ನಾನು ಜಾಸ್ತಿ ಓದಿ. ಒಂದು ಶಾಲೆಯನ್ನು ತೆರೆಯಬೇಕು. ಬಡ ಬಗ್ಗರಿಗೆ ಕಡಿಮೆ ದರದಲ್ಲಿ ವಿದ್ಯಾಭ್ಯಾಸ ಕೊಡಬೇಕು ಅನ್ನೋದು ಚಿಕ್ಕ ಹುಡುಗನಾಗಿದ್ದಾಗಿನಿಂದ ನನ್ನ ಕನಸಾಗಿತ್ತು. ಎಜುಕೇಷನ್ ಹೆಸರಲ್ಲಿ ಹಣ ಮಾಡಬೇಕು ಅನ್ನೋ ಆಸೆ ಏನೂ ಇರಲಿಲ್ಲ. ನನ್ನ ಹೆಂಡತಿ ಮಕ್ಕಳು ಬದುಕುವಷ್ಟು ಆದಾಯ ಬಂದರೆ ಸಾಕು ಅನ್ನೋ ಮನೋಸ್ಥಿತಿ ನನ್ನದು. ಹೀಗಾಗಿಯೇ, ನಾನು 7 ತರಗತಿಯಿಂದಲೇ ಚೆನ್ನಾಗಿ ಓದಲು ಶುರು ಮಾಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 75ರಷ್ಟು ಅಂಕ ಪಡೆದೆ. ಆ ಕಾಲಕ್ಕೆ ಈ ಅಂಕವೇ ದೊಡ್ಡದು. ಗಣಿತ, ವಿಜ್ಞಾನದಲ್ಲಿ ಪಂಟರ್ ಆಗಿದ್ದೆ. ಎಲ್ಲರೂ ಹೊಗೊಳ್ಳೋರು. ಇಷ್ಟಾದರೆ ಸಾಕಲ್ಲವೇ? ಹೀಗಾಗಿ, ನನ್ನ ಶಾಲೆ ತೆರೆಯುವ ಗುರಿ ತಲುಪಲು ಇವೆಲ್ಲವೂ ಇರಬೇಕು, ಅಲ್ಲಿ ಗಣಿತ ವಿಷಯವನ್ನು ಎಲ್ಲ ವಿದ್ಯಾರ್ಥಿಗಳಿಗೆ ಪುಕ್ಕಟ್ಟೆ ಪಾಠ ಮಾಡುವ ಅನ್ನೋ ಉತ್ಸಾಹವೂ ಆಗಾಗ ಪುಟಿದೇಳುತ್ತಿತ್ತು.
ಅಪ್ಪ ಕೃಷಿಕ. ಮೂರು ಜನ ಅಣ್ತಮ್ಮಂದಿರು. ನಾನು ಮಧ್ಯದವನು. ಆರ್ಥಿಕ ಸಂಕಷ್ಟದಲ್ಲೇ ಪಿಯುಸಿ ಮುಗಿಸಿದೆ. ಡಿಗ್ರಿಯಲ್ಲಿ ಇದೇ ಉತ್ಸಾಹದಲ್ಲಿ ಬಿಎಸ್‌ಸಿ ತೆಗೆದುಕೊಂಡೆನಾದರೂ, ನಾನು ಅಂದುಕೊಂಡಂತೆ ಆಗಲೇ ಇಲ್ಲ. ಮೂರು ವರ್ಷದ ಪರೀಕ್ಷೆಯನ್ನು ನಾಲ್ಕು ವರ್ಷ ಬರೆಯುವ ಹಾಗೆ ಆಯಿತು. ಹಾಗಂತ ಸುಮ್ಮನೆ ಕೂತಿರಲಿಲ್ಲ. ಮನೆಯಲ್ಲಿ ರೇಷ್ಮೆ ಸಾಕಾಣಿ ಮಾಡಲು ಮುಂದಾದೆ. ಇದೇ ನನ್ನ ಮೊದಲ ಪ್ರೊಫೆಷನ್. ಯಾವಾಗ, ಡಿಗ್ರಿಯಲ್ಲಿ ಡುಮ್ಕಿ ಹೊಡೆಯುವ ಸಂಖ್ಯೆ ಏರುತ್ತಾ ಹೋಯಿತೋ, ನಿಧಾನಕ್ಕೆ ಶಾಲೆ ತೆರೆಯುವುದಕ್ಕಿಂತ ಕೃಷಿ ಮಾಡುವುದೇ ಲೇಸು ಅನಿಸತೊಡಗಿತು. ಏಕೆಂದರೆ, ರೇಷ್ಮೆ ಎರಡು ತಿಂಗಳಿಗೆ ಒಂದು ಬೆಳೆ. ಪ್ರತಿ ತಿಂಗಳು ಹುಳು ಮೇಯಿಸುವುದರಿಂದ ಪಗಾರ ಹೆಚ್ಚು ಬರುತ್ತಿತ್ತು. ಇದರಿಂದ ಮನೆ ಕಟ್ಟಿದ್ದೆ. ಬೋರ್‌ವೆಲ್ ಕೊರೆಸಿದ್ದೆ. ಅಣ್ಣನಿಗೆ ಮದುವೆ ಮಾಡಿದ್ದೆ. ಒಂದು ಪಕ್ಷ ಶಾಲೆ ತೆರೆಯುವ ಯೋಜನೆ ಕೈ ಕೊಟ್ಟರೆ, ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜಮೀನಿನಲ್ಲಿ ಇನ್ನೊಂದು ಬೋರ್‌ವೆಲ್ ಕೊರೆಸಿ, ಚೆನ್ನಾಗಿರುವ ಹುಳು ಮನೆ ಕಟ್ಟಿ, ಈಗಿನದಕ್ಕಿಂತ ಎರಡು ಪಟ್ಟು ಆದಾಯ ಬರುವ ಹಾಗೆ ಮಾಡೋಣ ಅನ್ನೋ ಆಸೆಯೂ ಚಿಗುರೊಡೆಯಿತು.
ಡಿಗ್ರಿ ವಿದ್ಯಾಭ್ಯಾಸ ಯಾವಾಗ ಏಳು ಬೀಳು ಕಂಡಿತೋ ನಾನು ಮೆಲ್ಲಗೆ ಸ್ಥಳೀಯ ಖಾಸಗಿ ಶಾಲೆಯಲ್ಲಿ ಮೇಷ್ಟ್ರು ಕೆಲಸ ಮಾಡೋಕೆ ಶುರು ಮಾಡಿದೆ. ಆ ಶಾಲೆ ಕೂಡ ಆಗ ತಾನೇ ಶುರುವಾಗಿದ್ದರಿಂದ ನನಗೂ ಪಾಠ ಮಾಡುವ ಅವಕಾಶ ದೊರೆಯಿತು. ಇಲ್ಲಿ ಪಾಠ ಮಾಡುತ್ತಲೇ ಅಲ್ಲಿ ಪರೀಕ್ಷೆ ಬರೆದು ಪದವಿ ಪೂರೈಸಿದೆ. ಹಾಗೆಯೇ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ಮೈಸೂರು ಮುಕ್ತ ವಿವಿಯಲ್ಲಿ ಪರೀಕ್ಷೆ ಬರೆದೆ. ಆದರೆ, ಪಾಸು ಮಾತ್ರ ಆಗಲಿಲ್ಲ. ಅಷ್ಟೊತ್ತಿಗೆ, ಬೆಳಗ್ಗೆ ಶಾಲೆಯಲ್ಲಿ ಪಾಠ, ಸಂಜೆ ಹೊತ್ತು ಖಾಸಗಿ ಟೂಷನ್ ಶುರುಮಾಡಿದ್ದೂ ಆಗಿತ್ತು. ಗಣಿತ, ವಿಜ್ಞಾನಕ್ಕೆ ಡಿಮ್ಯಾಂಡ್ ಹೆಚ್ಚಾಯಿತು. ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲೀಷ್ ಭೂತದ ರೀತಿ ಕಾಡುತ್ತಿತ್ತು. ನಾನು ನ್ಪೋಕನ್ ಇಂಗ್ಲೀಷ್ ಶಾಲೆ ತೆರೆದೆ. ಕಡಿಮೆ ದರದಲ್ಲಿ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುವ ಪ್ರಯತ್ನ ಪಟ್ಟೆ. ಬೆಳಗ್ಗೆ 8ರಿಂದ 10 ಗಂಟೆ, ಸಂಜೆ 4ರಿಂದ 8 ಗಂಟೆ ವರಗೆ ಟ್ಯೂಷನ್ ಮಾಡತೊಡಗಿದೆ. ಹೀಗೆ, 10 ವರ್ಷ ದುಡಿದೆ. ಯಾಕೋ ನಾನೇ ಶಾಲೆ ಆರಂಭಿಸುವ ಕನಸು ಮಾತ್ರ ಈಡೇರುವ ಲಕ್ಷಣ ಕಾಣಲಿಲ್ಲ. ಜೊತೆಗೆ, ಶಾಲೆಯಲ್ಲಿ ಪಾಠ ಮಾಡುವುದು ಒಂದು ರೀತಿ ಏಕತಾನತೆಯ ವೃತ್ತಿ ಅನಿಸೋಕೆ ಶುರುವಾಯಿತು. ನಿಧಾನಕ್ಕೆ ಅದರಿಂದ ಹೊರಬರಲು ಮತ್ತೆ ಕೃಷಿಯನ್ನು ಫುಲ್ ಟೈಂ ವೃತ್ತಿಯಾಗಿ ಸ್ವೀಕರಿಸಿದೆ. ಆದರೆ, ಟ್ಯೂಷನ್ ಮಾತ್ರ ನಿಲ್ಲಿಸಲಿಲ್ಲ.
ಇವತ್ತು ನಾನು ಪಾರ್ಟ್ ಟೈಂ ಶಿಕ್ಷಕ, ಫುಲ್ ಟೈಂ ಕೃಷಿಕ. ರೇಷ್ಮೆ ಜೊತೆಗೆ, ತರಕಾರಿ ಬೆಳೆಯುತ್ತಿದ್ದೇನೆ. ಮನೆ ನಡೆಸಲು ಕೃಷಿಯ ಆದಾಯ ಸಾಕು. ಸುತ್ತ ಮುತ್ತಲ ಹಳ್ಳಿಯ ಮಕ್ಕಳು, ರೈತರ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರ ಜ್ಞಾನ ಹೆಚ್ಚಿಸಲು ಟ್ಯೂಷನ್ ಇದೆ. ಎಲ್ಲರೂ ಹುಡುಕಿಕೊಂಡು ಬಂದು ನನ್ನ ಪಾಠ ಕೇಳುತ್ತಾರೆ. ಹೆಚ್ಚಿಗೆ ಫೀ ತೆಗೆದುಕೊಳ್ಳೊಲ್ಲ ಅನ್ನೋದು ಒಂದೇ ಕಾರಣವಲ್ಲ. ಈ ಟ್ಯೂಷನ್ ನನ್ನ ಮನಃ ಸಂತೋಷಕ್ಕೆ. ನಾನು ಕಡಿಮೆ ದರದಲ್ಲಿ ಶಾಲೆ ನಡೆಸಬೇಕು ಅನ್ನೋ ಆಸೆ ಈಡೇರಿಲ್ಲವಾದರೂ, ಟ್ಯೂಷನ್ ಮೂಲಕ ಅದನ್ನು ಪೂರೈಸಿಕೊಳ್ಳುತ್ತಿದ್ದೇನೆ.
ಚಂದ್ರು ಚಿಕ್ಕನಹಳ್ಳಿ