ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ (ರಿ.) ಇದೀಗ ಕೈಗೊಂಡಿರುವ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿನ “ನಿಧಿ ಸಂಗ್ರಹ ಮಹಾ ಅಭಿಯಾನ’ ಕೇವಲ ಭಾರತ ಮಾತ್ರವಲ್ಲ, ವಿಶ್ವ ಪಾರಂಪರಿಕ ಇತಿಹಾಸ ಹಾಗೂ ಸಂಸ್ಕೃತಿಯ ಪುನರುಜ್ಜೀವನದಲ್ಲಿಯೂ ಒಂದು ಮೈಲುಗಲ್ಲು ಎನಿಸುವಂತಹದು. ಶ್ರೀರಾಮ ಜನ್ಮಭೂಮಿಯ ಸನಿಹದಲ್ಲಿಯೇ ಹರಿಯುವ ಸರಯೂ ನದಿಯಂತೆಯೇ ಪೌರಾಣಿಕ ತ್ರೇತಾಯುಗದಿಂದ ವರ್ತಮಾನದ ಕಲಿಯುಗದ ಪ್ರಥಮ ಪಾದದವರೆಗೆ ನಿರಂತರ ಜೋಡಿಸುವ ಕಾಯಕದ ಮಹಾನ್ ಸಂಕಲ್ಪದ ಅಭಿಯಾನ ಇದು.
ಅಯೋಧ್ಯೆಯ 2.77ಎಕ್ರೆಯಷ್ಟು ವಿಶಾಲವಾದ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರಕ್ಕೆ 2020ರ ಆ. 5ರಂದು ಪ್ರಧಾನಿ ಮೋದಿ ಅವರು ವಿಧ್ಯುಕ್ತವಾಗಿ, ಭೂಮಿಪೂಜೆ ನೆರವೇರಿಸಿದ್ದರು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮಾರ್ಗದರ್ಶನದಲ್ಲಿ, ಹಿರಿಯ ವಾಸ್ತುತಜ್ಞ ಶ್ರೀ ಚಂದ್ರಕಾಂತ ಸಂಪೂರರ ತಂಡದ ಉಸ್ತುವಾರಿಯಲ್ಲಿ, ಐ.ಐ.ಟಿ. ಮದ್ರಾಸ್, ರೂರ್ಕಿ ಮುಂತಾದ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಎಲ್ ಆ್ಯಂಡ್ ಟಿ ಕಂಪೆನಿಯಿಂದ ಮಂದಿರ ನಿರ್ಮಾಣ ಕಾರ್ಯ ಶುಭಾರಂಭಗೊಂಡಿದೆ. ಸುಮಾರು 36 ತಿಂಗಳುಗಳ ಅವಧಿಯಲ್ಲಿ ಅಂದಾಜು 300ರಿಂದ 400 ಕೋ. ರೂ. ವೆಚ್ಚದಲ್ಲಿ ಪಂಚಗೋಪುರಗಳನ್ನು ಒಳಗೊಂಡ ಮಂದಿರ ತಲೆ ಎತ್ತಲಿದೆ. ಇದು ವಿಶ್ವದ ಅತ್ಯಂತ ವಿಶಾಲ ಮಂದಿರಗಳಲ್ಲೊಂದಾಗಿರಲಿದೆ. ಅದೇ ರೀತಿ 67.7 ಎಕ್ರೆ ವಿಸ್ತಾರದ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಉದ್ದೇಶಿತ ರಾಮಕಥಾ ಪಾರ್ಕ್‌ನಲ್ಲಿ ರಾಮಾಯಣ ಕಾಲದ ಸಮಗ್ರ ಚಿತ್ರಣದ ಮರುಸೃಷ್ಟಿಯ ಅದ್ಭುತ ಪರಿಕಲ್ಪನೆ 1,000 ಕೋ. ರೂ. ಗಳಿಗೂ ಮಿಕ್ಕಿದ ವೆಚ್ಚದಲ್ಲಿ ಅರಳಲಿದೆ. ಯುನೆಸ್ಕೋ ಮಾನ್ಯತೆ ಹೊಂದಿದ ಗಂಗೆಯ ತಟದ ವಾರಾಣಸಿಯಂತೆ ಅತ್ಯಂತ ಪ್ರಾಚೀನ ನಗರಿಯೂ ಇಕ್ವಾಕು ವಂಶದ ಆಳ್ವಿಕೆಯ ಅಯೋಧ್ಯೆ “ರಾಮ ರಾಜ್ಯ’ದ ಮರುಸೃಷ್ಟಿ ಧರೆಗಿಳಿಯಲಿದೆ.
