Advertisement

ನೇಗಿಲ ಯೋಗಿ,ದುಡಿಮೆಗೆ ಬಲ

01:15 AM Jun 02, 2020 | Sriram |

ಹೊಸದಿಲ್ಲಿ: ಕೋವಿಡ್-19ದಿಂದ ಕುಸಿದಿದ್ದ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಕೆಲವು ದಿನಗಳ ಹಿಂದಷ್ಟೇ 20 ಲಕ್ಷ ಕೋ.ರೂ.ಗಳ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದ ಕೇಂದ್ರ ಸರಕಾರ ಈಗ ಅನ್ನದಾತನ ಕಷ್ಟ ದೂರವಾಗಿಸಲು ಮತ್ತು ದುಡಿಯುವ ಕೈಗಳಿಗೆ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ.

Advertisement

ಸೋಮವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಇದಕ್ಕಾಗಿ ಕೆಲವು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ “ಹಳ್ಳಿಗಳು, ಬಡವ ಮತ್ತು ರೈತ’ ಎಂಬ ಪರಿಕಲ್ಪನೆಯಡಿ ರೈತರ 14 ಖಾರಿಫ್ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಲಾಭ
01. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಪ್ರಮುಖ ಖಾರಿಫ್ ಅಥವಾ ಬೇಸಗೆಯ 14 ಬೆಳೆಗಳಿಗೆ ಬೆಂಬಲ ಬೆಲೆಯನ್ನು 2020-21ನೇ ವರ್ಷಕ್ಕೆ ಅನ್ವಯವಾಗುವಂತೆ ಶೇ.150ರ ವರೆಗೆ ಹೆಚ್ಚಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ನೀಡಿದ್ದ ವಾಗ್ಧಾನವನ್ನು ಪೂರೈಸುವತ್ತ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಇದರನ್ವಯ ರೈತರ ಆದಾಯ ಶೇ. 50ರಿಂದ 83ರಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಎಷ್ಟೆಷ್ಟು ಹೆಚ್ಚಳ?: ಭತ್ತದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 53 ರೂ. ಹೆಚ್ಚಳ; ಇನ್ನು ಪ್ರತಿ ಕ್ವಿಂಟಾಲ್‌ಗೆ 1,868 ರೂ. ಬೆಲೆ ಸಿಗಲಿದೆ. ಹತ್ತಿಗೆ 260 ರೂ. ಹೆಚ್ಚಳ, ಪ್ರತಿ ಕ್ವಿಂಟಾಲ್‌ಗೆ 5,515 ರೂ. ಸಿಗಲಿದೆ. ಕಡಲೆಗೆ ಪ್ರತಿ ಕ್ವಿಂಟಾಲ್‌ಗೆ 6,000 ರೂ. ಮತ್ತು ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 2,620 ರೂ.ಗಳಿಗೆ ನಿಗದಿಗೊಳಿಸಲಾಗಿದೆ. ಇದರಿಂದ ಕಚ್ಚಾ ಧಾನ್ಯಗಳಾದ ಸಜ್ಜೆ, ಉದ್ದು, ತೊಗರಿ ಬೆಳೆಗಾರರ ಆದಾಯ ಕ್ರಮವಾಗಿ ಶೇ.83, ಶೇ.58 ಮತ್ತು ಶೇ.53 ಹೆಚ್ಚಲಿದೆ. ರಾಗಿ, ಉದ್ದಿನ ಬೇಳೆ, ಕಡಲೆ ಬೀಜ, ಸೋಯಾಬೀನ್‌ ಬೆಂಬಲ ಬೆಲೆಗಳೂ ಶೇ.50ರಷ್ಟು ಹೆಚ್ಚಾಗಲಿವೆ.

