Advertisement

ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಭರದ ಸಿದ್ದತೆ

04:32 PM Oct 10, 2022 | Team Udayavani |

ನರಗುಂದ: ಉತ್ತರ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಪ್ರೊ ಕಬಡ್ಡಿ ಮಾದರಿಯಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಬಂಡಾಯ ನಾಡು ನರಗುಂದ ಸಾಕ್ಷಿಯಾಗಲಿದೆ. ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಪ್ರೇಕ್ಷಕರು ಹೆಚ್ಚೆಚ್ಚು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ಉಮೇಶಗೌಡ ಪಾಟೀಲ ಹೇಳಿದರು.

Advertisement

ರವಿವಾರ ಸಾಯಂಕಾಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿಯ ಅಂಗಣದ ಸಿದ್ಧತೆ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮೆಲ್ಲರ ನೆಚ್ಚಿನ ನಾಯಕರು, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ 64ನೇ ಜನ್ಮದಿನದ ಅಂಗವಾಗಿ ಲಯನ್ಸ್‌ ಕ್ಲಬ್‌, ಸಿ.ಸಿ.ಪಾಟೀಲ ಅಭಿಮಾನಿ ಬಳಗ, ಭಾರತೀಯ ಜನತಾ ಪಕ್ಷದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚ್ಯೂರ್‌ ಕಬಡ್ಡಿ ಅಸೋಸಿಯೇಷನ್‌ ಸಹಯೋಗದಲ್ಲಿ ಅ.12, 13, 14ರಂದು ಹೊನಲು-ಬೆಳಕಿನ ಅಖೀಲ ಭಾರತ ಪುರುಷ ಹಾಗೂ ಮಹಿಳಾ ಎ ಶ್ರೇಣಿಯ ಆಹ್ವಾನಿತ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ 7, 8 ರಾಜ್ಯಗಳ 65 ತಂಡಗಳು ಭಾವಗಹಿಸಲಿದ್ದು, ಈಗಾಗಲೇ ರಾಜ್ಯ-ರಾಷ್ಟ್ರಮಟ್ಟದ ಎಲ್ಲ ಅನುಮತಿಯೊಂದಿಗೆ ಸಿದ್ಧತೆ ಕೈಗೊಳ್ಳಲಾಗಿದೆ. ವಿಶೇಷವಾಗಿ ಪಂದ್ಯಾವಳಿಯಲ್ಲಿ ರಾಜ್ಯ, ರಾಷ್ಟ್ರಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ ಕಬಡ್ಡಿ ಕ್ರೀಡಾಳುಗಳು ಸೆಣಸಲಿದ್ದಾರೆ ಎಂದು ಹೇಳಿದರು.

12ರಂದು ಉದ್ಘಾಟನೆ: ಅ.12ರಂದು ಸಂಜೆ 4 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್‌ ಕಟೀಲ್‌ ಅವರು ಪಂದ್ಯಾವಳಿ ಉದ್ಘಾಟಿಸಲಿದ್ದು, ಈ ಭಾಗದ ಎಲ್ಲ ಸಂಸದರು, ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಒಟ್ಟು 700 ಕ್ರೀಡಾಳುಗಳು ಭಾಗವಹಿಸಲಿದ್ದು, ನಿವೃತ್ತ ಕ್ರೀಡಾ ಧಿಕಾರಿಗಳು, ಅಂತಾರಾಷ್ಟ್ರೀಯ ಖ್ಯಾತಿಯ 100 ಜನ ನಿರ್ಣಾಯಕರು ಪಾಲ್ಗೊಳ್ಳಲಿದ್ದಾರೆ. ಈ ಭಾಗದ ಕಬಡ್ಡಿ ಪ್ರೇಮಿಗಳಿಗೆ ಇದನ್ನು ಕ್ರೀಡಾ ಔತಣವಾಗಿ ಆಯೋಜಿಸಲಾಗಿದೆ. ಪಂದ್ಯಾವಳಿಯನ್ನು ಅರ್ಥಪೂರ್ಣಗೊಳಿಸಲು ಸ್ಥಳೀಯವಾಗಿ ತಯಾರಿಸಲಾದ 17 ಮಾರಾಟ ಮಳಿಗೆ, ತಿಂಡಿ-ತಿನಿಸುಗಳ ಮಳಿಗೆ, ಸರ್ಕಾರದ ಸೌಲಭ್ಯಗಳನ್ನು ಸ್ಥಳದಲ್ಲಿ ಒದಗಿಸಲು ವಿವಿಧ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಉಮೇಶಗೌಡ ಪಾಟೀಲ ವಿವರಿಸಿದರು.

