Advertisement

ಕೋವಿಡ್ ನಂತರದಲ್ಲಿ ಬಿಡಿಗಾಸೂ ಬಿಡುಗಡೆಯಾಗುತ್ತಿಲ್ಲ: ಶಾಸಕ ಮಂಜುನಾಥ್ ಬೇಸರ

09:05 PM Jul 08, 2022 | Team Udayavani |

ಹುಣಸೂರು : ಹುಣಸೂರು ನಗರದ ಮಂಜುನಾಥ ಮತ್ತು ಮಾರುತಿ ಬಡಾವಣೆ ಸೇರಿದಂತೆ ಅನಧಿಕೃತ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ನಗರಸಭೆಯೊಂದಿಗೆ ಹುಡಾ(ಹುಣಸೂರು ಯೋಜನಾ ಪ್ರಾಧಿಕಾರ)ವು ಸಹ ಕೈಜೋಡಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಅವ್ಯವಸ್ಥೆಯಿಂದಾಗಿ ನಿವಾಸಿಗಳು ಪ್ರತಿ ಮಳೆಗಾಲದಲ್ಲೂ ಮಳೆನೀರಿನ ಪ್ರವಾಹಕ್ಕೆ ತುತ್ತಾಗುತ್ತಿದ್ದಾರೆ. ಮಂಜುನಾಥ ಬಡಾವಣೆಯಲ್ಲಿ ರಾಜ ಕಾಲುವೆ ನಿರ್ಮಿಸಲು ೩.೫ಕೋಟಿ ರೂ ಅನುದಾನ ಇದ್ದು, ಯಾವುದಕ್ಕೂ ಸಾಲುವುದಿಲ್ಲಾ, ಹೀಗಾಗಿ ಬಡಾವಣೆಗಳಲ್ಲಿ ಅಗತ್ಯ ಚರಂಡಿ, ರಸ್ತೆ ಮತ್ತಿತರ ಅಭಿವೃದ್ದಿಗೆ ಹುಡಾ ಸಹ ನೆರವಿಗೆ ಬರಬೇಕೆಂದು ಹುಡಾ ಕಾರ್ಯದರ್ಶಿ ಲಕ್ಷಣ ನಾಯಕ್‌ರಿಗೆ ಸೂಚಿಸಿದರು.

ಹುಣಸೂರು ಯೋಜನಾ ಪ್ರಾಧಿಕಾರವು ನಗರಸಭೆ ವ್ಯಾಪ್ತಿಗೆ ಹೊಸದಾಗಿ ಸೇರಿಕೊಂಡ ಗ್ರಾಮಗಳಲ್ಲಿ ಖಾತೆ ಮಾಡಿಕೊಡುವ ಜನರಲ್ಲಿರುವ ಗೊಂದಲ ಮತ್ತು ತೊಂದರೆಯನ್ನು ಬಗೆಹರಿಸಬೇಕು. ನಿವೇಶನ ಎಲ್ಲಿದೆಯೋ ಅಲ್ಲಿನ ವ್ಯಾಪ್ತಿಯ ಗ್ರಾ.ಪಂ.ಗಳಲ್ಲೇ ಖಾತೆ ಮಾಡಿಕೊಡುವ ಪ್ರಕ್ರಿಯೆ ಆಗಬೇಕೆಂದು ತಾಕೀತು ಮಾಡಿದರು.

55ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಬಾಕಿ
ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಶೇ.೨ರ ಪ್ರಮಾಣದ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾತ್ರ ಬಾಕಿಯಿದೆ. ತಾಲೂಕಿನ ಚೋಳೇನಹಳ್ಳಿ-ರಾಮನಹಳ್ಳಿ ರಸ್ತೆಯ ೯೦೦ ಮೀಟರ್, ಸಿಂಗರಮಾರನಹಳ್ಳಿಯ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳ ೫೫ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ಕೆ ಟೆಂಡರ್ ಆಗಿ ಐದಾರು ತಿಂಗಳಾದರೂ ಗುತ್ತಿಗೆದಾರರು ಅನುದಾನ ಕೊರತೆಯಿಂದ ಕೆಲಸ ಮಾಡುತ್ತಿಲ್ಲಾ ಪರಿಸ್ಥಿತಿ ಹೀಗಿದ್ದರೂ ಕೆಲ ಹಿತಶತ್ರುಗಳು ನಮ್ಮ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಉದಾಸೀನವೇ ಮದ್ದು ಎಂದು ನಾನು ಸುಮ್ಮನಿದ್ದೇನೆಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

