Advertisement

ಎಟಿಎಂ ಹಲ್ಲೆ ಕೋರನ ವಶಕ್ಕೆ ಪಡೆಯಲು ಕಾನೂನು ತೊಡಕು

03:45 AM Feb 06, 2017 | |

ಬೆಂಗಳೂರು: ಕಾರ್ಪೋರೇಷನ್‌ ಬ್ಯಾಂಕ್‌ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ರಾಜಧಾನಿ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ್ದ ಆಂಧ್ರದ ಮದನಪಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿ ಮಧುಕರ್‌ ರೆಡ್ಡಿ (35)ಯನ್ನು ಸದ್ಯಕ್ಕೆ ವಶಕ್ಕೆ ಪಡೆಯಲು ನಗರ ಪೊಲೀಸರಿಗೆ ಕಾನೂನು ತೊಡಕು ಎದುರಾಗಿದೆ.

Advertisement

ಮೂರು ವರ್ಷ ಆರೋಪಿಗಾಗಿ ಶೋಧ ನಡೆಸಿದ್ದ ನಗರ ಪೊಲೀಸರು ಆರೋಪಿ ಪತ್ತೆಯಾಗದ ಹಿನ್ನೆಲೆ ಪ್ರಕರಣದ ಸಂಬಂಧ ಕಳೆದು ಮೂರು ತಿಂಗಳ ಹಿಂದೆ ಕೋರ್ಟ್‌ಗೆ “ಸಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. ಇದೀಗ ಆರೋಪಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅದನ್ನು ನಗರದ ನ್ಯಾಯಾಲಯದ ಗಮನಕ್ಕೆ ತಂದು ಪ್ರಕರಣದ ತನಿಖೆಗೆ ಕೋರ್ಟ್‌ನ ಅನುಮತಿ ಪಡೆಯಬೇಕಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಹಲಸೂರು ಗೇಟ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಲ್ಲಿನ ಇನ್ಸ್‌ಪೆಕ್ಟರ್‌ ಸೋಮವಾರ ನ್ಯಾಯಾಲಯದಿಂದ ತನಿಖೆಗೆ ಅನುಮತಿ ಪಡೆಯಲು ಅರ್ಜಿ ಹಾಕಲಿದ್ದಾರೆ. ಕೋರ್ಟ್‌ನ ಅನುಮತಿ ಪತ್ರ ಪಡೆದು ಆಂಧ್ರದ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಆರೋಪಿ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಲ್ಲಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಹೀಗಾಗಿ ಸದ್ಯಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಸುಮಾರು 20 ದಿನಗಳ ಬಳಿಕ ನಾವು ವಶಕ್ಕೆ ಪಡೆಯುತ್ತೇವೆ ಎಂದು ಪ್ರವೀಣ್‌ ಸೂದ್‌ ತಿಳಿಸಿದರು.

ಬೆಂಗಳೂರು ಪೊಲೀಸರು ಆರೋಪಿ ವಶಕ್ಕೆ ಕೋರಿ ಸಲ್ಲಿಸುವ ಮುನ್ನ ಇದೀಗ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಆರೋಪಿ ಜೋಡಿ ಕೊಲೆ ಪ್ರಕರಣದ ಸಂಬಂಧ ಹೈದ್ರಾಬಾದ್‌ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಸೋಮವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು 2013ರಲ್ಲಿ ನಡೆದ ಧರ್ಮಾವರಂನಲ್ಲಿ ನಡೆದ ವೃದ್ಧೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತಪುರ ಪೊಲೀಸರು ಕೂಡ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಳ್ಳಲಿದ್ದಾರೆ. ಅಲ್ಲಿನ ಪ್ರಕರಣದ ವಿಚಾರಣೆ ಬಳಿಕ ನಾವು ವಶಕ್ಕೆ ಪಡೆಯಲಿದ್ದೇವೆ ಎಂದು ನಗರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ?:
ಮಿಷನ್‌ ರಸ್ತೆ ಬಳಿ ಇರುವ ಕಾರ್ಪೋರೇಷನ್‌ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರಾಗಿದ್ದ ಜ್ಯೋತಿ ಉದಯ್‌, 2013 ನವೆಂಬರ್‌ 19 ರಂದು ಬೆಳಗ್ಗೆ 7.09ರ ಸುಮಾರಿಗೆ ಕಾರ್ಪೋರೇಷನ್‌ ವೃತ್ತದಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಣ ತೆಗೆಯಲು ಹೋಗಿದ್ದರು. ಇವರನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿ ಏಕಾಏಕಿ ಎಟಿಎಂ ಕೇಂದ್ರದೊಳಗೆ ನುಗ್ಗಿ ಬಾಗಿಲು ಎಳೆದು ಹಣ ಡ್ರಾ ಮಾಡಿಕೊಡುವಂತೆ ಬಂದೂಕು ಹಾಗೂ ಮಚ್ಚು ತೋರಿಸಿ ಬೆದರಿಸಿದ್ದ. ಜ್ಯೋತಿ ಉದಯ್‌ ಅವರು ಹಣ ಡ್ರಾ ಮಾಡಿಕೊಡಲು ನಿರಾಕರಿಸಿ ಸಹಾಯಕ್ಕೆ ಕೂಗಲು ಯತ್ನಿಸಿದಾಗ ಅವರ ತಲೆಗೆ ಮಚ್ಚಿನಿಂದ ಹೊಡೆದು, ಅವರ ಬಳಿಯಿದ್ದ ಎಟಿಎಂ ಕಾರ್ಡ್‌ ಹಾಗೂ ಬ್ಯಾಗ್‌ ಕಸಿದು ಪರಾರಿಯಾಗಿದ್ದ.

