Advertisement

ನ. 5ರಂದು ಫ‌ಡ್ನವೀಸ್‌ ಪ್ರಮಾಣ ವಚನ ಸಾಧ್ಯತೆ!

08:22 AM Nov 02, 2019 | Team Udayavani |

ಮುಂಬಯಿ: ತೀವ್ರ ರಾಜಕೀಯ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ಬೆಳೆವಣಿಗೆಗಳು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶಿವಸೇನೆ 50:50 ಸರಕಾರಕ್ಕೆ ಹೆಚ್ಚು ಒಲವು ತೋರುತ್ತಿದ್ದು ಕಮಲ ನಾಯಕರು ಆ ಬೇಡಿಕೆಯನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಸದ್ಯ ಈ ಎರಡು ಮೈತ್ರಿ ಪಕ್ಷಗಳ ನಡುವಿನ ಅಧಿಕಾರದ ಸಮರ ಮುಂದುವರೆದಿದೆ. ಈ ನಡುವೆ ಬಿಜೆಪಿ ಮತ್ತೊಂದು ಅವಧಿಗೆ ಸರಕಾರ ರಚಿಸಲು ಮುಂದಾಗಿದ್ದು, ಸಿದ್ಧತೆಯೂ ನಡೆಯುತ್ತಿದೆ.

Advertisement

50:50 ಅವಧಿ ಸರಕಾರ ನಡೆಸುವ ಸೇನೆ ಷರತ್ತನ್ನು ಬಿಜೆಪಿ ಅಲ್ಲಗೆಳೆದಿದೆ. ಸರಕಾರ ಏನಿದ್ದರೂ ಬಿಜೆಪಿಯೇ ನಡೆಸುವಂತಿರಬೇಕು ಮಾತ್ರವಲ್ಲದೇ 5 ವರ್ಷಗಳೂ ಫ‌ಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗಿರಬೇಕು ಎಂದು ಬಿಜೆಪಿ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ. ಆದರೆ ಹಲವು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿರುವ ಶಿವಸೇನೆಗೆ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುವ ಮನಸ್ಸು ಅಚಲವಾದಂತಿದೆ. ಇದಕ್ಕಾಗಿ ತನ್ನ ಬಿಗಿ ಪಟ್ಟನ್ನು ಮುಂದುವರೆಸಿರುವ ಸೇನೆ 50:50 ಮೈತ್ರಿ ಸಾಧ್ಯವಾಗುವುದಿದ್ದರೇ ಮಾತ್ರ ಬೆಂಬಲ ನೀಡುವುದಾಗಿ ಹೇಳಿದೆ. ಆದರೆ ಈ ವಾದಕ್ಕೆ ಕಮಲ ಪಾಳಯ ಗಂಭೀರವಾಗಿ ಪರಿಗಣಿಸಿಲ್ಲ.

ಫ‌ಡ್ನವೀಸ್‌ ಪ್ರಮಾಣವಚನ
ರಾಜ್ಯದಲ್ಲಿ ಮೈತ್ರಿ ಕುರಿತಾದ ಸಾಧ್ಯಾಸಾಧ್ಯತೆಗಳು ಶೇ. 50: 50 ಇರುವ ಮಧ್ಯೆ ಬಿಜೆಪಿ ತೆರೆಮರೆಯಲ್ಲಿಯೇ ಸರಕಾರ ರಚಿಸಲು ತನ್ನ ಪ್ರಯತ್ನವನ್ನು ಮುಂದುವರೆಸಿದೆ. ಈ ಕುರಿತಂತೆ ಸಂಭಾವ್ಯ ಸಚಿವರ ಪಟ್ಟಿಯನ್ನು ಕೇಸರಿ ಪಕ್ಷ ಸಿದ್ಧ ಮಾಡಿಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಮಾತುಗಳು ಹೌದು ಎಂಬುದಕ್ಕೆ ಪೂರಕವಾಗಿ ನವೆಂಬರ್‌ 5ರಂದು ಮುಖ್ಯಮಂತ್ರಿಯಾಗಿ ಫ‌ಡ್ನವೀಸ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ನವೆಂಬರ್‌ 5ರಂದು ಫ‌ಡ್ನವೀಸ್‌ ನಗರದ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಸದ್ಯ ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಕೆಲವು ಪಕ್ಷೇತರರು ಬೆಂಬಲ ನೀಡಿದ್ದಾರೆ. ಈ ಆಧಾರದಲ್ಲಿ ರಾಜ್ಯಪಾಲರು ಬಿಜೆಪಿಯನ್ನೇ ಸರಕಾರ ರಚಿಸಲು ಆಹ್ವಾನಿಸಬೇಕಾಗುತ್ತದೆ. ಆದರೆ ಶಿವಸೇನೆಯ ಸಹಾಯ ಇಲ್ಲದೇ ಸರಕಾರ ನಡೆಸುವುದು ಬಹುಮತದ ಆಧಾರದಲ್ಲಿ ಕಷ್ಟವಾಗಿದೆ. ಸಂಪುಟ ರಚಿಸಿ ಶಿವಸೇನೆಯನ್ನು ಬೆದರಿಸುವ ತಂತ್ರ ಇದಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ಅಂತಿಮ ಹಂತದಲ್ಲಿ ಶಿವಸೇನೆಯ ಬೆಂಬಲವನ್ನು ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಇದರ ಹಿಂದೆ ಇದೆ.

ಶಿವಸೇನೆ – ಎನ್‌.ಸಿ.ಪಿ. – ಕಾಂಗ್ರೆಸ್‌ ಮೈತ್ರಿ
ಬಿಜೆಪಿ 50:50 ಸರಕಾರಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಪರ್ಯಾಯ ರಾಜಕೀಯ ಸ್ನೇಹಿತರನ್ನು ಹುಡುಕಲು ಶಿವಸೇನೆ ಮುಂದಾಗಿದೆ. ಈ ನಿಟ್ಟಿನಲ್ಲಿ ವಿಪಕ್ಷ ಸ್ಥಾನದಲ್ಲಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷದ ಬೆಂಬಲ ಪಡೆಯಲು ಶಿವಸೇನೆ ಮುಂದಾಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ಪೂರ್ಣವಾಗಿದೆ ಎಂಬ ಮಾತುಗಳೂ ರಾಜಕೀಯ ಇದೆ. ಇದು ಸಾಧ್ಯವಾದರೆ ಮಹಾಮೈತ್ರಿಯೊಂದು ಜೀವಪಡೆಯಲಿದ್ದು, ಹೊಸ ರಾಜಕೀಯ ಇತಿಹಾಸಕ್ಕೆ ಮರಾಠರ ನಾಡು ಸಾಕ್ಷಿಯಾಗಲಿದೆ.

Advertisement

ಸೈದ್ಧಾಂತಿಕ ಅಡ್ಡಿ!
ಈ ಮೂರು ಪಕ್ಷಗಳಿಗೆ ಮೈತ್ರಿ ಮಾಡಿಕೊಳ್ಳಲು ಸೈದ್ಧಾಂತಿಕ ಭಿನ್ನ ನಿಲುವುಗಳೇ ಅಡ್ಡಿಯಾಗಿದೆ. ಆದರೆ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡರೆ ಈ ತನಕ ಮಹಾರಾಷ್ಟ್ರದಲ್ಲಿ ಉಳಿಸಿಕೊಂಡಿರುವ ರಾಜಕೀಯ ನೆಲೆ ಕಳೆದು ಹೋಗುವ ಭಯ ಕಾಂಗ್ರೆಸ್‌ ಮತ್ತು ಎನ್‌.ಸಿ.ಪಿ.ಯದ್ದು.

ಒಟ್ಟಾರೆಯಾಗಿ ಮಹಾರಾಷ್ಟ್ರ ರಾಜಕೀಯ ಚಿತ್ರಣಕ್ಕೆ ಇಡೇ ದೇಶವೇ ಸಾಕ್ಷಿಯಾಗುತ್ತಿದ್ದು, ದಿನಕ್ಕೊಂದು ತಿರುವಿನತ್ತ ಮುಖಮಾಡುತ್ತಿದೆ. ಈ ಹಿಂದಿನಂತೆ ಮತ್ತೆ ಒಂದಾಗಿ ಬಿಜೆಪಿ-ಸೇನೆ ಸರಕಾರ ಮಾಡುತ್ತದೆಯೇ? ಇಲ್ಲದೇ ಹೋದರೆ ಬಿಜೆಪಿ ಬೆಂಬಲಕ್ಕೆ ಎನ್‌ಸಿಪಿ ನಿಲ್ಲುವುದೇ? ಅಥವ ಬಿಜೆಪಿಯನ್ನು ಒಂಟಿಯನ್ನಾಗಿಸಿ ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್‌ ಸರಕಾರ ರಚಿಸುವುದೇ ಎಂಬುದನ್ನು ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next