“ರಾತ್ರಿ ಪಾರ್ಟಿ ಮುಗಿಸಿ ಬಂದು ಮಲಗುವವರೆಗೆ ಎಲ್ಲ ನೆನಪಲ್ಲಿದೆ ಸಾರ್… ಆಮೇಲೆ ಏನಾಯ್ತು ಅಂತ ನೆನಪಿಗೆ ಬರಿ¤ಲ್ಲ’ ಅಂಥ ಮೂವರು ಹುಡುಗರು ಪೊಲೀಸ್ ಅಧಿಕಾರಿಯ ಬಳಿ ನಡೆದಿರುವುದೆಲ್ಲ ತಡಬಡಾಯಿಸುತ್ತ ಹೇಳುತ್ತಿದ್ದರೆ, ಪೊಲೀಸರಿಗೆ ಇದನ್ನು ನೋಡುತ್ತಿದ್ದವರಿಗೆ ಇದು “ಹ್ಯಾಂಗೋವರ್’ ಎಫೆಕ್ಟ್ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದು ಈ ವಾರ ತೆರೆಗೆ ಬಂದಿರುವ “ಹ್ಯಾಂಗೋವರ್’ ಚಿತ್ರದ ದೃಶ್ಯ.
ಇಷ್ಟೆಲ್ಲ ಹೇಳಿದ ಮೇಲೆ ಇದು ಮೂವರು ಹುಡುಗರ ಮೋಜು-ಮಸ್ತಿಯ ಕಹಾನಿ ಅನ್ನೋದನ್ನ ಕೂಡ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಈ ಕಹಾನಿ ಎಷ್ಟರ ಮಟ್ಟಿಗೆ “ಮಸ್ತ್’ ಆಗಿ ಬಂದಿದೆ ಅನ್ನೋದೆ ಮುಂದಿರುವ ಪ್ರಶ್ನೆ. ಅದು ಸೂರ್ಯ, ಚಂದ್ರ, ರಾಹುಲ್ ಎನ್ನುವ ಮೂವರು ಹುಡುಗರ ತಂಡ. ಯಾವಾಗಲೂ ಪಾರ್ಟಿ, ಪಬ್ ಮೋಜು-ಮಸ್ತಿ ಅನ್ನೋ ಈ ಹುಡುಗರು ಒಮ್ಮೆ ಮೂವರು ಹುಡುಗಿಯರ ಜೊತೆ ಭರ್ಜರಿಯಾಗಿ ನೈಟ್ ಪಾರ್ಟಿ ಮುಗಿಸಿ ಫಾರ್ಮ್ಹೌಸ್ ಸ್ಟೇ ಆಗುತ್ತಾರೆ.
ಆದ್ರೆ ಬೆಳಗಾಗುವುದರ ಒಳಗೆ ಈ ಹುಡುಗರ ಜೊತೆ ಬಂದಿದ್ದ ಹುಡುಗಿಯೊಬ್ಬಳು ನಿಗೂಢವಾಗಿ ಕೊಲೆಯಾಗಿರುತ್ತಾಳೆ. “ಹ್ಯಾಂಗೋವರ್’ನಲ್ಲಿದ್ದವರಿಗೆ ಆ ಕೊಲೆ ಮಾಡಿದ್ದು ಯಾರು ಅನ್ನೋದೆ ತಿಳಿಯುವುದಿಲ್ಲ. ಸದಾ “ಹ್ಯಾಂಗೋವರ್’ನಲ್ಲೇ ಕಾಲಕಳೆಯುವ ಹುಡುಗರಿಗೆ ಅದೇ ಮೋಜು-ಮಸ್ತಿಯೇ ಉರುಳಾಗಿ ಬಿಡುತ್ತದೆ. ಹಾಗಾದ್ರೆ ಯಾರಿಗೂ ಗೊತ್ತಾಗದಂತೆ ಆ ಕೊಲೆಯಾಗಿದ್ದು ಹೇಗೆ?ಅದನ್ನು ಮಾಡಿದವರು ಯಾರು?
