ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಬೊಳುವಾರು ಮಹಮದ್ ಕುಂಞಿಯವರ 1111 ಪುಟಗಳ “ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ಓದುವುದೆಂದರೆ ಹಲವು ಕಾಲ-ದೇಶಗಳ ಅನುಭವದ ಮಹಾಯಾತ್ರೆ ಕೈಗೊಂಡಂತೆ.
ದೇಶದ ಸಣ್ಣ ತುಂಡನ್ನು ಜಿನ್ನಾರಿಗೂ, ದೊಡ್ಡ ತುಂಡನ್ನು ನೆಹರೂರವರಿಗೂ ಬ್ರಿಟಿಷರು ಹಂಚಿಕೊಟ್ಟಾಗ, ತಮ್ಮದಲ್ಲದ ತಪ್ಪಿಗೆ ಮನೆಮಾರು ಬಿಟ್ಟು ವಿರುದ್ಧ ದಿಕ್ಕುಗಳಿಗೆ ಓಡುವ ಮನುಷ್ಯರ ಸಂಕಟಗಳೊಂದಿಗೆ ಸ್ವಾತಂತ್ರ್ಯದ ಓಟ ಕತೆ ಓಡಲಾರಂಭಿಸುತ್ತದೆ. ಎರಡೂ ರೈಲುಗಳು ಅಕ್ಕಪಕ್ಕಗಳಲ್ಲಿ ನಿಂತಿದ್ದಾಗ ಕ್ಷಣಕಾಲ ಕೂಡಿದ್ದ ಪರಸ್ಪರ ನೋಟಗಳಲ್ಲಿದ್ದುದ್ದು ಸಿಟ್ಟೆ? ದ್ವೇಷವೆ? ನೋವೆ? ದುಃಖವೆ? ಅಳುವೆ? (ಪು. 1046). ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷರನ್ನು ಓಡಿಸಿ ಆಗಿತ್ತು. ಈಗ ಓಡುವುದು ಭಾರತೀಯರ ಸರದಿ (ಪುಟ 1050).
ವಿಭಜಿತ ಭಾರತದಲ್ಲಿ ಎರಡು ಧರ್ಮಗಳು ಹೇಗೆ ಬದುಕಿ ಉಳಿಯಬೇಕೆಂಬುದನ್ನು, ಲಾಹೋರಿನ ಹುಡುಗನೊಬ್ಬ, ಘಟ್ಟದ ಕೆಳಗಿನ ಮುತ್ತುಪ್ಪಾಡಿಯಲ್ಲಿ ಚಾಂದ್ ಅಲೀ-ಚಾಂದಜ್ಜ- ಚಾಂದಜ್ಜನಾಗಿ ಬಾಳಿ ತೋರಿಸುವ ಜೊತೆಗೆಯೆ, ಮಾತೃಭೂಮಿ ಎಂದರೇನೆಂಬುದನ್ನು ಸೂಕ್ಷ¾ವಾಗಿ ಚರ್ಚಿಸುವ ಇದು ಉತ್ತರದಲ್ಲಿ ಖುಷವಂತ್ ಸಿಂಗ್, ಅಮೃತಾಪ್ರೀತಂ, ರಾಜೆಂದ್ರ ಸಿಂಗ್ ಬೇಡಿ ಮೊದಲಾದವರ ಬರಹಗಳಲ್ಲಿ ದೇಶ ವಿಭಜನೆಯ ಕತೆಗಳನ್ನು ಓದಿರಬಹುದು. ಆದರೆ ದಕ್ಷಿಣಭಾರತದ ಲೇಖಕರಲ್ಲಿ ಇಂಥಾದ್ದನ್ನು ಕಾಣಲಾರೆವು. ಇದನ್ನು ಇವರು ಸಮರ್ಥವಾಗಿ ನಮ್ಮೆದುರು ಇರಿಸಿದ್ದಾರೆ. ಉತ್ತರದ ಸಿಂಧೂನದಿಯಿಂದ ಆರಂಭವಾಗುವ ಕಥಾವಸ್ತು, ದಕ್ಷಿಣಕ್ಕೆ ನೇತ್ರಾವತಿಗಿಳಿದು ಪುನಃ ಮೇಲ್ಮುಖವಾಗಿ ಹರಿಯುತ್ತಾ “ವಾಘಾ’ ಗಡಿಯಲ್ಲಿ ಕೊನೆಗೊಳ್ಳುವ ಕಾದಂಬರಿಯನ್ನು ಓದಲು ಎಂಟೆದೆ ಬೇಕು.
