ಹೊಸಪೇಟೆ: ಅಕಾಲಿಕ ಮಳೆಯಿಂದ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಮೂರು ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿದೆ.
ತಾಲೂಕು ಸೇರಿ ಹಗರಿಮೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನ ಹಡಗಲಿ, ಹರಪನಹಳ್ಳಿ ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಸೇರಿ ನದಿಯ ಜಲಾನಯನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಅಕಾಲಿಕ ಮಳೆಯಿಂದಾಗಿ ಒಳಹರಿವು ಶುರುವಾಗಿದೆ.
ಜಲಾಶಯ ಒಟ್ಟು 103 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿದೆ. ಶನಿವಾರ 3662 ಕ್ಯೂಸೆಕ್ ಇದ್ದ ನೀರಿನ ಒಳಹರಿವು ರವಿವಾರ ದಿಢೀರ್ 6580 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಳೆದ ಏ.25ಕ್ಕೆ ಒಳಹರಿವು ಇರದೇ, ಜಲಾಶಯದಲ್ಲಿ 2.695 ಟಿಎಂಸಿ ಅಡಿ ನೀರಿತ್ತು. ಏ.26ಕ್ಕೆ 825 ಕ್ಯೂಸೆಕ್ ಒಳ ಹರಿವು ಆರಂಭವಾಗಿ ರವಿವಾರದವರೆಗೆ (15 ದಿನಗಳಿಂದ) 2 ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸದ್ಯ 5.066 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ನೀರಿನ ಮಟ್ಟ: ಗರಿಷ್ಠ ಮಟ್ಟ 1633 ಅಡಿಗಳು, ಇಂದಿನ ಮಟ್ಟ 1582.05 ಅಡಿಗಳು, ಒಳಹರಿವು 5726 ಕ್ಯೂಸೆಕ್, ಹೊರಹರಿವು 248 ಕ್ಯೂಸೆಕ್ ಇಂದಿನ ಸಾಮರ್ಥ್ಯ 5.066 ಟಿಎಂಸಿ ಅಡಿ ಇತ್ತು. ಕಳೆದ ವರ್ಷ ಈ ದಿನಾಂಕದಲ್ಲಿ ಜಲಾಶಯದಲ್ಲಿ 1578.9 ಅಡಿಗಳು, ಒಳಹರಿವು 2969 ಕ್ಯೂಸೆಕ್, ಹೊರಹರಿವು 229 ಕ್ಯೂಸೆಕ್ ಇದ್ದು, ನೀರು ಸಂಗ್ರಹ ಸಾಮರ್ಥ್ಯ ಕೇವಲ 3.257 ಟಿಎಂಸಿ ಅಡಿ ಇತ್ತು. ಡ್ಯಾಂನತ್ತ ರೈತರ ಚಿತ್ತ: ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆ ಸೇರಿ ಆಂಧ್ರದಲ್ಲಿ ಬೇಸಿಗೆಯ ಭತ್ತದ ಕಟಾವು ಮುಗಿಸಿಕೊಂಡಿರುವ ರೈತರು, ಮುಂಗಾರು ಬೆಳೆಗಾಗಿ ತುಂಗಭದ್ರಾ ಜಲಾಶಯದತ್ತ ಮುಖ ಮಾಡಿದ್ದಾರೆ.
ಸದ್ಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದ ಒಳ ಹರಿವು ಆರಂಭವಾಗಿದೆ. ಕಳೆದ ಮುರ್‍ನಾಲ್ಕು ವರ್ಷದಿಂದ ಬಾರಿ ಮಳೆಯಿಂದ ಜಲಾಶಯ ಭರ್ತಿಯಾಗಿ ಈ ಭಾಗದ ರೈತರ ಮಂದಹಾಸ ಮೂಡಿತು. ಮುಂಗಾರು ಆರಂಭ ಆಗುವ ಮೊದಲೇ ಜಲಾಶಯದಲ್ಲಿ ಒಳ ಹರಿವು ಆರಂಭವಾಗಿದೆ. ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಿರುವುದು ರೈತರಲ್ಲಿ ಹೆಚ್ಚು ವಿಶ್ವಾಸ ಮೂಡಿಸಿದೆ.