Advertisement

ಅಂತ್ಯಸಂಸ್ಕಾರ ಸಹಾಯಧನ ಸದ್ದಿಲ್ಲದೆ ಸ್ಥಗಿತ!

01:26 AM Mar 22, 2022 | Team Udayavani |

ಬಂಟ್ವಾಳ: ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆಂದು ಸರಕಾರವು ನೀಡುವ 5 ಸಾವಿರ ರೂ. ಮೊತ್ತ ಕೈಸೇರುವಾಗ ವಿಳಂಬವಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ಸರಕಾರ ಸದ್ದಿಲ್ಲದೆ ಯೋಜನೆಯ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಿದೆ.

Advertisement

ಮಾಹಿತಿ ಪ್ರಕಾರ ಆಗಸ್ಟ್‌ ಅಂತ್ಯದ ಬಳಿಕ ಅರ್ಜಿ ಸ್ವೀಕರಿಸಿಲ್ಲ. ಅದಕ್ಕಿಂತ ಹಿಂದೆ ಅರ್ಜಿ ಸಲ್ಲಿರುವವರಿಗೆ ವಿಳಂಬವಾಗಿ ನೀಡ ಲಾಗುತ್ತಿದೆ. ಪ್ರಸ್ತುತ ಸಾಫ್ಟ್‌ವೇರ್‌ನಲ್ಲಿ ಅರ್ಜಿ ಸ್ವೀಕರಿಸುವ ಆಯ್ಕೆಯೇ ಸ್ಥಗಿತಗೊಂಡಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ನೀಡಿದೆ.

ತಿಥಿ ಕಳೆದರೂ ಬರುತ್ತಿಲ್ಲ ಹಣ!
ಸರಕಾರವು 2006ರಲ್ಲಿ ಅಂತ್ಯಸಂಸ್ಕಾರ ಸಹಾಯನಿಧಿ ಯೋಜನೆ ಆರಂಭಿಸಿದ್ದು, ತಹಶೀ ಲ್ದಾರರ ಮೂಲಕ ನೀಡುತ್ತಿತ್ತು. ಬಡವರು ಮೃತ ಪಟ್ಟಾಗ ಅಂತ್ಯಸಂಸ್ಕಾರಕ್ಕೆ ಆರ್ಥಿಕ ತೊಂದರೆ ಎದುರಾಗಬಾರದು ಎಂಬುದು ಯೋಜನೆ ಉದ್ದೇಶ. ಆದರೆ ಅಂತ್ಯ ಸಂಸ್ಕಾರದ ಅನುದಾನ ವರ್ಷದ ತಿಥಿ ಕಳೆದರೂ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಅಂತ್ಯವಿಧಿಗೆ ಆರಂಭದಲ್ಲಿ 1 ಸಾವಿರ ರೂ. ನೀಡುತ್ತಿದ್ದು, 2015ರ ಎಪ್ರಿಲ್‌ 1ರಿಂದ 5 ಸಾವಿರ ರೂ.ಗೆ ಏರಿಸಲಾಗಿತ್ತು. ಈಗ ಸದ್ದಿಲ್ಲದೆ ಅರ್ಜಿ ಸ್ವೀಕಾರವನ್ನೇ ನಿಲ್ಲಿಸಿರುವುದರಿಂದ ಒಂದಲ್ಲ ಒಂದು ದಿನ 5 ಸಾವಿರ ರೂ. ಕೈ ಸೇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮಂದಿಗೆ ನಿರಾಸೆಯಾಗಿದೆ.

ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಲಭ್ಯ
ಸರಕಾರವು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಮೂಲಕ ಬಿಪಿಎಲ್‌ ಕುಟುಂಬದ ಮುಖ್ಯಸ್ಥ ಮರಣ ಹೊಂದಿದಲ್ಲಿ 20 ಸಾವಿರ ರೂ. ನೀಡುವ ಯೋಜನೆ ಈಗಲೂ ಜಾರಿಯಲ್ಲಿದ್ದು, ಕಂದಾಯ ಇಲಾಖೆ ಅರ್ಜಿ ಸ್ವೀಕರಿಸುತ್ತಿದೆ. ಕುಟುಂಬದ ಇತರ ಸದಸ್ಯರು ಮೃತಪಟ್ಟರೆ ಈ ಸಹಾಯಧನ ಸಿಗುವುದಿಲ್ಲ. ಅಂತ್ಯಸಂಸ್ಕಾರ ಯೋಜನೆಯಲ್ಲಿ ಕುಟುಂಬದ ಯಾರು ಮೃತಪಟ್ಟರೂ 5 ಸಾವಿರ ರೂ. ಲಭ್ಯವಾಗುತ್ತಿತ್ತು.

Advertisement

ಕೆಲವು ದಿನಗಳ ಹಿಂದೆ ನನ್ನ ತಾಯಿ ಮೃತಪಟ್ಟಾಗ ಅಂತ್ಯಸಂಸ್ಕಾರ ಯೋಜನೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಮಕರಣಿಕರ ಕಚೇರಿಗೆ ತೆರಳಿ ವಿಚಾರಿಸಿದಾಗ, ಆ ಯೋಜನೆ ಈಗ ಇಲ್ಲ. ಕೊರೊನಾ ಬಳಿಕ ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
– ಪ್ರವೀಣ್‌ ಎಸ್‌.,
ಸಹಾಯಧನ ಸಿಗದ ಸಂತ್ರಸ್ತ

ಕುಟುಂಬದ ಯಜಮಾನ ಮೃತ ಪಟ್ಟರೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಮೂಲಕ ನೀಡುವ ನೆರವು ಜಾರಿಯಲ್ಲಿದ್ದು, ಅಂತ್ಯಸಂಸ್ಕಾರ ಯೋಜನೆ ಅನುದಾನ ಬರುವುದಕ್ಕೆ ಬಾಕಿ ಇತ್ತು. ಆದರೆ ಅದು ಸ್ಥಗಿತಗೊಂಡಿರುವ ಕುರಿತು ಪರಿಶೀಲಿಸುತ್ತೇನೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಡಿ.ಸಿ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next