ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡಿದ್ದು, ಇದರಿಂದ ರಾಜ್ಯಕ್ಕೆ ಮುಂಗಾರು ಮಾರುತಗಳ ಪ್ರವೇಶ ಮತ್ತೆ ಎರಡು-ಮೂರು ದಿನ ತಡವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡ ಚಂಡಮಾರುತ “ವಾಯು’ (VAYU), ಸಮುದ್ರದ ಪೂರ್ವಭಾಗದ ಮಧ್ಯದಿಂದ ಉತ್ತರದತ್ತ ಮುಖಮಾಡಿದೆ.
ಇದು ಕರ್ನಾಟಕ ಕರಾವಳಿಗೆ ತುಸು ಹತ್ತಿರವಾಗಿದ್ದು, ಮುಂಗಾರು ಮಾರುತಗಳಿಗೆ ಅಡ್ಡಿಯಾಗಿದೆ. ಇದರಿಂದ 2-3 ದಿನ ತಡವಾಗಿ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ಗುಜರಾತಿಗೆ ಹೆಚ್ಚು ಮಳೆ ಸುರಿಸಲಿದೆ. ರಾಜ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರದು. ಈವರೆಗಿನ ಮಾಹಿತಿ ಪ್ರಕಾರ ಮುಂಗಾರು ಮಳೆ ಪ್ರಮಾಣದಲ್ಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಪ್ರವೇಶ ಮಾತ್ರ ವಿಳಂಬ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಆರು ತಾಸು (ಮಂಗಳವಾರ ಮಧ್ಯಾಹ್ನಕ್ಕೆ)ಗಳಿಂದ ಗಂಟೆಗೆ 15 ಕಿ.ಮೀ. ವೇಗದಲ್ಲಿ ಇದು ಸಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಚಂಡಮಾರುತದ ವೇಗ ಗಂಟೆಗೆ 110ರಿಂದ 120 ಕಿ.ಮೀ. ಆಗಲಿದೆ. ರಾಜ್ಯದ ಕರಾವಳಿಗೆ ಇದರಿಂದ ಸ್ವಲ್ಪ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂ.1ರಿಂದ 5ರ ಒಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತದೆ. ನಂತರದ ಎರಡು ದಿನಗಳಲ್ಲಿ ಎಲ್ಲೆಡೆ ಅದು ವಿಸ್ತರಣೆ ಆಗುತ್ತದೆ. ಆದರೆ, ಈ ಬಾರಿ ಒಂದು ವಾರ ವಿಳಂಬವಾಗಿದೆ. ಇದು ಇನ್ನಷ್ಟು ತಡವಾದರೆ, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.