ಅರಸು ಭವನ ಅಭಿವೃಧ್ದಿಗೆ ಕ್ರಮ; ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅರಸು ಕಲಾ ಭವನದ ಒಳಾಂಕಾರಕ್ಕೆ ೨.೫೦ ಕೋಟಿ ರೂ.ಗಳ ಅನುದಾನದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇಲಾಖಾ ಕಾರ್ಯದರ್ಶಿ ಮಣಿವಣ್ಣನ್ ಇದೀಗ ೧.೯೧ಕೋಟಿ ರೂ.ಗಳ ಅನುದಾನ ನೀಡಲು ಒಪ್ಪಿದ್ದಾರೆ. ತಾಲೂಕು ಕ್ರೀಡಾಂಗಣವನ್ನು ೩೦ಲಕ್ಷ ರೂ. ವೆಚ್ಚದಲ್ಲಿ ಖೇಲೋಇಂಡಿಯಾ ಅಥ್ಲೆಟಿಕ್ ಅಂಕಣ ನಿರ್ಮಿಸಲು ಮನವಿ ಸಲ್ಲಿಸಲಾಗಿದೆ. ಶಟಲ್ ಒಳಾಂಗಣ ಕೋರ್ಟ್ ಅಭಿವೃದ್ಧಿಗೆ ೭೨ಲಕ್ಷರೂ ಬಿಡುಗಡೆಯಾಗಲಿದೆ ಎಂದು ಶಾಸಕರು ಮಾಹಿತಿ ನೀಡಿದರು.

Advertisement

227 ಶಾಲಾ ಕೊಠಡಿ ನೆಲಸಮ
ತಾಲೂಕಿನ167 ಶಾಲೆಗಳ 227 ಕೊಠಡಿಗಳು ಮರಸ್ತಿಗೊಂಡಿವೆ. 96 ಶಾಲೆಗಳಲ್ಲಿ 227 ಕೊಠಡಿ ನೆಲಸಮವಾಗಬೇಕಿದೆ. ಒಟ್ಟು 5,487 ಮೀಟರ್ ಉದ್ದದ ಕಾಂಪೌಂಡ್ ಸಹ ನಿರ್ಮಾಣವಾಗಬೇಕಿದೆ. 273 ಶಿಕ್ಷಕರ ಕೊರತೆ ಇದೆ. ಈ ಪೈಕಿ ೧೫೫ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ತಾಲೂಕಿನ ಶಿಕ್ಷಕರಿಗೆ ಕಳೆದ ಮೂರು ವರ್ಷಗಳಿಂದ 1.70 ಕೋಟಿ ರೂ.ಗಳ ಮೆಡಿಕಲ್ ಬಿಲ್ ಬಾಕಿಯಿದೆ ಎಂಬ ಮಾಹಿತಿಗೆ ಈಗಾಗಲೇ ಶಾಸಕರನಿಧಿಯಿಂದ 22 ಶಾಲೆಗಳು ಮತ್ತು ಜಿ.ಪಂ.ವತಿಯಿಂದ 67 ಶಾಲೆಗಳ ದುರಸ್ತಿಕಾರ್ಯ ನಡೆಸಲಾಗಿದೆ. ಉಳಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸಿಡಿಪಿಓರಶ್ಮಿಯವರು ಅಂಗನವಾಡಿಗಳ ಅವ್ಯವಸ್ಥೆಯನ್ನು ತೆರೆದಿಟ್ಟರು.

29 ಇಲಾಖೆಗಳಿಗೆ ಅನುದಾನವೇ ಬಂದಿಲ್ಲ
ಕಳೆದೆರಡು ವರ್ಷಗಳಿಂದ 29 ಪ್ರಮುಖ ಇಲಾಖೆಗಳಿಗೆ ಈ ಸರಕಾರದಲ್ಲಿ ಯಾವುದೇ ಅನುದಾನ ಬಂದಿಲ್ಲಾ, ಅಧಿಕಾರಿಗಳು ಬರೀ ಪ್ರಸ್ತಾವನೆ ಸಲ್ಲಿಸುವುದಾಗಿದೆ.ಹೀಗಾಗಿ ಅಬಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಜನರಿಂದ ಬೈಸಿಕೊಳ್ಳುವಂತಾಗಿದೆ. ಇನ್ನೂ ಖೋ-ಖೋ ಆಟದಂತೆ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದು, ಯಾವ ಪ್ರಗತಿ ಪರಿಶೀಲನೆ ನಡೆಸುವುದೆಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ನಗರಸಭಾಧ್ಯಕ್ಷೆ ಸಮೀನಾ ಪರ್ವೀನ್, ಉಪಾಧ್ಯಕ್ಷ ದೇವನಾಯ್ಕ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಇಓ ಬಿ.ಕೆ.ಮನು, ಪೌರಾಯುಕ್ತ ಕೆ.ಪಿ.ರವಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ಸಮಾಜಕಲ್ಯಾಣ ಸಹಾಯಕನಿರ್ದೇಶಕ ಮೋಹನ್‌ಕುಮಾರ್, ತಾ.ಗಿರಿಜನ ಕಲ್ಯಾಣಾಧಿಕಾರಿ ಬಸವರಾಜು, ಸೇರಿದಂತೆ ವಿವಿಧ ಇಲಾಖೆ ಮುಖ್ಯಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next