Advertisement

ಮೈದುಂಬಿ ಹರಿದ ತುಂಗಭದ್ರೆ; ಬೆಳೆಗಳು ಜಲಾವೃತ

03:04 PM Aug 12, 2018 | Team Udayavani |

ಕಂಪ್ಲಿ: ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಗೆ ಇನ್ನು ಕೇವಲ ಎರಡು ಅಡಿ ಬಾಕಿ ಉಳಿದಿದ್ದು, ಜಲಾಶಯಕ್ಕೆ 90 ಸಾವಿರ ಕ್ಯುಸೆಕ್ಸ್‌ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ 32 ಕ್ರೆಸ್ಟ್‌ ಗೇಟುಗಳ ಮೂಲಕ ತುಂಗಭದ್ರಾ ನದಿಗೆ 90 ಸಾವಿರ ಕ್ಯುಸೆಕ್ಸ್‌ ನೀರು ಬಿಟ್ಟಿರುವುದರಿಂದ ಕಂಪ್ಲಿ ಕೋಟೆ ಸೇತುವೆ ಮುಳುಗಡೆಗೆ ಕೇವಲ ಒಂದಡಿ ಬಾಕಿ ಉಳಿದಿದ್ದು, ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

2014ರಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾಗದಿರುವುದರಿಂದ ಜಲಾಶಯ ಭರ್ತಿಯಾಗಿರಲಿಲ್ಲ ಹಾಗೂ ನದಿಗೆ ನೀರು ಬಿಡದಿರುವುದರಿಂದ ಕಂಪ್ಲಿ ಭಾಗದಲ್ಲಿ ತುಂಗಭದ್ರಾ ನದಿ ತುಂಬಿ ಹರಿದಿರಲಿಲ್ಲ. ಆದರೆ ಈ ವರ್ಷ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಅವಧಿಗೂ ಮುನ್ನ ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಈ ಹಿನ್ನೆಲೆಯಲ್ಲಿ ಜಲಾಶಯದಿಂದ ತುಂಗಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ 12 ದಿನಗಳ ಕಾಲ ನೀರು ಹರಿ ಬಿಡಲಾಗಿತ್ತು.

ಇದೀಗ ಪುನಃ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಬರುತ್ತಿರುವುದರಿಂದ ಇಂದು ಸುಮಾರು 90 ಸಾವಿರ ಕ್ಯುಸೆಕ್ಸ್‌ ನೀರು ನದಿಗೆ ಬಿಟ್ಟಿದ್ದು, ಕಂಪ್ಲಿ ಕೋಟೆ ಸಮೀಪ ನದಿಗೆ ನಿರ್ಮಿಸಿರುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಮೂರ್‍ನಾಲ್ಕು ವರ್ಷಗಳ ನಂತರ ಬಿಟ್ಟಿರುವುದರಿಂದ ನದಿಯಲ್ಲಿದ್ದ ಗಿಡ ಗಂಟಿಗಳು ನೀರಿನೊಂದಿಗೆ ಹರಿದು ಬರುತ್ತಿರುವುದರಿಂದ ಕಸಕಡ್ಡಿಗಳು ಸೇತುವೆ ಮೇಲೆ ಬಂದಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಇನ್ನು ಹತ್ತು ಸಾವಿರ ಕ್ಯುಸೆಕ್ಸ್‌ ನೀರು ಬಿಟ್ಟರೆ ಸೇತುವೆ ಮೇಲೆ ನೀರು ಹರಿಯಲಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಹತ್ತಿರ ಕಟ್ಟೆಚ್ಚರ ವಹಿಸಲಾಗಿದೆ.

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ 
ಮೂರ್‍ನಾಲ್ಕು ವರ್ಷಗಳ ನಂತರ ಕಂಪ್ಲಿ ಭಾಗದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಆಗಮಿಸುತ್ತಿದ್ದು, ಸಾರ್ವಜನಿಕರು ಮತ್ತು ವಾಹನಗಳ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ತುಂಗಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಜನತೆ ಜಾಗ್ರತೆಯಲ್ಲಿರುವಂತೆ ಸೂಚಿಸಿದ್ದಾರೆ. ನದಿ ಪಾತ್ರದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಜಲಾವೃತಗೊಂಡ ಜಮೀನುಗಳು
ತುಂಗಭದ್ರಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನದಿ ತೀರದ ಬ‌ಹುತೇಕ ಜಮೀನುಗಳು ಜಲಾವೃತಗೊಂಡಿವೆ. ಕೋಟೆ ಬಳಿಯಲ್ಲಿನ ಕಬ್ಬಿನ ಗದ್ದೆ, ಬಾಳೆ ತೋಟಗಳು ಜಾಲವೃತಗೊಂಡಿದ್ದು, ನದಿಯಲ್ಲಿ ನೀರಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಬೆಳೆಗಳು ಹಾನಿಯಾಗಲಿವೆ ಎಂದು ರೈತರು ಆತಂಕಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next