಆದಲ್ಲಿ ಸ್ವಾವ ಲಂಬಿ ಜೀವನ  ನಡೆಸಲು ಮತ್ತು ಆ ಮೂಲಕ ದೇಶ ಆಹಾರ ಬೆಳೆಗಳ ಉತ್ಪಾದನೆಯಲ್ಲಿ  ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು ಕಷ್ಟಸಾಧ್ಯವೇನಲ್ಲ.

Advertisement

 

 ದಿನೇಶ ಎಂ. ಹಳೆನೇರಂಕಿ

Advertisement

Udayavani is now on Telegram. Click here to join our channel and stay updated with the latest news.

Next