Advertisement

ಸರ್ಕಾರಿ ಗೌರವಗಳೊಂದಿಗೆ ಯೋಧ ವೀರೇಶ ಅಂತ್ಯಕ್ರಿಯೆ

10:44 PM Dec 28, 2019 | Lakshmi GovindaRaj |

ಗದಗ/ಹೊಳೆಆಲೂರ: ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಸುಬೇದಾರ್‌ ವೀರೇಶ ಭೋಜಪ್ಪ ಕುರಹಟ್ಟಿ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಕರಮುಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.

Advertisement

ದೆಹಲಿ, ಪುಣೆ ಮಾರ್ಗವಾಗಿ ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಸುಬೇದಾರ್‌ ವೀರೇಶ ಅವರ ಪಾರ್ಥಿವ ಶರೀರ ಕರಮುಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ತಾಯಿ ಕಾಶವ್ವ, ಪತ್ನಿ ಲಲಿತಾ, ಪುತ್ರ ಮನೋಜ್‌ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

“ದುರ್ವಿ ಧಿಯೇ ನನ್ನ ಯಜಮಾನನನ್ನು ಕಿತ್ತುಕೊಂಡು ನಮ್ಮನ್ನು ತಬ್ಬಲಿಯನ್ನಾಗಿ ಸಿ ದೆಯಲ್ಲ’ ಎಂದು ಪತ್ನಿ ಲಲಿತಾ ಶವಪೆಟ್ಟಿಗೆ ಅಪ್ಪಿಕೊಂಡು ಕಣ್ಣೀರಿಟ್ಟರು. ಪುತ್ರ ಮನೋಜ್‌ ಕೂಡ ಶವ ಪೆಟ್ಟಿಗೆ ಮೇಲೆ ತಲೆ ಇಟ್ಟು ರೋಧಿಸುತ್ತಿರುವ ದೃಶ್ಯ ನೆರೆದವರ ಕಣ್ಣುಗಳನ್ನು ತೇವಗೊಳಿಸಿತು.

ಮೊಳಗಿದ ಘೋಷಣೆ: ಬಳಿಕ, ಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಪುಷ್ಪಗಳಿಂದ ಅಲಂಕೃತ ತೆರೆದ ವಾಹನದಲ್ಲಿ ಯೋಧನ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಜನರು, ಸುತ್ತಲಿನ ಗ್ರಾಮಸ್ಥರು ಭಾರತ ಮಾತಾ ಕೀ ಜೈ, ಹುತಾತ್ಮ ವೀರೇಶ ಕುರಹಟ್ಟಿ ಅವರಿಗೆ ಜಯವಾಗಲಿ, ವೀರಪುತ್ರ ಅಮರ್‌ ರಹೇ.. ಅಮರ್‌ ರಹೇ..ಎಂಬ ಘೋಷಣೆ ಕೂಗಿದರು. ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ 18ನೇ ಮರಾಠಾ ಲೈಟ್‌ ಇನ್ಫೆಂಟ್ರಿ ರೆಜಿಮೆಂಟ್‌ನ ಯೋಧರು ಕುಶಾಲತೋಪು ಹಾರಿಸಿ ಅಂತಿಮ ನಮನ ಸಲ್ಲಿಸಿದರು.

ಸುಬೇದಾರ್‌ ವೀರೇಶ ಸ್ಮರಣಾರ್ಥ ಸ್ಮಾರಕ: ಸುಬೇದಾರ ವೀರೇಶ್‌ ಭೋಜಪ್ಪ ಕುರಹಟ್ಟಿ ಅವರು ಭಾರತ ಮಾತೆ ರಕ್ಷಣೆಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದು, ಅವರ ಹೆಸರನ್ನು ಅಜರಾಮರ ವಾಗಿಸಲು ಕರಮುಡಿ ಗ್ರಾಮದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.ಹುತಾತ್ಮ ಕುರಹಟ್ಟಿ ಅವರ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವೈಯಕ್ತಿಕವಾಗಿ ಘೋಷಿಸಿರುವ 2 ಲಕ್ಷ ರೂ. ಚೆಕ್‌ ಮೂಲಕ ಹಸ್ತಾಂತರಿಸುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next