– ಬೆಳಗಾವಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
– ಕಣ್ಣೀರು ಸುರಿಸುತ್ತಲೇ ಅಣ್ಣನ ಚಿತೆಗೆ ಬೆಂಕಿ ಇಟ್ಟ ತಂಗಿ
– ತಾಯಿ-ಮಗಳ ಸಂಕಷ್ಟಕ್ಕೆ ಸ್ಪಂದಿಸಿದ ಎಸ್‌ಪಿ
– ವಾಹನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು
ಬೆಳಗಾವಿ: ಮೃತ ಪಟ್ಟ ಮಗನ ಶವ ಸುಡಲು ಹಣವಿಲ್ಲದೇ, ಇತರೆ ಶವಗಳನ್ನು ಸುಟ್ಟು ಅಳಿದುಳಿದು ಬಿದ್ದಿದ್ದ ಕಟ್ಟಿಗೆಗಳನ್ನೇ ಕೂಡಿಸಿ ಅಂತ್ಯಸಂಸ್ಕಾರ ನೆರ ವೇರಿಸಿದ ಹೃದಯ ವಿದ್ರಾವಕ ಘಟನೆ ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಜರುಗಿದೆ. ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ವೃದ್ಧ ತಾಯಿ ಕೆಲ ದಿನಗಳ ಹಿಂದೆ ತನ್ನ ಮಗ ಸಾಗರ ಶಿಂಗೆ (33 ವರ್ಷ)ಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸೋಮವಾರ ಮಗ ಚಿಕಿತ್ಸೆ ಫಲಿಸದೆ ಮೃತಪಟ್ಟ. ಕೊರೊನಾ ಲಾಕ್‌ಡೌನ್ ಕಾರಣ ಶವವನ್ನು ತನ್ನೂರಿಗೆ ಕೊಂಡೊಯ್ಯಲಾಗದೆ ನಗರದಲ್ಲೇ ಅಂತ್ಯಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ಬಂತು.
ವೈದ್ಯರ ಸಲಹೆಯಂತೆ ಇಲ್ಲಿಯ ಸದಾಶಿವ ನಗರದ ಸ್ಮಶಾನಕ್ಕೆ ಮಗನ ಮೃತದೇಹವನ್ನು ಆಂಬ್ಯುಲನ್ಸ್‌ನಲ್ಲಿ ತರಲಾಯಿತಾದರೂ ಶವ ಸುಡಲು ಕಟ್ಟಿಗೆಗೆ 1200 ರೂ. ನೀಡಬೇಕಿತ್ತು. ಆದರೆ ಇಷ್ಟೊಂದು ಹಣವಿಲ್ಲದ್ದರಿಂದ ಬೇರೆ ಶವ ಸುಟ್ಟಿದ್ದ ಅರೆಬರೆ ಕಟ್ಟಿಗೆಗಳನ್ನೇ ತಾಯಿ-ಮಗಳು ಆಯ್ದುಕೊಂಡು ತಂದು ಚಿತಾಗಾರ ಮೇಲಿಟ್ಟು ಅಂತಿಮ ನಮನ ಸಲ್ಲಿಸುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಕಣ್ಣೀರು ಸುರಿಸುತ್ತಲೇ ಅಣ್ಣನ ಮೃತದೇಹಕ್ಕೆ ತಂಗಿಯೇ ಬೆಂಕಿ ನೀಡುವುದರ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದಳು. ಈ ತಾಯಿಗೆ ಕರುಳ ಬಳ್ಳಿ ಕಳೆದುಕೊಂಡ ನೋವು ಒಂದೆಡೆ ಕಾಡುತ್ತಿದ್ದರೆ, ಇನ್ನೊಂದೆಡೆ ತನ್ನ ಸ್ವಂತ ಊರು ಸೇರಬೇಕೆಂಬ ಸಂಕಟವೂ ಇತ್ತು. ಈ ವಿಷಯ ತಿಳಿದು ತಾಯಿ-ಮಗಳ ಸಂಕಟಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ವಾಹನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.