Advertisement

15 ದಿನ ನ್ಯಾಯಾಂಗ ಬಂಧನ
ಈ ಮಧ್ಯೆ,ಭಾನುವಾರ ಬೆಳಗ್ಗೆ ಆರೋಪಿಯನ್ನು ಚಿತ್ತೂರು ಪೊಲೀಸರು ಮದನಪಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.  ಭಾನುವಾರ ಕೋರ್ಟ್‌ ರಜೆ ಇದ್ದ ಕಾರಣ ಪೊಲೀಸರು ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರ ಮನೆಯಲ್ಲಿ ಆರೋಪಿಯನ್ನು ಹಾಜರುಪಡಿಸಿದ್ದರು.

ಜ್ಯೋತಿ ಉದಯ್‌ ಮೃತಪಟ್ಟಿರಬಹುದು ಎಂದುಕೊಂಡಿದ್ದನಂತೆ ಆರೋಪಿ
ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ನಡೆದ ಜ್ಯೋತಿ ಉದಯ್‌ ಸಾವನ್ನಪ್ಪಿದ್ದಾರೆ ಎಂದು ಕೊಂಡಿದ್ದೆ. ಆದರೆ ಆಕೆ ಬದುಕಿದ್ದಾರೆ ಎಂಬ ವಿಷಯ ತಿಳಿಯಿತು. ನಾನು ಎಟಿಎಂನಿಂದ ಹಣ ಕಸಿದು ಕೊಲೆ ಮಾಡುವ ಉದ್ದೇಶ ಹೊಂದಿದೆ ಎಂದು ಹಂತಕ ಮಧುಕರ್‌ ರೆಡ್ಡಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಚಿತ್ತೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇನ್ನು ಆರೋಪಿ 2006ಕ್ಕೂ ಮುನ್ನ ಚಿತ್ತೂರು ಜಿಲ್ಲೆ ಬಾಳಿರೆಡ್ಡಿ ಗಾರಿಪಲ್ಲೆ ಗ್ರಾಮದ ಯುವ ಕಾಂಗ್ರೆಸ್‌ ಕಾರ್ಯ ಕರ್ತನಾಗಿದ್ದ ಎಂಬುದು ತನಿಖೆ ವೇಳೆ ತಿಳಿದಿದೆ.

ಜ್ಯೋತಿ ಉದಯ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಬಂಧಿರುವುದಾಗಿ ಚಿತ್ತೂರು ಪೊಲೀಸರು ಮಾಹಿತಿ ನೀಡಿದ್ದರು. ಅದನ್ನು ಖಚಿತ ಪಡಿಸಿಕೊಳ್ಳಲು ನಗರದಿಂದ ಒಂದು ತಂಡವನ್ನು ಚಿತ್ತೂರಿಗೆ ಕಳುಹಿಸಲಾಗಿತ್ತು. ಆ ತಂಡ ವಾಪಸ್‌ ನಗರಕ್ಕೆ ಬಂದಿದೆ. ಅಲ್ಲದೆ, ನ್ಯಾಯಾಲಯದ ಕೆಲ ನಿಯಮಾವಳಿ ಪೂರ್ಣಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗುವುದು.
– ಪ್ರವೀಣ್‌ ಸೂದ್‌,  ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next