Advertisement

ಉಕ್ಕಿ ಹರಿಯುತ್ತಿರುವ ಘಟಪ್ರಭೆ : ಮತ್ತೇ ಪ್ರವಾಹ ಸಂಕಟ ಪ್ರಾರಂಭ

08:44 PM Jul 23, 2021 | Team Udayavani |

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಹಾಗೂ ಹಿಡಕಲ್ ಜಲಾಶಯದಿಂದಲೂ ಘಟಪ್ರಭಾ ನದಿಗೆ ನೀರು ಬಿಟ್ಟಿರುವ ಕಾರಣ ಘಟಪ್ರಭಾ ನದಿಯು ಉಕ್ಕಿಹರಿಯುತ್ತಿರುವ ಕಾರಣ ಶುಕ್ರವಾರ ಸಮೀಪದ ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಮೂರು ಸೇತುವೆಗಳು ಜಲಾವೃತವಾಗಿವೆ.

Advertisement

ಶುಕ್ರವಾರ ಸಂಜೆಯ ಮಾಹಿತಿಯಂತೆ ಘಟಪ್ರಭಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಶುಕ್ರವಾರ ಸಂಜೆ ಗೋಕಾಕ-ಲೋಳಸೂರ ಸೇತುವೆಯು ಜಲಾವೃತವಾಗಿದೆ. ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಮೂರು ಸೇತುವೆಗಳು ಜಲಾವೃತವಾದ ಕಾರಣ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ, ಯರಗುದ್ರಿ, ತಿಮ್ಮಾಪೂರ, ಅರಳಿಮಟ್ಟಿ, ವೆಂಕಟಾಪೂರ, ಬೀಸನಕೊಪ್ಪ, ಢವಳೇಶ್ವರ, ಕುಲಗೋಡ, ಹುಣಶ್ಯಾಳಪಿವಾಯ್, ಮುಧೊಳ ತಾಲೂಕಿನ ಮಿರ್ಜಿ, ಚನ್ನಾಳ, ಒಂಟಗೋಡಿ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಪ್ರಸಕ್ತ ವರ್ಷ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಸೇತುವೆಗಳು ಮುಳುಗಡೆಯಾಗಿವೆ.

ಆತಂಕದಲ್ಲಿ ಗ್ರಾಮಸ್ಥರು :

ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿಭಾಗದಲ್ಲಿ ಮಳೆ ಹೀಗೆ ಮುಂದುವರೆದರೆ ಶನಿವಾರ ಸಂಜೆಯೊಳಗೆ ೨೦೧೯ರಂತೆ ಮಹಾಪ್ರವಾಹ ಬಂದು ನಂದಗಾಂವ-ಢವಳೇಶ್ವರ ಗ್ರಾಮಗಳು ಮುಳಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಮತ್ತೇ ಮಹಾಪ್ರವಾಹದ ಆತಂಕ ಎದುರಾಗಿದೆ.

ಶಾಸಕರು-ಅಧಿಕಾರಿಗಳ ಭೇಟಿ :

Advertisement

ಪ್ರವಾಹ ಹೆಚ್ಚಾಗುತ್ತಿರುವ ಮಾಹಿತಿ ಬರುತ್ತಿದ್ದಂತೆ ಗುರುವಾರ ಸಂಜೆ ೬ಕ್ಕೆ ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಎಸಿ ಸಿದ್ದು ಹುಲ್ಲೋಳ್ಳಿ, ರಬಕವಿ-ಬನಹಟ್ಟಿ ತಹಶೀಲ್ದಾರ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ ಬೆಳಗಾವಿ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿನ ನಿರಂತರ ಮಳೆಯಿಂದಾಗಿ ಪ್ರವಾಹ ಬರುತ್ತಿದೆ. ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳ ನದಿಪಾತ್ರದಲ್ಲಿನ ಜನತೆಯು ಸುರಕ್ಷತಾ ದೃಷ್ಠಿಯಿಂದ ಕಾಳಜಿ ಕೇಂದ್ರ, ಸುರಕ್ಷೀತ ಪ್ರದೇಶದಲ್ಲಿ ಶಾಲೆಗಳಿಗೆ ಸ್ಥಳಾಂತರಗೊಳ್ಳಬೇಕು. ಜಾನುವಾರುಗಳನ್ನು ಸಹ ಸ್ಥಳಾಂತರಗೊಳಿಸಿ ಸುರಕ್ಷೀತವಾಗಿರಬೇಕು.

ಯಾರು ಅಲಕ್ಷ್ಯ ಮಾಡಬಾರದು. ಶನಿವಾರ ಮುಂಜಾನೆ ನಂದಗಾಂವ ಮತ್ತು ತಮದಡ್ಡಿ ಗ್ರಾಮಗಳಿಗೆ ಬೋಟ ವ್ಯವಸ್ಥೆಯನ್ನು ಕಲ್ಪಿಸಲಾಗುವದು. ಗ್ರಾಮಸ್ಥರು ಜಾಗೃತರಾಗಿದ್ದು, ಪ್ರವಾಹ ಪರಿಣಾಮ ಬೀರುವ ಮುನ್ನವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವದು ಉತ್ತಮ.  ಪ್ರವಾಹವನ್ನು ಎದುರಿಸಲು ನಮ್ಮ ತಾಲೂಕಾ ಆಡಳಿತವು ಸರ್ವಸನ್ನದ್ಧವಾಗಿದೆ ಎಂದರು.

ಜಮಖಂಡಿ ಎಸಿ ಸಿದ್ದು ಹುಲ್ಲೋಳ್ಳಿ ಮಾತನಾಡಿ ಪ್ರವಾಹ ಪೀಡಿತ ಪ್ರತಿಯೊಂದು ಗ್ರಾಮಗಳಿಗೆ ನೊಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಶನಿವಾರ ನೋಡೆಲ್ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಶಾಲಾಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮದಲ್ಲಿ ಪ್ರವಾಹ ಕಮೀಟಿಗಳ ಸಭೆ ನಡೆಸಿ ಪ್ರವಾಹ ಎದರಿಸಲು ಬೇಕಾದ ಎಲ್ಲಾ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವದು, ಕಾಳಜಿಕೇಂದ್ರಗಳಲ್ಲಿ ಊಟ ವ್ಯವಸ್ಥೆಗೆ ಬೇಕಾದ ಸಿದ್ದತೆಗಳನ್ನು ಮಾಡಲಾಗುವದು ಎಂದರು.

ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಬನಹಟ್ಟಿ ಸಿಪಿಆಯ್ ಜೆ.ಕರುಣೇಶಗೌಡ, ನೊಡೆಲ್ ಅಧಿಕಾರಿಗಳಾದ ಎಚ್.ಎಸ್.ಚಿತ್ತರಗಿ, ಡಿ.ಬಿ.ಪಠಾಣ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ತೇರದಾಳ ಮತಕ್ಷೇತ್ರ ಯುವಘಟಕದ ಅಧ್ಯಕ್ಷ ಲಕ್ಕಪ್ಪ ಪಾಟೀಲ, ಬಿಜೆಪಿ ಮುಖಂಡರಾದ ಚನ್ನಪ್ಪ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ, ಠಾಣಾಧಿಕಾರಿ ವಿಜಯ ಕಾಂಬಳೆ, ಕಂದಾಯ ಅಧಿಕಾರಿ ಬಿ.ಆರ್.ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ತ್ರೀವೇಣಿ ದೇವರಮನಿ ಸೇರಿದಂತೆ ನಂದಗಾಂವ ಮತ್ತು ಢವಳೇಶ್ವರ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next