Advertisement

ಕಾಮಗಾರಿ ಪೂರ್ಣ: ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆ

09:28 PM Jan 27, 2020 | Sriram |

ಕಾಸರಗೋಡು: ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ದಿಂದ ಕೆಲವು ವರ್ಷಗಳ ಹಿಂದೆ ಕೇರಳ ಸರಕಾರ ಆರಂಭಿಸಿದ ಕೇರಳ ರಾಜ್ಯ ತುಳು ಅಕಾಡೆಮಿ ಕಳೆದ ಹಲವು ವರ್ಷಗಳಿಂದ ನಿರೀಕ್ಷೆಯಂತೆ ಕಾರ್ಯನಿರ್ವಹಿಸದಿದ್ದರೂ, ಇದೀಗ ತುಳು ಅಕಾಡೆಮಿಗೆ “ತುಳು ಭವನ’ ನಿರ್ಮಾಣದ ಪ್ರಥಮ ಹಂತದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ಮೂಲಕ ತುಳು ಅಕಾಡೆಮಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

Advertisement

ಬಹು ನಿರೀಕ್ಷಿತ ಕೇರಳ ರಾಜ್ಯ ತುಳು ಅಕಾಡೆಮಿಯ ತುಳು ಭವನದ ಪ್ರಥಮ ಹಂತದ ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ತುಳು ಅಕಾಡೆಮಿ ಭವನ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷ ದಿಂದ ಭರದಿಂದ ಸಾಗಿತ್ತು. ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತುಳು ಭವನ ಕಚೇರಿಯು 2,500 ಚದರ ಅಡಿ ವ್ಯಾಪ್ತಿ ಯಲ್ಲಿದೆ. ಕಚೇರಿಯಲ್ಲಿ ಅಧ್ಯಕ್ಷ, ಕಾರ್ಯ ದರ್ಶಿಗಳ ಕಚೇರಿ, ಗ್ರಂಥಾಲಯ, ಸಭಾ ಕೊಠಡಿ ಸಹಿತ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಗಳಿವೆ. ಅತಿಥಿಗಳಿಗೆ ತಂಗಲು ವ್ಯವಸ್ಥೆಗಳು ತುಳು ಭವನದಲ್ಲಿವೆ ಎಂದು ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಸಾಲಿಯಾನ್‌ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕಾಡೆಮಿ ಕಾರ್ಯ ಚಟುವಟಿಕೆಗಳಿಗೆ ಹೊಸ ಹುರುಪು ಸಿಕ್ಕಿದೆ. ತುಳು ಜಾನಪದೀಯ ಸಂಸ್ಕೃತಿ, ಕಲೆ, ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಅಕಾಡೆಮಿ ಸಾರಥ್ಯದಲ್ಲಿ ತುಳು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎರಡು ದಿನಗಳ ವಿಚಾರ ಸಂಕಿರಣವನ್ನು ಕಾಸರಗೋಡಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಲವು ವರ್ಷಗಳಿಂದ ಸ್ತಬ್ಧವಾಗಿದ್ದ ತುಳು ಅಕಾಡೆಮಿಯ ಮುಖವಾಣಿ ತೆಂಬರೆ ತ್ತೈಮಾಸಿಕದ ಮುದ್ರಣವು ಆರಂಭಗೊಂಡಿದೆ. ಮಂಜೇಶ್ವರ ತಾಲೂಕು ಹೊಸಂಗಡಿ ಸಮೀಪವಿರುವ ದುರ್ಗಿಪಳ್ಳದ ತುಳು ಭವನ ಕಚೇರಿಯಲ್ಲಿಯೇ ಮುಂದಿನ ಎಲ್ಲ ತುಳು ಸಂಬಂಧ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಮಂಜೇಶ್ವರ ಶಾಸಕರಾಗಿದ್ದ ದಿ|ಪಿ.ಬಿ.ಅಬ್ದುಲ್‌ ರಜಾಕ್‌ ಅವರ ಶಾಸಕ ನಿಧಿಯಿಂದ ಸುಸಜ್ಜಿತ ಸಭಾಂಗಣದ ನಿರ್ಮಾಣವನ್ನು ಶೀಘ್ರವೇ ಮುಂದುವರಿಸ ಲಾಗುವುದು. ಸಭಾಂಗಣ ನಿರ್ಮಾಣಕ್ಕೆ ಅಗತ್ಯವಾದ ಸುಮಾರು 45 ಲಕ್ಷ ರೂ.ಗಳನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಿ ಸುಸಜ್ಜಿತ ಸಭಾಂಗಣ ಹಾಗೂ ಮ್ಯೂಸಿಯಂ ನಿರ್ಮಾಣ ಕಾಮಗಾರಿಯನ್ನು ಮುನ್ನಡೆಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ. ತುಳು ಭವನ ನಿರ್ಮಾಣಗೊಳ್ಳುತ್ತಿರುವ ದುರ್ಗಿಪಳ್ಳದಲ್ಲಿ ಸೂಕ್ತ ನೀರು ಪೂರೈಕೆ ಮತ್ತು ವಿದ್ಯುತ್‌ ಪೂರೈಕೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯ ತುಳು ಭಾಷಿಗರ ಹೆಮ್ಮೆಯ ತಾಣವಾಗಿ ತುಳು ಭವನದ ನಿರ್ಮಾಣ ವಾಗಲಿದ್ದು, ಸುಸಜ್ಜಿತ ಸಾಂಸ್ಕೃತಿಕ ರಂಗ ಮಂದಿರ ನಿರ್ಮಾಣ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಕಾಸರಗೋಡು ಅಭಿವೃದ್ಧಿ ಯೋಜನೆಯಡಿ ಮಾಜಿ ಸಂಸದ ಪಿ. ಕರುಣಾಕರನ್‌ ರಂಗ ಮಂದಿರ ನಿರ್ಮಾಣಕ್ಕೆ ಅನುಕೂಲ ವಾಗುವಂತೆ ಒಂದು ಕೋಟಿ ರೂ. ಮೊತ್ತದ ಹಣಕಾಸು ನೆರವನ್ನು ಮೀಸಲಿಡಲು ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಅದರಂತೆ ರಂಗ ಮಂದಿರದ ರೂಪುರೇಷೆ ಪೂರ್ಣಗೊಂಡಲ್ಲಿ ರಂಗ ಮಂದಿರದ ಕಾಮಗಾರಿ ಯನ್ನು ಶೀಘ್ರದಲ್ಲೇ ಅರಂಭಿಸ ಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.