02.ಸಾಲದ ಗಡುವು ವಿಸ್ತರಣೆ
ರೈತರ 3 ಲಕ್ಷ ರೂ. ವರೆಗಿನ ಅಲ್ಪಾವಧಿ ಬೆಳೆ ಸಾಲ ಮತ್ತು ಇತರ ಕೃಷಿ ಸಂಬಂಧಿ ಚಟುವಟಿಕೆ ಸಾಲಗಳ ಮರುಪಾವತಿ ಗಡುವು ಆಗಸ್ಟ್‌ 31ರ ವರೆಗೆ ವಿಸ್ತರಣೆ. ಶೇ. 2ರಷ್ಟು ಬಡ್ಡಿ ಮನ್ನಾ , ನಿಗದಿತ ಅವಧಿಯಲ್ಲಿ ಸಾಲ ಪಾವತಿಸಿದರೆ ಶೇ. 3ರಷ್ಟು ಪ್ರಾಂಪ್ಟ್ ರೀ-ಪೇಮೆಂಟ್‌ ಇನ್ಸೆಂಟಿವ್‌ (ಪಿಆರ್‌ಐ).

Advertisement

ಎಂಎಸ್‌ಎಂಇಗೆ ಮತ್ತಷ್ಟು ಶಕ್ತಿ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನವನ್ನು ಮತ್ತೆ ಪರಿಷ್ಕರಿಸಲಾಗಿದೆ. 1 ಕೋಟಿ ರೂ. ಬಂಡವಾಳ, 5 ಕೋಟಿ ರೂ.ವರೆಗಿನ ವಾರ್ಷಿಕ ವಹಿವಾಟಿನ ಕಂಪೆನಿಯನ್ನು ಇನ್ನು ಸೂಕ್ಷ್ಮ ಎಂದು ಪರಿಗಣಿಸಲಾಗುತ್ತದೆ.

ಸಣ್ಣ ಕೈಗಾರಿಕೆಗಳಿಗೆ ಇದ್ದ ಮಿತಿಯನ್ನು 10 ಕೋ.ರೂ. ಬಂಡವಾಳ ಮತ್ತು 50 ಕೋ.ರೂ. ವಹಿವಾಟಿಗೆ ಹೆಚ್ಚಿಸಲಾಗಿದೆ. ಮಧ್ಯಮ ಕೈಗಾರಿಕೆಗಳಿಗೆ ಇದ್ದ ಮಿತಿಯನ್ನು ಪರಿಷ್ಕರಿಸಿ 50 ಕೋಟಿ ರೂ. ಬಂಡವಾಳ ಮತ್ತು 250 ಕೋಟಿ ರೂ. ವಹಿವಾಟಿಗೆ ವಿಸ್ತರಿಸಲಾಗಿದೆ.

01. ಈ ಕ್ಷೇತ್ರಕ್ಕೆ ಪ್ಯಾಕೇಜ್‌ನಡಿ ಘೋಷಿಸಲಾಗಿದ್ದ 20 ಸಾವಿರ ಕೋಟಿ ರೂ. ಸಾಲ ಸೌಲಭ್ಯ ಮತ್ತು  50 ಸಾವಿರ ಕೋಟಿ ರೂ.ವರೆಗಿನ ಈಕ್ವಿಟಿ ಇನ್‌ಫ್ಯೂಷನ್‌ ಸೌಲಭ್ಯಗಳಿಗೆ ಸಂಪುಟ ಸಮ್ಮತಿ.

02.ಎಂಎಸ್‌ಎಂಇಗಳು ಉತ್ಪನ್ನಗಳ ವಿದೇಶಿ ರಫ್ತಿನಿಂದ ಗಳಿಸುವ ಲಾಭವನ್ನು ವಾರ್ಷಿಕ ವಹಿವಾಟಿನ ಲೆಕ್ಕ ವೆಂದು ಪರಿಗಣಿಸದಿರಲು ನಿರ್ಧಾರ. ವಹಿವಾಟನ್ನು ವಾರ್ಷಿಕ ವಹಿವಾಟಿನಲ್ಲಿ ಸೇರಿಸದಿರುವ ಮತ್ತೂಂದು ಮಹತ್ವದ ನಿರ್ಧಾರ. ಜತೆಗೆ ಎಂಎಸ್‌ಎಂಇ ರಂಗದ ಉತ್ಪಾದನೆ ಮತ್ತು ಸೇವಾ ವಲಯಗಳನ್ನು ಒಂದೇ ರೂಪದಲ್ಲಿ ಪರಿಗಣನೆ.