ಅನ್ನೋದೆ “ಹ್ಯಾಂಗೋವರ್’ ಚಿತ್ರದ ಕ್ಲೈಮ್ಯಾಕ್ಸ್. ಅದನ್ನ ತಿಳಿದುಕೊಳ್ಳಬೇಕು ಅಂದ್ರೆ “ಹ್ಯಾಂಗೋವರ್’ ಚಿತ್ರವನ್ನು ನೋಡಬಹುದು. ಹಾಗಂತ “ಹ್ಯಾಂಗೋವರ್’ ಚಿತ್ರದ ಕಥೆಯಲ್ಲಿ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಕನ್ನಡ ಮತ್ತಿತರ ಭಾಷೆಗಳಲ್ಲಿ ಈಗಾಗಲೇ ಬಂದು ಹೋದ ಹಲವು ಕ್ರೈಂ, ಸಸ್ಪೆನ್ಸ್ -ಥ್ರಿಲ್ಲರ್ ಚಿತ್ರಗಳ ಎಳೆ ಇಲ್ಲೂ ಕಾಣುತ್ತದೆ. ಚಿತ್ರ ಮಂದಗತಿಯಲ್ಲಿ ಸಾಗುವುದರಿಂದ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳು ನೋಡುಗರನ್ನು ಅಷ್ಟಾಗಿ ಕಾಡುವುದಿಲ್ಲ.
ಚಿತ್ರಕಥೆ, ನಿರೂಪಣೆ ಇನ್ನಷ್ಟು ಬಿಗಿಯಾಗಿದ್ದರೆ “ಹ್ಯಾಂಗೋವರ್’ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಆದರೆ ಅಂಥದ್ದೊಂದು ಅವಕಾಶವನ್ನು ನಿರ್ದೇಶಕ ವಿಠಲ್ ಭಟ್ “ಹ್ಯಾಂಗೋವರ್’ನಲ್ಲಿ “ಮಿಸ್’ ಮಾಡಿಕೊಂಡಂತಿದೆ. ಇನ್ನು ಚಿತ್ರದ ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಪೊನ್ನಮ್ಮ, ನಂದಿನಿ ಸೇರಿದಂತೆ ಬಹುತೇಕ ಕಲಾವಿದರು ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ.
ನೀನಾಸಂ ಅಶ್ವತ್, ಶ್ರೀಧರ್ ಅವರಂಥ ಕೆಲ ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ಉಳಿದವರು ತೆರೆಮೇಲೆ ತಮ್ಮ ಪಾತ್ರ ನಿಭಾಯಿಸಲು “ಹರಸಾಹಸ’ ಪಟ್ಟಿದ್ದಾರೆ. ನೀತು ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕಿ ಮರೆಯಾಗುವುದರಿಂದ ಅಭಿನಯದ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಇನ್ನು “ಹ್ಯಾಂಗೋವರ್’ ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಎಲ್ಲದರಲ್ಲೂ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ.
ತಾಂತ್ರಿಕ ವಿಷಯದಲ್ಲಿ ರಾಜಿಯಾದರೆ, ಚಿತ್ರದ ಪ್ರತಿ ದೃಶ್ಯದಲ್ಲೂ ಅದು ಕಾಣುತ್ತದೆ ಎನ್ನುವ ಸಂಗತಿಯನ್ನು ನಿರ್ದೇಶಕ ವಿಠಲ್ ಭಟ್ ಅರಿವಿದೆ ಬಂದಂತಿಲ್ಲ. ಉಳಿದಂತೆ ಸಾಹಿತ್ಯ – ಗಣೇಶ್ ರಾಣೆಬೆನ್ನೂರು ಸಂಭಾಷಣೆ, ಲೊಕೇಶನ್‌ಗಳು ಚಿತ್ರಕ್ಕೆ ಪ್ಲಸ್ ಎನ್ನಬಹುದು. ಒಟ್ಟಾರೆ ಹೊಸಪ್ರತಿಭೆಗಳನ್ನು ಬೆನ್ನುತಟ್ಟಬೇಕು ಎನ್ನುವವರು “ಹ್ಯಾಂಗೋವರ್’ ಅನುಭವ ತೆಗೆದುಕೊಂಡು ಬರಬಹುದು.
ಚಿತ್ರ: ಹ್ಯಾಂಗೋವರ್
ನಿರ್ಮಾಣ: ರಾಕೇಶ್. ಡಿ
ನಿರ್ದೇಶನ: ವಿಠಲ್ ಭಟ್
ತಾರಾಗಣ: ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಪೊನ್ನಮ್ಮ, ನಂದಿನಿ, ನೀನಾಸಂ ಅಶ್ವಥ್, ಶಫಿ, ಶ್ರೀಧರ್, ನೀತು ಶೆಟ್ಟಿ ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್