Advertisement

ರಂಗ ಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ, ತುಳು ರಂಗಭೂಮಿ, ವಿವಿಧ ಜಾನಪದ ಪ್ರಕಾರಗಳು, ಪಾಡªನ ತತ್ಸಂಬಂಧ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ವಾರಕ್ಕೊಂದು ಬಾರಿ ಗ್ರಾಮಸ್ಥರಿಗೆ ತುಳು ಸಿನಿಮಾ ವೀಕ್ಷಣೆ, ಸಾಕ್ಷÂ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ.ಸಾಲಿಯಾನ್‌ ಹೇಳಿದ್ದಾರೆ.

ತುಳು ಸಂಸ್ಕೃತಿಯ ಬಗ್ಗೆ ಆಸಕ್ತ ವಿದ್ಯಾರ್ಥಿ ಸಮೂಹದ ಸಂಶೋಧನೆಗೆ ಅನುಕೂಲ ವಾಗುವಂತೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ತಾಣವಾಗಿ ತುಳು ಭವನ ಸಮುಚ್ಚಯವನ್ನು ಬೆಳೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತುಳು ಸಂಸ್ಕೃತಿಯ ಉತ್ತೇಜನ
ಕೇರಳ ರಾಜ್ಯದ ಕಾಸರಗೋಡು ಪ್ರದೇಶದಲ್ಲಿ ವ್ಯಾಪಿಸಿರುವ ತುಳು ಸಂಸ್ಕೃತಿಯ ಉತ್ತೇಜನಕ್ಕಾಗಿ ಕೇರಳ ತುಳು ಅಕಾಡೆಮಿ ವಿಧ್ಯುಕ್ತ ಆರಂಭ 2007ರ ಸೆಪ್ಟಂಬರ್‌ನಲ್ಲಿ ನಡೆದಿತ್ತು. ಅಂದಿನ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌ ಅಕಾಡೆಮಿ ಉದ್ಘಾಟನೆ ಗೈದಿದ್ದರು. ತುಳು ಅಕಾಡೆಮಿ ಸ್ಥಾಪನೆಯ ಹಿಂದಿನ ಶಕ್ತಿಯಾಗಿದ್ದ ಡಾ| ವೆಂಕಟರಾಜ ಪುಣಿಂಚತ್ತಾಯರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ತುಳು ತೇರು ನಾನಾ ಚಟುವಟಿಕೆ ಗಳೊಂದಿಗೆ ಮುಂಬೈ, ತಿರುವನಂತಪುರ ನಗರಗಳಲ್ಲಿ ಅನಾವರಣಗೊಂಡಿತ್ತು. ಅಂದಿನ ಮಂಜೇಶ್ವರ ಶಾಸಕರಾಗಿದ್ದ ಸಿ.ಎಚ್‌. ಕುಂಞಂಬು ಅವರ ಕನಸಿನ ಕೂಸಾದ ಕೇರಳ ತುಳು ಅಕಾಡೆಮಿ ಅವಿರತ ಪರಿಶ್ರಮದೊಂದಿಗೆ ಗರಿಗೆದರಿತ್ತು. 2007ರಿಂದ ಮೂರು ವರ್ಷ ಮುಂದುವರಿದಿದ್ದ ಅಕಾಡೆಮಿ ಕಾರ್ಯಚಟುವಟಿಕೆಗಳು ಅನಂತರ ಹಲವು ವರ್ಷಗಳ ಕಾಲ ಬಾಲಗ್ರಹಪೀಡೆಗೆ ಒಳಗಾಗಿತ್ತು. ತುಳು ಭವನ ನಿರ್ಮಾಣದ ಶಂಕು ಸ್ಥಾಪನೆ ಯನ್ನು ಕೇರಳ ವಿಧಾನಸಭಾ ಸ್ಪೀಕರ್‌ ಶ್ರೀರಾಮಕೃಷ್ಣನ್‌ 2019ರ ಫೆ. 28ರಂದು ನಿರ್ವಹಿಸಿದ್ದರು.

ಸಿಬಂದಿ ನೇಮಕವಾಗಲಿ
ಕಚೇರಿ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಬಂದಿಯ ನೇಮಕವನ್ನು ರಾಜ್ಯ ಸರಕಾರ ಮಾಡಬೇಕಿದೆ. ಕಲೆ, ಸಂಸ್ಕೃತಿ ಸಹಿತ ಸಾಹಿತ್ಯದ ಬಗ್ಗೆ ಪರಿಚಯವುಳ್ಳ ಸಿಬಂದಿಗಳು ನೇಮಕಗೊಂಡರೆ ತುಳು ಭವನದ ಕೆಲಸ ಕಾರ್ಯಗಳು ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನೆರವಾಗಲಿದೆ. ಅಕಾಡೆಮಿಯಿಂದ ತುಳು ತ್ತೈಮಾಸಿಕ ತೆಂಬರೆ ಉತ್ತಮವಾಗಿ ಮೂಡಿ ಬಂದಿದೆ. ಅನ್ಯ ಭಾಷಾಸಕ್ತರಿಗೆ ತುಳು ಲಿಪಿ ಕಲಿಕೆಗೆ ಸಹಕಾರಿಯಾಗುವಂತೆ “ಬರವುದ ಬಿದೆ’ ಪುಸ್ತಕದ ಲೋಕಾರ್ಪಣೆಯು ಅಕಾಡೆಮಿ ವತಿಯಿಂದ ನಡೆದಿದೆ. ಫೆಬ್ರವರಿ ತಿಂಗಳಲ್ಲಿ ತುಳು ಭವನದ ಉದ್ಘಾಟನೆ ನಡೆಸುವ ಯೋಚನೆ ಇದೆ.
-ಉಮೇಶ್‌ ಎಂ. ಸಾಲಿಯಾನ್‌,
ಅಧ್ಯಕ್ಷ, ಕೇರಳ ತುಳು ಅಕಾಡೆಮಿ.

Advertisement

Udayavani is now on Telegram. Click here to join our channel and stay updated with the latest news.

Next