ಸಣ್ಣ, ಬೀದಿ ವ್ಯಾಪಾರಕ್ಕೆ ನೆರವು
01.”ಸ್ವ-ನಿಧಿ’ ಸಾಲ ಸೌಲಭ್ಯ
ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆಗೆ “ಪ್ರಧಾನ ಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮ ನಿರ್ಭರ ನಿಧಿ (ಪಿಎಂ ಸ್ವ-ನಿಧಿ)’ ಎಂಬ ಹೆಸರು. ಇದಕ್ಕಾಗಿ 50 ಸಾವಿರ ಕೋಟಿ ರೂ. ಮೀಸಲು. ಇದರಡಿ ಬೀದಿ ವ್ಯಾಪಾರಿಗಳು, ಚಮ್ಮಾರರು, ಸೆಲೂನ್‌ ಮಾಲಕರು 10 ಸಾವಿರ ರೂ. ಸಾಲ ಪಡೆದು, ತಿಂಗಳ ಕಂತಾಗಿ ಮರುಪಾವತಿಸಬಹುದು. ಇದು ಒಂದು ವರ್ಷ ಅವಧಿಯದ್ದು, ಶೇ. 7ರಷ್ಟು ಬಡ್ಡಿ ಸಬ್ಸಿಡಿ ಸಿಗಲಿದೆ. ಅವಧಿಪೂರ್ವ ಸಾಲ ಮರುಪಾವತಿಗೆ ದಂಡ ಇಲ್ಲ. ಸುಮಾರು 50 ಲಕ್ಷ ಜನರಿಗೆ ಇದು ಉಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.

02.ಕ್ಯಾಶ್‌ಲೆಸ್‌ ವ್ಯಾಪಾರಕ್ಕೆ ಅವಕಾಶ
ಬೀದಿ ಬದಿ ವ್ಯಾಪಾರಿಗಳನ್ನು ಡಿಜಿಟಲ್‌ ಪೇಮೆಂಟ್‌ ವ್ಯಾಪ್ತಿಯೊಳಗೆ ತರುವ ಉದ್ದೇಶದಿಂದ ಪ್ರತ್ಯೇಕ ವೆಬ್‌ ಪೋರ್ಟಲ್‌ ಮತ್ತು ಮೊಬೈಲ್‌ ಆ್ಯಪ್‌ ತರಲಾಗುತ್ತದೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ (ಎಸ್‌ಬಿಡಿಬಿಐ) ಅಡಿಯಲ್ಲಿ ಇವು ಕಾರ್ಯನಿರ್ವಹಿಸಲಿವೆ. ಇದರಡಿ ಸೌಲ ಸೌಲಭ್ಯಗಳನ್ನು ಎಸ್‌ಬಿಡಿಬಿಐಯ ಉದ್ಯೋಗ್‌ ಮಿತ್ರ ಪೋರ್ಟಲ್‌ನೊಂದಿಗೆ ಜೋಡಿಸಲಾಗುತ್ತದೆ. ಎಸ್‌ಬಿಡಿಬಿಐಯು ಸಾಲ ನೀಡಿಕೆ ಪ್ರಕ್ರಿಯೆಯನ್ನು ನೋಡಿಕೊಂಡರೆ, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪೈಸಾ ಪೋರ್ಟಲ್‌ನ ಮೂಲಕ ಸಣ್ಣ ವ್ಯಾಪಾರಿಗಳ ಸಾಲದ ಮೇಲಿನ ಬಡ್ಡಿಯ ಸಬ್ಸಿಡಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ.

ಸಂಪುಟ ಸಭೆಯ ತೀರ್ಮಾನಗಳು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತು ನೀಡಲಿವೆ. ರೈತರಿಗೆ, ಬೀದಿ ವ್ಯಾಪಾರಿಗಳಿಗೆ, ಎಂಎಸ್‌ಎಂಇ ಕ್ಷೇತ್ರಕ್ಕೆ ಈ ಮೂಲಕ ಹೆಚ್ಚಿನ ಶಕ್ತಿ ತುಂಬಲಾಗಿದೆ. ರೈತರ ಆದಾಯವನ್ನು ಒಂದೂವರೆ ಪಟ್ಟು ಹೆಚ್ಚಿಸುವುದರ ಜತೆಗೆ, ಈ ಹಿಂದೆ ನೀಡಿದ್ದ ವಾಗ್ಧಾನವನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next