ಮುತ್ತುಪ್ಪಾಡಿಯ ಮುಸ್ಲಿಮ… ಹೆಂಗಸರಿಗೆ ಮನೆಯಿಂದ ಹೊರಗೆಹೋಗಲು ಅವಕಾಶ ಸಿಗುತ್ತಿದ್ದದ್ದು ಎರಡು ಸಂದರ್ಭಗಳಲ್ಲಿ ಮಾತ್ರ. ಊರೂಸಿಗೆ ಹೋಗುವಾಗ ಒಮ್ಮೆ ಮತ್ತು ಆಸ್ಪತ್ರೆಗೆ ಹೋಗುವಾಗ ಮತ್ತೂಮ್ಮೆ (ಪುಟ 335). ಟೀವಿಯಲ್ಲಿ ರಾಮ ಕಾಣಿಸಿಕೊಳ್ಳದಿರುತ್ತಿದ್ದರೆ, ಪರಸ್ಪರ ಹೇಳುತ್ತಿದ್ದ, ನಮಸ್ಕಾರದ ಜಾಗವನ್ನು ಜೈ ಶ್ರೀರಾಮ… ಆಕ್ರಮಿಸುತ್ತಿರಲಿಲ್ಲ. ಮನೆಮನೆಗಳಲ್ಲಿ ಪೂಜಿಸಲಾಗುತ್ತಿದ್ದ, ವಿಷ್ಣುಮೂರ್ತಿ, ಅನಂತೇಶ್ವರ, ಪಂಜುರ್ಲಿ, ಬೊಬ್ಬರ್ಯ, ಪಂಚಲಿಂಗೇಶ್ವರ ಮೊದಲಾದ ನೂರು ದೇವರುಗಳನ್ನು ಎರಡನೆಯ ಸಾಲಿನಾಚೆ ನೂಕಲು ಸಾಧ್ಯವಾಗುತ್ತಿರಲಿಲ್ಲ (ಪುಟ 782). ಹೌದು ಮಗು, ಊರಿನ ಚಂದವನ್ನು ಅಳೆಯಬೇಕಾಗಿರುವುದು ಕಟ್ಟಡಗಳ ಎತ್ತರದಿಂದಲ್ಲ. ಬದುಕುತ್ತಿರುವ ಮನುಷ್ಯರ ಎತ್ತರದಿಂದ (ಪು. 1016), ಇತ್ಯಾದಿ ಸಾಲುಗಳು ಕಾದಂಬರಿಗೆ ಮೌಲ್ಯ ತಂದುಕೊಡುತ್ತವೆ. ನಮ್ಮ ಸೂಫಿ-ಸಂತರು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಿದಾಡಿರುವ ದಾರಿಯಲ್ಲಿ ಇರಿಸಿದ ಹೆಜ್ಜೆಗುರುತುಗಳನ್ನು ಕಾದಂಬರಿಯ ಕಡೆಯಲ್ಲಿ, ಅಮೆರಿಕದಿಂದ ಗಂಡ ಸಿಖ್ ಹುಡುಗ ಜೆಸ್ಸೀ ಜೊತೆಗೆ ಮುತ್ತುಪ್ಪಾಡಿಗೆ ಬರುವ, ಚಾಂದ್ ಅಲಿಯ ಮೊಮ್ಮಗಳು ಶಬಾನಾ ಮುಂದುವರಿಸುತ್ತಾಳೆ.
ತಮ್ಮ ಮುಂದಿರುವ ವರ್ತಮಾನದ ತಿರುವುಗಳನ್ನು ವಿಭಜನೆಯ ಸಂದರ್ಭಗೊಳಗೆ ಕಾದಂಬರಿಕಾರರು ಅತ್ಯಂತ ಸಮರ್ಥವಾಗಿ, ಚಕ್ಕನೆ ಹೊಂದಿಸಿಕೊಂಡು, ಸ್ವತಃ ಅನುಭವಿಸಿದ್ದರೋ ಎನ್ನುವ ಮಟ್ಟಿಗೆ ವರ್ಣಿಸಿ ಬಿಡುತ್ತಾರೆ. ಗಾಂಧೀಜಿಯವರ ಕೊಲೆ, ಮೊರಾದಬಾದ್ ಕೋಮುಗಲಭೆ, ತುರ್ತು ಪರಿಸ್ಥಿತಿ, ಬಾಬರಿ ಮಸೀದಿ ಧ್ವಂಸ, ಘಟ್ಟದ ಕೆಳಗಿನ ಗಲಭೆಗಳು, ಷಾಬಾನು ಪ್ರಕರಣ, ಬುರ್ಖಾವಿವಾದ, ನರಸಿಂಹರಾಯರು, ವಿ.ಪಿ. ಸಿಂಗ್, ಇಂದಿರಾಗಾಂಧಿ, ಲಾಲ…ಕೃಷ್ಣ ಆಡ್ವಾಣಿ, ಕುಲ್‌ದೀಪ್ ನಯ್ಯರ್, ಪಂಡಿತ ರಾಜೀವ ತಾರಾನಾಥರು, ಯಾರೇ ಆಗಲಿ, ಯಾವುದೇ ಆಗಲಿ ಸತ್ಯ ಘಟನೆಗಳಾಗಿ ಕಾದಂಬರಿಗೆ ಜೀವತುಂಬಿಸುತ್ತವೆ. ಇಲ್ಲದಿದ್ದಲ್ಲಿ 1111 ಪುಟಗಳನ್ನು ಓದಲು ಯಾರಿಗೆ ಸಾಧ್ಯವಾದೀತು!? ಒಮ್ಮೆ ಪ್ರಾರಂಭವಾದ ಕಾದಂಬರಿ ಓದಿ ಓದಿ ಕೈತೂಕ ಸೋಲಬೇಕೆ ಹೊರತು ಮನಸ್ಸು ತೂಕ ಇಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಾನಿಂಥ ಕಾದಂಬರಿಗಳನ್ನು ಕಾಣೆ.
– ಡಾ. ರಾಜೇಗೌಡ, ಹೊಸಹಳ್ಳಿ