ಸಂತೆಮರಹಳ್ಳಿ: ಆಧುನಿಕ ಯುಗದ ಭರಾಟೆಯಲ್ಲಿ ಮನುಷ್ಯ ಹೆಚ್ಚು ತಲ್ಲೀನನಾಗಿದ್ದಾನೆ. ಈತನಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಮನಃಶಾಂತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂಥ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಪ್ರಶಂಸನೀಯ ಎಂದು ಶಾಸಕ ಎನ್. ಮಹೇಶ್ ಹೇಳಿದರು.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖುಷಿಯಾಗಿರುವುದೇ ಜೀವನ: ನಿರಾಳತೆಯೇ ಜೀವನ ಬೆಳಕಾಗಿದೆ. ಸುಳ್ಳು, ಕೆಟ್ಟ ಮಾತು, ಕೃತಿಯೇ ಸಾವಾಗಿದೆ. ಜೀವನ ಸತ್ಯವಾಗಿದ್ದು, ಖುಷಿಯಾಗಿರುವುದೇ ನಿಜವಾದ ಜೀವನವಾಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಖುಷಿ ಮಾಯವಾಗುತ್ತಿದೆ. ಕ್ರೌರ್ಯ ತಾಂಡವವಾಗುತ್ತಿದೆ. ಇದಕ್ಕೆ ನಮ್ಮ ಸುತ್ತಲಿನ ಪರಿಸರವೇ ಕಾರಣವಾಗಿದೆ ಎಂದರು.
ಮಕ್ಕಳಿಗೆ ಮೊಬೈಲ್ ನೀಡಬೇಡಿ: ಇಂದು ಮಹಿಳೆಯರು ಧಾರಾವಾಹಿಯ ವೀಕ್ಷಣೆ ಮಾಡುವುದು ಚಾಳಿ ಮಾಡಿಕೊಂಡಿದ್ದಾರೆ. ಸಾಧ್ಯವಾದಷ್ಟು ಸಮಾಜದ ಸ್ವಾಸ್ಥ್ಯ ಕದಡುವ ಇಂತಹ ಕಾರ್ಯಕ್ರಮಗಳಿಂದ ದೂರವಿರಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಸಂಸ್ಕಾರವನ್ನು ತಿಳಿಹೇಳುವ ಕೆಲಸವನ್ನು ಮಾಡಬೇಕು. ಪರಿಸರ, ಜಲ, ಮಣ್ಣು, ಕೃಷಿಯ ಬಗ್ಗೆ ಧರ್ಮಸ್ಥಳ ಸಂಸ್ಥೆಯ ಕಾಳಜಿ ಹೆಚ್ಚಾಗಿದೆ. ಇದರೊಂದಿಗೆ ಆರ್ಥಿಕವಾಗಿ ಸಬಲರಾಗಲು ನೀಡುವ ಕಡಿಮೆ ಬಡ್ಡಿಯ ಸಾಲಗಳು ಲಕ್ಷಾಂತರ ಕುಟುಂಬಗಳಿಗೆ ಸಹಕಾರಿಯಾಗಿವೆ. ಇದರೊಂದಿಗೆ ಇಂತಹ ಜ್ಞಾನ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಇತರರಿಗೆ ಮಾದರಿ: ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ದೇಶದ ಇತಿಹಾಸದಲ್ಲೇ ಚತುರ್ದಾನಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಅನ್ನದಾನ, ವಿದ್ಯಾದಾನ, ಅಕ್ಷರದಾನ ಹಾಗೂ ನೊಂದವರ ಪಾಲಿಗೆ ಅಭಯದಾನವನ್ನು ನೀಡುವ ಮಹತ್ತರ ಕೆಲಸವನ್ನು ವೀರೇಂದ್ರ ಹೆಗ್ಗಡೆ ಮಾಡುತ್ತಾ ಬಂದಿದ್ದಾರೆ. ಇಂತಹ ಕೆಲಸಗಳು ಇತರರಿಗೆ ಮಾದರಿಯಾಗಬೇಕು ಎಂದು ಆಶಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಕೆಸ್ತೂರು ಮಠದ ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಂಸ್ಥೆಯಿಂದ ನೀಡುವ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸರಿತಾ, ತಾಪಂ ಸದಸ್ಯೆ ಪುಟ್ಟುಕುಮಾರ್, ಮುಖಂಡ ಸಿದ್ದರಾಜು, ಪೂಜಾ ಸಮಿತಿ ಅಧ್ಯಕ್ಷ ಪುಟ್ಟಮಲ್ಲಪ್ಪ ತಾಲೂಕು ಯೋಜನಾಧಿಕಾರಿ ಸತೀಶ್, ಸಂಸ್ಥೆಯ ನಿಶ್ಚಿತಾ, ಅನಿತಾ, ಪ್ರವೀಣ್, ಶ್ರೀನಿವಾಸ್, ಕಿರಣ್, ಸರ್ವೇಶ್ ಇತರರು ಇದ್ದರು.