Advertisement

ನೇಗಿನಹಾಳ ಬಸವಸಿದ್ಧಲಿಂಗ ಶ್ರೀ ಅಂತ್ಯಕ್ರಿಯೆ

05:02 PM Sep 07, 2022 | Team Udayavani |

ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಭಕ್ತ ಸಾಗರ ಮಧ್ಯೆ ಮಂಗಳವಾರ ನೆರವೇರಿತು.

Advertisement

ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಗಿತ್ತು. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಅಪಾರ ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ಬಂದು ಅಂತಿಮ ದರ್ಶನ ಪಡೆದರು. ಪ್ರತಿಯೊಬ್ಬರು ಸರದಿಯಲ್ಲಿ ನಿಂತು ಅಂತಿಮ ದರ್ಶನ ಪಡೆಯುವಂತೆ ಪೊಲೀಸರು, ಮಠದ ಹಿರಿಯರು ಸೂಕ್ತ ವ್ಯವಸ್ಥೆ ಮಾಡಿದ್ದರು. ಪ್ರತಿಯೊಬ್ಬರಿಗೆ ಸ್ವಾಮೀಜಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಗದಗ ಡಂಬಳದ ಡಾ| ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಯಕ್ಕುಂಡಿ ಪಂಚಾಕ್ಷರ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ಶಿವಮೊಗ್ಗ, ದಾವಣಗೆರೆ ಬಸವಪ್ರಭು ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಸ್ವಾಮೀಜಿಗಳು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ, ಕಾಡಾ ಅಧ್ಯಕ್ಷ ಡಾ| ವಿಶ್ವನಾಥ ಪಾಟೀಲ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಶಿವು ಮೆಟ್ಯಾಲ ಸೇರಿದಂತೆ, ಹಿರಿಯರು, ಬಸವ ಸೇನೆ ಮುಖ್ಯಸ್ಥರು ಪೂಜ್ಯರ ಅಂತ್ಯಕ್ರಿಯೆ ವಿಧಿ ವಿಧಾನಗಳಿಗೆ ಸಹಕರಿಸಿದರು.

ಗ್ರಾಮದಲ್ಲಿ ಮೆರವಣಿಗೆ: ಮಠದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪ್ರಾರ್ಥಿವ ಶರೀರದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಸಹಸ್ರಾರು ಭಕ್ತರು, ಗ್ರಾಮಸ್ಥರು ಕೈ ಮುಗಿದು, ಹೂವು-ಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ಎಸ್‌ಪಿ ಡಾ| ಸಂಜೀವ ಪಾಟೀಲ, ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ಮಹಾನಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ಇಬ್ಬರು ಡಿವೈಎಸ್ಪಿ, ಆರು ಸಿಪಿಐ, ನಾಲ್ಕು ಪಿಎಸ್ಸೈ, 15 ಎಸ್‌ಐ ನೇತೃತ್ವದಲ್ಲಿ 120 ಸಿಬ್ಬಂದಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next