ಕ್ಷಯ ಮುಕ್ತ ಭಾರತ, ಜನೌಷಧ ಕೇಂದ್ರಗಳ ವಿಸ್ತರಣೆ, ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಆಸ್ಪತ್ರೆ ನಿರ್ಮಾಣ, ಕೌಶಲ ವೈದ್ಯಕೀಯ ಸಿಬಂದಿ ಗುರಿಯೊಂದಿಗೆ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಪೈಕಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ(ಪಿಎಂಜೆಎವೈ) 6,400 ಕೋಟಿ ರೂ. ಹಾಗೂ ಸ್ವಚ್ಛ ಭಾರತ ಅಭಿಯಾನಕ್ಕೆ 12,300 ಕೋಟಿ ರೂ. ಕಲ್ಪಿಸಲಾಗಿದೆ. ಜೊತೆಗೆ ವಿದೇಶದಲ್ಲಿ
ನರ್ಸ್‌ಗಳು ಉದ್ಯೋಗ ಪಡೆಯಲು ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಕಾಯ್ದಿರಿಸಲಾಗಿದೆ.
ಪ್ರಧಾನ ಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆಯಡಿ ದೇಶಾದ್ಯಂತ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ತಜ್ಞ ವೈದ್ಯರ ಕೊರತೆ ನೀಗಿಸಲು, ಸೌಲಭ್ಯ ಕಲ್ಪಿಸಲು ಜಿಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾಲೇಜು ಸೇರಿಸಲು ನಿರ್ಧರಿಸಲಾಗಿದೆ. ದೊಡ್ಡ ಆಸ್ಪತ್ರೆಗಳಲ್ಲಿ ಡಿಎನ್‌ಬಿ ಹಾಗೂ ಎಸ್‌ಎನ್‌ಬಿ ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್‌ಗಳನ್ನು ಕಲ್ಪಿಸುವ ಮೂಲಕ ವಿಶೇಷ ತಜ್ಞ ವೈದ್ಯರ ಸಂಖ್ಯೆಯನ್ನು ವೃದ್ಧಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಲು ಇದುವರೆಗೂ 20 ಸಾವಿರ ಆಸ್ಪತ್ರೆಗಳನ್ನು ಸೇರಿಸಲಾಗಿದ್ದು, ಆಸ್ಪತ್ರೆಗಳ ಸಂಖ್ಯೆಯನ್ನು ವೃದ್ಧಿಸಲಾಗುತ್ತಿದೆ. ಗ್ರಾಮೀಣ ಜನತೆ ಹಾಗೂ ಬಡವರು ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. 2024ರೊಳಗೆ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜನೌಷಧ ಕೇಂದ್ರಗಳನ್ನು ವಿಸ್ತರಿಸುವುದು ಸೇರಿದಂತೆ ಔಷಧಗಳ ಮಿತಿಯನ್ನು ಏರಿಸಲಾಗಿದೆ.
ಕೌಶಲ್ಯ ಅಭಿವೃದ್ಧಿ: ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್ ಸಿಬಂದಿ ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ.