ರಾಮನಗರ: ಜಿಲ್ಲೆಗೆ ನಿಗದಿಯಾಗಿರುವ ಗುರಿಗೆ ಮಾತ್ರ ಕೋವಿಡ್ ಪರೀಕ್ಷೆಗೆ ಸೀಮಿತಗೊಳಿಸದೆ ಅವಶ್ಯಕತೆ ಇರುವ ಕಡೆ ಸೋಂಕು ಪತ್ತೆಗೆ ಹೆಚ್ಚಿನ ಪರೀಕ್ಷೆ ನಡೆಸುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಐಎಲ್ಐ, ಎಸ್‌ಎಆರ್‌ಐ ಪ್ರಕರಣ ಪತ್ತೆ ಹಚ್ಚಿ, ಮಧುಮೇಹ, ರಕ್ತದ ಒತ್ತಡ ಸೇರಿ ಇತರೆ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಪ್ರಾಥಮಿಕ ಹಂತದಲ್ಲೇ ಕೋವಿಡ್ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಿ ಎಂದರು. ಕೋವಿಡ್ ಸಂಬಂಧಿಸಿದಂತೆ ತೆರೆಯ ಲಾಗಿರುವ ಸಹಾಯವಾಣಿ ಬಗ್ಗೆ ಹೆಚ್ಚಿನ ಪ್ರಚಾರ ಕೊಡಿ ಎಂದು ಸಚಿವರು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಇಕ್ರಂ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರ್ವಜನಿಕರು ಹೆಚ್ಚು ಸಂಪರ್ಕಿಸುತ್ತಿದ್ದಾರೆಂದರು. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ನರ್ಸ್ ಗಳ ಕೊರತೆ ಇದ್ದರೆ ಬೇರೆ ಸ್ಥಳದಿಂದ ಅವರನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಊಟ, ವಸತಿ ವ್ಯವಸ್ಥೆ ಆರೋಗ್ಯ ಇಲಾಖೆಯಿಂದ ಕಲ್ಪಿಸಿಕೊಡಬೇಕೆಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲೆಯಲ್ಲಿ ನ ಕೋವಿಡ್ ಅಂಕಿ ಅಂಶಗಳನ್ನು ನೀಡಿದರು. ಜಿಲ್ಲೆಗೆ 6,000 ಆ್ಯಂಟಿಜೆನ್ ಕಿಟ್ ನೀಡಲಾಗಿದ್ದು 5,462 ಬಳಸಿಕೊಳ್ಳಲಾಗಿದೆ ಇದರಲ್ಲಿ 469 ಪಾಸಿಟಿವ್ ಪ್ರಕರಣ ಕಂಡು ಬಂದಿದೆ ಎಂದರು.
ಕೋವಿಡ್ ಕೇರ್: ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ರಾಮನಗರದ ಕೋವಿಡ್-19 ಆಸ್ಪತ್ರೆಯಲ್ಲಿನ ಹಾಸಿಗೆಗಳು ಬಹುತೇಕ ಭರ್ತಿಯಾಗಿದೆ. ಹೀಗಾಗಿ ತಾಲೂಕು ಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ ಎಂದರು.ಮೊದಲ ಹಂತದಲ್ಲಿ ದೊಡ್ಡ ಮರಳವಾಡಿಯಲ್ಲಿ 118 ಹಾಸಿಗೆಗಳ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇನ್ನು ಮುಂದೆ ಈ ಭಾಗದಲ್ಲಿನ ಕೋವಿಡ್ ಸೋಂಕಿತರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುವುದು. ಅದೇ ರೀತಿ ಮಾಗಡಿಯಲ್ಲೂ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಅನ್ನು ಇನ್ನೆರಡು ದಿನಗಳಲ್ಲಿ ಪ್ರಾರಂಭಿಸಲಾಗುವುದೆಂದರು.
ಜಿಪಂ ಸಿಇಒ ಇಕ್ರಂ, ಎಸ್ಪಿ ಅನೂಪ್‌ಶೆಟ್ಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.