ಉಡುಪಿ: ಕನ್ನಡ ಸಾಹಿತ್ಯ ಮತ್ತು ಕಲೆಯ ವಿಚಾರದಲ್ಲಿ ಇಂದಿನ ಪೀಳಿಗೆ ಮತ್ತಷ್ಟು ಸಂಶೋಧನೆ, ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಗಣಕ ತಜ್ಞ ಡಾ| ಕೆ.ಪಿ. ರಾವ್ ಅಭಿಪ್ರಾಯಪಟ್ಟರು.
ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಡಾ| ಅನಿಲ್ ಕುಮಾರ್ ಅವರು ರಚಿಸಿದ “ಜಿಲ್ಲಾ ಬರಹಗಾರರ ಕೋಶ’ ಕಾವ್ಯ ಸಂಪುಟ ಬಿಡುಗಡೆ ಕಾರ್ಯಕ್ರಮದ ಗೋಷ್ಠಿಗಳ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ಷೇತ್ರ ಕಾರ್ಯ ಅಧ್ಯಯನದ ಬಗ್ಗೆ ಇಂದಿನ ಯುವ ಪೀಳಿಗೆ ಆಸಕ್ತಿಯಿಂದ ಮುಂದಾಗಬೇಕು. ಎಲ್ಲವನ್ನು ಕಂಪ್ಯೂಟರ್ ಮಾಹಿತಿಯೇ ಆಧರಿಸಿ ಅಧ್ಯಯನ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ. ಮಾಹಿತಿ ಮಾತ್ರವಲ್ಲದೆ ವಿಶ್ಲೇಷಣೆಯ ಅಗತ್ಯವೂ ಇದ್ದು, ಇದಕ್ಕೆ ಕ್ಷೇತ್ರ ಕಾರ್ಯದ ಅಧ್ಯಯನ, ಸಂಶೋಧನೆ ಅಗತ್ಯವಾಗಿದೆ. ಕನ್ನಡದ ಸಾಹಿತ್ಯ, ಕಲೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆದು ಮುಂದಿನ ಪೀಳಿಗೆಗೂ ಈ ಮೌಲ್ಯ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಡಾ| ಅನಿಲ್ ಕುಮಾರ್ ಅವರ “ಜಿಲ್ಲಾ ಬರಹಗಾರರ ಕೋಶ’ ಯುವ ಸಂಶೋಧಕರಿಗೆ ಅಗತ್ಯ ಮಾರ್ಗದರ್ಶಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯು. ಸೀತರಾಮ್ ಶೆಟ್ಟಿ ಉಪ್ಪುಂದ, ಶ್ರೀ ಸಿದ್ಧಿ ವಿನಾಯಕ ಪ.ಪೂ. ಕಾಲೇಜು ಸಂಸ್ಥಾಪಕ ಕೆರಾಡಿ ಚಂದ್ರಶೇಖರ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಕೃತಿ ಸಂಪಾದಕ ಡಾ| ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು.
ಲೇಖಕರಾದ ನಾರಾಯಣ ಬಲ್ಲಾಳ್, ಗೋಪಾಲ ಭಟ್, ಡಾ| ಎನ್.ಟಿ. ಭಟ್, ಭುವನಪ್ರಸಾದ್ ಹೆಗ್ಡೆ ಮತ್ತು ಪ್ರಮುಖರಾದ ನೀಲಕಂಠ ಪ್ರಭು ತೆಕ್ಕಟ್ಟೆ, ಯು. ನಜೀರ್ ಅಹಮ್ಮದ್, ಗಿರಿಜಾ ಆರ್. ಶೆಟ್ಟಿ, ಸುಲೋಚನಾ ಆರ್. ಶೆಟ್ಟಿ, ಡಾ| ಲಕ್ಷ್ಮೀಪ್ರಕಾಶ್, ಜಯ ಕೆ. ಶೆಟ್ಟಿ, ಸದಾನಂದ ಶೆಣೈ, ಸುದರ್ಶನ್ ನಾಯಕ್, ಡಾ| ಮಹಾಬಲೇಶ್ವರ ರಾವ್, ಪ್ರೊ| ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ| ಪುತ್ತಿ ವಸಂತ ಕುಮಾರ್, ರಾಘವೇಂದ್ರ ತುಂಗ, ನಾರಾಯಣ ಶೆಣೈ, ಸುಜಯ ಶೇಖರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಡಾ| ಜಯರಾಮ ಶೆಟ್ಟಿಗಾರ್, ವಿಠಲ್ ಶೆಟ್ಟಿಗಾರ್ ಸಗ್ರಿ, ಮಂಜುನಾಥ ಶೆಟ್ಟಿ, ಕೋಟ ಶ್ರೀಕೃಷ್ಣ ಅಹಿತಾನಲ ಉಪಸ್ಥಿತರಿದ್ದರು. ಪ್ರೊ| ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಸ್ವಾಗತಿಸಿ, ರಾಘವೇಂದ್ರ ತುಂಗ ನಿರೂಪಿಸಿದರು.
ಬೆಳಗ್ಗಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಸಂಪುಟವನ್ನು ಹಂಪಿ ಕನ್ನಡ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ| ಸುಬ್ಬಣ್ಣ ರೈ ಬಿಡುಗಡೆಗೊಳಿಸಿದರು. ಡಾ| ಪಾದೇಕಲ್ಲು ವಿಷ್ಣು ಭಟ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಡಿಸಿಎಂಡಿ, ಮುಂಬಯಿ ಎಂ. ರವೀಂದ್ರ ರೈ, ಬಾಲಾಜಿ ಪ್ರಕಾಶನ ಸಂಸ್ಥೆ ಉದಯ ಶೆಟ್ಟಿ ಉಪಸ್ಥಿತರಿದ್ದರು. ಅನಂತರ ಕಲೆ, ಸಾಹಿತ್ಯ, ಜಾನಪದ ಸಹಿತ ವಿವಿಧ ಕ್ಷೇತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆದವು.