Advertisement

ಇಂದು ಸಂಪೂರ್ಣ ಲಾಕ್‌ಡೌನ್‌

06:36 AM May 24, 2020 | mahesh |

ಕಲಬುರಗಿ: ಕೋವಿಡ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಮುಂದುವರಿಸಲಾಗಿದ್ದು, ಮೇ 24ರಂದು ಸಂಪೂರ್ಣ ಲಾಕ್‌ಡೌನ್‌ ಜಾರಿ ಇರಲಿದ್ದು, ಮೇ 25ರಂದು ರಂಜಾನ್‌ ಹಬ್ಬದಂದು ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ.

Advertisement

ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ವಾರದ ಆರು ದಿನ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ಬಸ್‌ ಸಂಚಾರ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಪ್ರತಿ ರವಿವಾರ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿ ಇರಲಿದೆ ಎಂದು ಘೋಷಿಸಲಾಗಿದೆ. ಹೀಗಾಗಿ ಶನಿವಾರ ಸಂಜೆ 7ರಿಂದಲೇ ಲಾಕ್‌ಡೌನ್‌ ಜಾರಿಯಾಗಿದ್ದು, ಇದು ಮೇ 25ರ ಬೆಳಗ್ಗೆ 7ಗಂಟೆ ವರೆಗೆ ಇರಲಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಮಾರಾಟ, ಕಿರಾಣಿ ಅಂಗಡಿ, ಹಾಲು ಮಾರಾಟ, ಔಷಧಿ ಮಾರಾಟ, ಆಸ್ಪತ್ರೆಗಳ ಸೇವೆ ಯಥಾ ಪ್ರಕಾರ ಇರಲಿದೆ. ಉಳಿದಂತೆ ಸಾರಿಗೆ ಬಸ್‌ ಸಂಚಾರ, ಆಟೋ, ಮದ್ಯ ಮಾರಾಟ ಹಾಗೂ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರಾರ್ಥನೆ ನಿಷೇಧ: ಕೋವಿಡ್ ಸೋಂಕು ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮವಾಗಿ ಮೇ 25ರಂದು ದರ್ಗಾ, ಮಸೀದಿಗಳಲ್ಲಿ ರಂಜಾನ್‌ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಮನೆಯಲ್ಲೇ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸಬೇಕೆಂದು ರಾಜ್ಯ ವಕ್ಫ್ ಬೋರ್ಡ್‌ ಸಹ ಮಾರ್ಗಸೂಚಿ ನೀಡಿದ್ದು, ಅವುಗಳನ್ನು ಪಾಲಿಸಬೇಕೆಂದು ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ ಸೂಚಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವಂತಿಲ್ಲ. ಜತೆಗೆ ಹಬ್ಬದ ಶುಭ ಕೋರುವ ನಿಟ್ಟಿನಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಂತಿಲ್ಲ. ವಾಹನಗಳಲ್ಲಿ ಅನಾವಶ್ಯಕವಾಗಿ ಸುತ್ತಾಡುವಂತಿಲ್ಲ. ಅಗತ್ಯ ಕೆಲಸ-ಕಾರ್ಯಗಳಿದ್ದರೆ ಮಾತ್ರ ಬೈಕ್‌ಗಳಲ್ಲಿ ಒಬ್ಬರೇ ಸಂಚರಿಸಬೇಕೆಂದು ತಾಕೀತು ಮಾಡಿದ್ದಾರೆ.

ಬಿಗಿ ಭದ್ರತೆ-ಡ್ರೋಣ್‌ ನಿಗಾ
ರವಿವಾರದ ಲಾಕ್‌ಡೌನ್‌ ಮತ್ತು ರಂಜಾನ್‌ ಹಬ್ಬದ ನಿಮಿತ್ತ ಜಿಲ್ಲಾದ್ಯಂತ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಉಪ ಪೊಲೀಸ್‌ ಆಯುಕ್ತ ಡಿ. ಕಿಶೋರ ಬಾಬು ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಐವರು ಎಸಿಪಿ, 17 ಇನ್ಸ್‌ಪೆಕ್ಟರ್‌, ಐವರು ಪಿಎಸ್‌ಐ, 50 ಜನ ಎಎಸ್‌ಐ ಹಾಗೂ 350 ಪೇದೆ, 250 ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಕೆಎಸ್‌ಆರ್‌ಪಿಯ ಮೂರು ತುಕಡಿ, ಸಿಎಆರ್‌ನ ಒಂಭತ್ತು ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಡ್ರೋಣ್‌ ಕ್ಯಾಮರಾಗಳಿಂದ ನಿಗಾ ವಹಿಸಲಾಗುತ್ತಿದೆ.

Advertisement

ಕ‌ಲಬುರಗಿ ನಗರಾದ್ಯಂತ 144ನೇ
ಕಲಂ ಅಡಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಲಾಕ್‌ಡೌನ್‌ ಕಟ್ಟುನಿಟ್ಟು ಜಾರಿ ಮತ್ತು ರಂಜಾನ್‌ ಹಬ್ಬದ ದಿನ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ನಿಷೇಧಾಜ್ಞೆ ಮತ್ತು ಲಾಕ್‌ಡೌನ್‌ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಎನ್‌. ಸತೀಶಕುಮಾರ, ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next