“ಶ್ರೀರಾಮಮಂದಿರ ಕೇವಲ ಕಲ್ಲು, ಇಟ್ಟಿಗೆಯದಲ್ಲ ಸಮಗ್ರ ರಾಷ್ಟ್ರೀಯ ಮನೋಭೂಮಿಯ ಪ್ರತೀಕ. ಪ್ರೀತಿ, ಸಹಕಾರ ತ್ಯಾಗ, ವಿಶ್ವಭಾತೃತ್ವ ಹಾಗೂ ಶಕ್ತಿಯ ಪ್ರತೀಕ’.. ಇದು ತೀರ್ಥಕ್ಷೇತ್ರ ಟ್ರಸ್ಟಿನ ಕೋಶಾಧ್ಯಕ್ಷರಾದ ಸ್ವಾಮೀ ಗೋವಿಂದ ದೇವಗಿರೀಜಿ ಮಹಾರಾಜ್ ಇತ್ತೀಚೆಗೆ ನೀಡಿದ ಸಂದೇಶ. 10, 100 ಹಾಗೂ 1,000 ರೂ. ಮುದ್ರಿತ ಕೂಪನ್‌ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. 2,000ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದೇಣಿಗೆಯಾಗಿ ನೀಡಿದ ಭಕ್ತರಿಗೆ ರಸೀದಿ ನೀಡಲಾಗುವುದು. ದೇಣಿಗೆದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ರಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವನ್ನು ಪಡೆಯಬಹುದು. ನಿಧಿ ಸಂಗ್ರಹ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರಲಿದ್ದು ಸಂಗ್ರಹವಾದ ಮೊತ್ತವನ್ನು ನೇರವಾಗಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ವಿವಿಧ ಮುಖ ಬೆಲೆಯ ಕೂಪನ್‌ಗಳ ಮೌಲ್ಯಕ್ಕಿಂತ ಅದೆಷ್ಟೋ ಎತ್ತರದ ಆದರ್ಶಗಳ, ಅರ್ಪಣಾ ಮನೋಭೂಮಿಕೆಯ ಪುಣ್ಯದ, ಮಣ್ಣಿನ ಕಣ ಕಣದ ಋಣ ಪ್ರಜ್ಞೆಯೂ ಇದರಲ್ಲಿದೆ; ಸನಾತನ, ಅವಿಚ್ಛಿನ್ನ ಸಂಸ್ಕೃತಿ ಹಾಗೂ ಪರಂಪರೆಯ ವಾರಿಸುದಾರಿಕೆ ಇದರಲ್ಲಿದೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಪ್ರಪ್ರಥಮ ಸೌಭಾಗ್ಯ ಒದಗಿ ಬಂದುದು ಸ್ವತಃ ಶ್ರೀರಾಮ ಸುತ ಕುಶ ಮಹಾರಾಜನಿಗೆ. ಮುಂದೆ ರಘುವಂಶದ 44ನೇ ರಾಜನಾದ ಬೃಹದ್ಭಲನ ವರೆಗೂ ಈ ಮಂದಿರ ಸುಸ್ಥಿತಿಯಲ್ಲಿ ಇತ್ತು ಎಂಬುದು ಪ್ರತೀತಿ. ಮುಂದೆ ಅವಂತಿಯ ರಾಜ ವಿಕ್ರಮಾದಿತ್ಯ ಇದೇ ಜನ್ಮಭೂಮಿಯಲ್ಲಿ ಏಳು ಅಂತಸ್ತುಗಳ ಭವ್ಯ ಶ್ರೀರಾಮ ಮಂದಿರ ನಿರ್ಮಿಸಿದ ಎಂಬುದು ಇತಿಹಾಸದ ಪಡಿನುಡಿ. ಇದೀಗ ಮೂರನೇ ಬಾರಿ 161 ಅಡಿ ಎತ್ತರದ 5 ಗೋಪುರಗಳ ಸುಂದರ ಮಂದಿರ ತಲೆ ಎತ್ತುತ್ತಿರುವ ಪರ್ವಕಾಲ ನಮಗೊದಗಿ ಬಂದಿದೆ. ಜತೆಗೆ ಸನಾತನ ಪರಂಪರೆಯನ್ನು ಭವಿಷ್ಯದ “ರಾಮರಾಜ್ಯ’ದ ಸುಭಿಕ್ಷೆ, ಪ್ರಗತಿ ಹಾಗೂ ಶಾಂತಿಪರ್ವಕ್ಕೆ ಸಂದಿಸಲು ಶಕ್ತವಾದ ವರ್ತಮಾನ ಕಾಲದ ವರ್ತಮಾನ ಇದು ಎನಿಸಿದೆ. ಕಾಲ ಚಕ್ರದ ಪರಿಭ್ರಮಣೆಯಲ್ಲಿ ಐತಿಹಾಸಿಕ ಒತ್ತಡಕ್ಕೆ ಸಿಲುಕಿದ್ದರೂ ಸನಾತನ ಧರ್ಮೀಯರೇ ತಮ್ಮ ಪೂರ್ವಜರೆಂದು ಗುರುತಿಸಿಕೊಳ್ಳುವ, ಸ್ಥಳೀಯ ಇಸ್ಲಾಂ ಮತಾನುಯಾಯಿಗಳೂ ಪರಿಸರ ಸ್ನೇಹಿ, ವಿನೂತನ ಶೈಲಿಯ ಪ್ರಾರ್ಥನಾ ಮಂದಿರವನ್ನೂ ಅಯೋಧ್ಯೆಯ ವಲ ಯದಲ್ಲೇ ನಿರ್ಮಿಸುತ್ತಿದ್ದಾರೆ. ಇದೂ ಮುಂದಿನ ಕಾಲ ಘಟ್ಟದಲ್ಲಿ ಪರಮತ ಸಹಿಷ್ಣುತೆಯ ಮೌನ ಸಾಕ್ಷಿ ಎನಿಸಬಹುದು.
1528ರಿಂದ ಸುದೀರ್ಘವಾಗಿ ಘಟಿಸಿದ ಹೋರಾಟದ ವೀರಗಾಥೆಯ ದಾಖಲಿತ ಇತಿಹಾಸಕ್ಕೆ ವಿಶ್ವ ಹಿಂದೂ ಪರಿಷತ್ ಕೈಗೆತ್ತಿಗೊಂಡ ಕರ ಸೇವಾ ಪರಿಶ್ರಮಕ್ಕೆ, ರಾಮ ಶಿಲಾ ಪೂಜನ, ರಾಮ ಜಾನಕಿ ರಥಯಾತ್ರೆ, ರಾಮಜ್ಯೋತಿ ಪರ್ಯಟನೆ, ರಾಮ ಪಾದುಕಾ ಪೂಜೆ ಇವೆಲ್ಲದುದಕ್ಕೆ ಇದು ಸುಖಾಂತ್ಯ ಫಲಶ್ರುತಿ ಎನ್ನುವಂತಿದೆ. ಈ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವವರಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರೂ ಓರ್ವರು ಎಂಬುದು ಹೆಮ್ಮೆಯ ಸಂಗತಿ. ಒಟ್ಟಿನಲ್ಲಿ ಈ ಅಭಿಯಾನದ ಮಹಾನ್ ಕಾರ್ಯ ರಾಷ್ಟ್ರ ಚೈತನ್ಯದ ಮಹಾನ್ಯಾನದ ಅಮೃತಗಳಿಗೆ; ಭಾರತದ ಪ್ರಚಲಿತ ವರ್ತಮಾನವನ್ನು ಇತಿಹಾಸವಾಗಿಸಿ ಅಗೋಚರ ಭವಿಷ್ಯಕ್ಕೆ ಸಂದಿಸುವ ಪರ್ವಕಾಲ.
–ಡಾ| ಪಿ.ಅನಂತಕೃಷ್ಣ ಭಟ್