ವಾಷಿಂಗ್ಟನ್/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ಥಾನ ಮತ್ತಷ್ಟು ದಾಳಿಗಳನ್ನು ಮುಂದುವರಿಸಲಿದೆ. ಹೀಗೆಂದು ಅಮೆರಿಕದ ಸಂಸತ್‌ನಲ್ಲಿ ಸಲ್ಲಿಸಲಾಗಿರುವ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಭಾರತದ ಮಿತ್ರ ರಾಷ್ಟ್ರವಾಗಿರುವ ಅಫ್ಘಾನಿಸ್ಥಾನ, ಅಮೆರಿಕದ ಮೇಲೂ ದಾಳಿ ನಡೆಯಲಿದೆ ಎಂದು ಅದರಲ್ಲಿ ಎಚ್ಚರಿಕೆ ನೀಡಲಾಗಿದೆ. ಅಮೆರಿಕ ಗುಪ್ತಚರ ಸಂಸ್ಥೆಯ ನಿರ್ದೇಶಕ ಡ್ಯಾನ್ ಕೋಸ್ಟ್ಸ್ ಈ ವರದಿ ನೀಡಿದ್ದಾರೆ.
ಭಯೋತ್ಪಾದಕರ ಉಪಟಳ ಕುರಿತಂತೆ, “ವಿಶ್ವದಾದ್ಯಂತ ಆವರಿಸಿರುವ ಭೀತಿಯ ಮೌಲ್ಯಮಾಪನ’ ಎಂಬ ವರದಿಯನ್ನು ಅಮೆರಿಕದ ಸಂಸತ್ತಿಗೆ ಸಲ್ಲಿಸಿರುವ ಅವರು, “ಪಾಕಿಸ್ಥಾನವನ್ನು ತಮ್ಮ ಸ್ವರ್ಗವನ್ನಾಗಿಸಿ ಕೊಂಡಿರುವ ಭಯೋತ್ಪಾದಕರು, ಭಾರತ ಮತ್ತು ಆಫ್ಘಾನಿಸ್ಥಾನಗಳ ಮೇಲೆ ನಿರಂತರ ದಾಳಿಗಳನ್ನು ಸಂಘಟಸಲಿದ್ದಾರೆ. ಅಮೆರಿಕದ ಮಿತ್ರ ರಾಷ್ಟ್ರಗಳೆಂಬ ಹಣೆಪಟ್ಟಿ ಹೊಂದಿರುವ ರಾಷ್ಟ್ರಗಳ ಮೇಲೂ ಇಂಥ ದಾಳಿಗಳು ತಪ್ಪಿದ್ದಲ್ಲ’ ಎಂದಿದ್ದಾರೆ.
ಧರ್ಮದ ಬಣ್ಣ ಬೇಡ: “ಹುತಾತ್ಮ ಯೋಧರಿಗೆ ಧರ್ಮದ ಬಣ್ಣ ಬಳಿಯ ಬೇಡಿ. ಸೇನೆಯಲ್ಲಿ ಅಂಥ ವಾತಾವರಣವಿಲ್ಲ. ಹೀಗೆ, ಸೈನಿಕರನ್ನು ಧರ್ಮದ ಆಧಾರದಲ್ಲಿ ವಿಭಾಗಿಸುವಂಥ ಹೇಳಿಕೆ ಕೊಡುವವರಿಗೆ ಸೇನೆಯ ಬಗ್ಗೆ ಅರಿವಿಲ್ಲ ಎಂದೇ ಅರ್ಥ’ ಎಂದು, ಹೈದರಾಬಾದ್ ಸಂಸದ ಓವೈಸಿಗೆ ಸೇನಾಧಿಕಾರಿ ಲೆಫ್ಟನೆಂಟ್ ಜನರಲ್ ದೇವರಾಜ್ ಅನುº ತಿರುಗೇಟು ನೀಡಿದ್ದಾರೆ.
ಮಂಗಳವಾರ ಹೇಳಿಕೆ ನೀಡಿದ್ದ ಓವೈಸಿ, “ಇತ್ತೀಚೆಗೆ ನಡೆದ ಸಂಜುವಾನ್ ದಾಳಿಯಲ್ಲಿ ಮೃತಪಟ್ಟ ಆರು ಭಾರತೀಯ ಯೋಧರಲ್ಲಿ ಐವರು ಮುಸ್ಲಿಮರಾಗಿದ್ದು, ಇದು ಭಾರತೀಯ ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸುವವರಿಗೆ ಸೂಕ್ತ ಉತ್ತರ’ ಎಂದಿದ್ದರು.
ಇದೇ ವೇಳೆ 2013ರಿಂದ ಈ ವರೆಗೆ ಎಲ್‌ಓಸಿ ಬಳಿ ಭಾರತ ಸೇನೆಯ ಗುಂಡಿನ ದಾಳಿಗೆ 66 ಪಾಕ್ ನಾಗರಿಕರು ಅಸುನೀಗಿದ್ದಾರೆ. ಜತೆಗೆ 228 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವ ಖುರ್ರಮ್ ದಸ್ತ ಗೀರ್ ಖಾನ್ ಆರೋಪಿಸಿದ್ದಾರೆ.