Advertisement

ಮತ್ತಷ್ಟು ಕುಸಿದ ಅಂತರ್ಜಲ ಮಟ್ಟ

02:35 AM Apr 14, 2019 | Sriram |

ಸುಳ್ಯ/ ಕುಂದಾಪುರ : ಕಳೆದ ವರ್ಷಕ್ಕೆ ಹೋಲಿಸಿದರೆ ಕರಾವಳಿಯ ಜಿಲ್ಲೆಗಳಲ್ಲಿ ಈ ಬಾರಿ ಅಂತರ್ಜಲ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆರಡಕ್ಕೂ ಈ ಮಾತು ನಿಜ.

Advertisement

2018 ಮತ್ತು 2019ರ ಮಾರ್ಚ್‌ ತಿಂಗಳ ಅಂತರ್ಜಲ ಮಟ್ಟವನ್ನು ಪರಿಗಣಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.3 ಮೀ.ನಷ್ಟು ಕುಸಿತ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ 2018ರಲ್ಲಿ 8.92 ಮೀ.ಯಲ್ಲಿದ್ದುದು ಈ ಮಾರ್ಚ್‌ನಲ್ಲಿ 9.06 ಮೀ.ಗಿಳಿದಿದೆ. ಇನ್ನೆರಡುತಿಂಗಳು ಬಿರು ಬಿಸಿಲಿನಲ್ಲಿ ಭೂ-ಜಲ ಮಟ್ಟ ಪಾತಾಳಕ್ಕೆ ಜಾರುವ ಸಾಧ್ಯತೆ ಇದೆ.

ಗರಿಷ್ಠ ಕುಸಿತ: ಐದು ವರ್ಷಗಳ ಅಂಕಿ-ಅಂಶ ಗಮನಿಸಿದರೆ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿರುವುದು ಸ್ಪಷ್ಟವಾಗುತ್ತದೆ. ವರ್ಷದಿಂದ ವರ್ಷಕ್ಕೆ ಇಳಿಮುಖೀ ಗ್ರಾಫ್‌ ತೋರಿಸುತ್ತಿದೆ. 2018ರ ಮಾರ್ಚ್‌ ತಿಂಗಳಲ್ಲಿ ಮಂಗಳೂರು ತಾಲೂಕಿನಲ್ಲಿ 18.03 ಮೀ.ನಲ್ಲಿದ್ದ ಅಂತರ್ಜಲ ಮಟ್ಟ 2019ರಲ್ಲಿ 21.09 ಮೀ.ಗೆ ಇಳಿದಿದೆ. ಪುತ್ತೂರಿನಲ್ಲಿ 10.99 ಮೀ.ನಿಂದ 12.4 ಮೀ., ಬೆಳ್ತಂಗಡಿಯಲ್ಲಿ 13.54 ರಿಂದ 13.72 ಮೀ., ಬಂಟ್ವಾಳದಲ್ಲಿ 10.16ರಿಂದ 11.54 ಮೀ.ಗೆ, ಸುಳ್ಯದಲ್ಲಿ 11.58 ಮೀ.ನಿಂದ 12.45 ಮೀ.ಗೆ ಕುಸಿದಿದೆ. ಕಳೆದ ವರ್ಷದ ಮಾರ್ಚ್‌ ಹಾಗೂ ಈ ವರ್ಷದ ಮಾರ್ಚ್‌ನ ಮಟ್ಟ ಗಮನಿಸಿದರೆ, ಬಂಟ್ವಾಳದಲ್ಲಿ 0.98 ಮೀ., ಬೆಳ್ತಂಗಡಿಯಲ್ಲಿ 0.18 ಮೀ., ಮಂಗಳೂರಿನಲ್ಲಿ 3.06 ಮೀ., ಪುತ್ತೂರಿನಲ್ಲಿ 1.41 ಮೀ., ಸುಳ್ಯದಲ್ಲಿ 0.87ರಷ್ಟು ಕುಸಿತ ಕಂಡಿದೆ.

ಒಂದೇ ತಿಂಗಳಲ್ಲಿ ಇಳಿಮುಖ!
2019ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಅಂತರ್ಜಲ ಮಟ್ಟ ಗಮನಿಸಿದರೆ ನಾಲ್ಕು ತಾಲೂಕುಗಳಲ್ಲಿ ಕುಸಿತವಾಗಿದೆ. ಬಂಟ್ವಾಳ 1.38 ಮೀ., ಬೆಳ್ತಂಗಡಿಯಲ್ಲಿ 1.18 ಮೀ., ಮಂಗಳೂರಿನಲ್ಲಿ 2.1 ಮೀ., ಸುಳ್ಯದಲ್ಲಿ 1.23 ಮೀ.ಇಳಿಕೆ ಕಂಡಿದ್ದರೆ ಪುತ್ತೂರಿನಲ್ಲಿ ಮಾತ್ರ 0.14 ಮೀ. ಏರಿಕೆ ಕಂಡಿದೆ.

ಜಿಲ್ಲೆಯಲ್ಲಿ 1.03 ಮೀ. ಕುಸಿತ
2018 ಮಾರ್ಚ್‌ ಮತ್ತು 2019ರ ಮಾರ್ಚ್‌ ಅಂತರ್ಜಲ ಮಟ್ಟ ಗಮನಿಸಿದರೆ ಜಿಲ್ಲಾ ಅಂಕಿ ಅಂಶದ ಪ್ರಕಾರ 1.03ರಷ್ಟು ಕುಸಿತ ಕಂಡಿದೆ. ಜಿಲ್ಲಾಮಟ್ಟದಲ್ಲಿ ಮಾರ್ಚ್‌ ತಿಂಗಳಲ್ಲಿ 2018ರಲ್ಲಿ 12.94 ಮೀ.ಹಾಗೂ 2019ರಲ್ಲಿ 14.24 ಮೀ. ದಾಖಲಾಗಿದೆ. ಜನವರಿಯಿಂದ ಮಾರ್ಚ್‌ ತನಕದ ಪ್ರತಿ ತಿಂಗಳ ಜಲಮಟ್ಟದಲ್ಲಿಯೂ ಕುಸಿತವೇ ದಾಖಲಾಗಿದೆ.

Advertisement

ಕುಸಿತವಾಗಿದೆ
ಒಂದು ತಿಂಗಳ ಅಂಕಿ ಅಂಶ ಪರಿಗಣಿಸಿದರೆ ಈ ವರ್ಷ ಕುಸಿತ ಕಂಡಿದೆ. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ.
 - ಜಾನಕಿ, ಭೂ ವಿಜ್ಞಾನಿ, ಅಂತರ್ಜಲ ವಿಭಾಗ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next