Advertisement
ಇದರ ಬೆನ್ನಿಗೇ, ಸೆರೆಸಿಕ್ಕ ಜೆಎಂಬಿ ಸದಸ್ಯರ ಇತರ ಸಹಚರರು ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ನೀಲಮಣಿ ಎನ್ ರಾಜು ಅವರು ಮಹಾನಗರಗಳ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು, ಜಿಲ್ಲಾ ಎಸ್‌ಪಿಗಳು ಸೇರಿದಂತೆ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಗುರುವಾರ ನಡೆಸಲಿದ್ದಾರೆ. ಸಭೆಯಲ್ಲಿ ಉಗ್ರಗಾಮಿ ಚಟುವಟಿಕೆ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಉಗ್ರ ಚಟುವಟಿಕೆ ನಿಗ್ರಹ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Related Articles
ಅಲ್‌ಖೈದಾ ಸಂಘಟನೆಯ ಭಾರತೀಯ ಅಂಗ ಸಂಸ್ಥೆ ಎಕ್ಯೂಐಎಸ್ (ಅಲ್‌ಖೈದಾ ಇಂಡಿಯನ್ ಸಬ್ ಕಾಂಟಿನೆಂಟ್) ಹಾಗೂ ಅಲ್ -ಮುತ್ತಕೀನ್ – ಫೋರ್ಸ್ (ಎಎಂಎಫ್) ಸಂಘಟನೆಗಳು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿರುವ ಬಗ್ಗೆ ಮೈಸೂರು ಕೋರ್ಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ ಎನ್‌ಐಎ ಬಯಲಿಗೆಳೆದಿತ್ತು. ಇದೀಗ, ಜೆಎಂಬಿ ಉಗ್ರರ ಬಂಧನದ ಬಳಿಕ ಮತ್ತಷ್ಟು ಎಚ್ಚೆತ್ತುಕೊಂಡಿರುವ ಗುಪ್ತಚರ ದಳ ರಾಜ್ಯದಲ್ಲಿ ಉಗ್ರ ಸಂಘಟನೆಗಳ ಸ್ಲಿàಪರ್ ಸೆಲ್‌ಗಳ ಮೂಲ ಹುಡುಕಲು ಮುಂದಾಗಿದೆ.
Advertisement
ತಮಿಳುನಾಡಿನ ಕೊಯಮುತ್ತೂರು ಮೂಲದ ಅಲ್ -ಮುತಾಕಿನ್ ಫೋರ್ಸ್ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಅಲ್ಲದೆ, ಈ ಬಗ್ಗೆ ತಮಿಳುನಾಡಿನ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆದಿದೆ. ಅಲ್ಲದೆ, ಸದ್ಯದಲ್ಲಿಯೇ ಗುಪ್ತಚರ ದಳದ ತಂಡವೊಂದು ತಮಿಳುನಾಡಿಗೆ ತೆರಳಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ಉದಯವಾಣಿಗೆ ತಿಳಿಸಿವೆ.
– ಮಂಜುನಾಥ ಲಘುಮೇನಹಳ್ಳಿ