Advertisement

40ರಿಂದ 50 ಸಾವಿರ ಪ್ರೇಕ್ಷಕರ ನಿರೀಕ್ಷೆ: ಪಂದ್ಯಾವಳಿಯಲ್ಲಿ ಸುಮಾರು 40ರಿಂದ 50 ಸಾವಿರ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಪೂರ್ಣ ವಾಟರ್‌ ಪ್ರೂಫ್‌ ಒಳಗೊಂಡ ಮ್ಯಾಟ್‌ ಕಬಡ್ಡಿ ಪಂದ್ಯಾವಳಿ ಇದಾಗಿದೆ. ಪ್ರೇಕ್ಷಕರಿಗೆ ಮತ್ತು ಕ್ರೀಡಾಳುಗಳಿಗೆ ಪ್ರತ್ಯೇಕ ಎರಡು ಹೊತ್ತಿನ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಕ್ರೀಡಾಳುಗಳಿಗೆ ಬಿಸಿಎಂ, ಎಂಜಿನಿಯರಿಂಗ್‌ ಕಾಲೇಜು ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದೇ ಬಾರಿಗೆ ನಾಲ್ಕು ಆಟಗಳ ಸಿದ್ಧತೆಗೆ ಮೈದಾನ ಸಿದ್ಧಪಡಿಸಿದ್ದು, ಒಟ್ಟು 75 ಮ್ಯಾಚ್‌ ನಡೆಯಲಿವೆ. 3 ದಿನಗಳ ಕಾಲ ಬಸ್‌ ನಿಲ್ದಾಣದಿಂದ ಕ್ರೀಡಾಂಗಣದವರೆಗೆ ಪ್ರೇಕ್ಷಕರ ಅನುಕೂಲಕ್ಕಾಗಿ ನಿರಂತರ ಎರಡು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಉಮೇಶಗೌಡ ಪಾಟೀಲ ತಿಳಿಸಿದರು.

ಈ ವೇಳೆ ಟಿಎಪಿಸಿಎಂಎಸ್‌ ಅಧ್ಯಕ್ಷ ಅಜ್ಜಪ್ಪ ಹುಡೇದ, ಸಿ.ಸಿ.ಪಾಟೀಲ ಅಭಿಮಾನಿ ಬಳಗ ಅಧ್ಯಕ್ಷ ಮಲ್ಲಪ್ಪ ಮೇಟಿ, ಶಂಕರಗೌಡ ಪಾಟೀಲ, ಚನ್ನಯ್ಯ ಸಂಗಳಮಠ, ಚಂದ್ರಶೇಖರ ದಂಡಿನ, ಬಿ.ಎಸ್‌. ಪಾಟೀಲ, ಬಿ.ಎನ್‌.ಪಾಟೀಲ, ಸಂಗನಗೌಡ ಹಲಗೌಡ್ರ, ಸಿದ್ದಪ್ಪ ಯಲಿಗಾರ, ಹನುಮಂತ ಹವಾಲ್ದಾರ, ಪ್ರಕಾಶ ಹಾದಿಮನಿ, ಪ್ರಕಾಶ ಪಟ್ಟಣಶೆಟ್ಟಿ, ಅನೀಲ ಧರೆಣ್ಣವರ, ಎನ್‌.ವಿ.ಮೇಟಿ, ಶಿವರಾಜ ಕಲ್ಲಾಪೂರ, ಮಂಜು ಮೆಣಸಗಿ ಮುಂತಾದವರಿದ್ದರು.

ಸಚಿವ ಸಿ.ಸಿ.ಪಾಟೀಲ 64ನೇ ಜನ್ಮದಿನ

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ 64ನೇ ಜನ್ಮದಿನದ ಅಂಗವಾಗಿ ಲಯನ್ಸ್‌ ಕ್ಲಬ್‌, ಸಿ.ಸಿ.ಪಾಟೀಲ ಅಭಿಮಾನಿ ಬಳಗ, ಭಾರತೀಯ ಜನತಾ ಪಕ್ಷದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ಸಹಯೋಗದಲ್ಲಿ ಅ.12, 13, 14ರಂದು ಹೊನಲು-ಬೆಳಕಿನ ಅಖೀಲ ಭಾರತ ಪುರುಷ ಹಾಗೂ ಮಹಿಳಾ ಎ ಶ್ರೇಣಿಯ ಆಹ್ವಾನಿತ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next