Advertisement

ರವಿವಾರ ಸಂಪೂರ್ಣ ಲಾಕ್‌ಡೌನ್‌; ಸಂಚಾರ ನಿರ್ಬಂಧ

06:29 AM May 23, 2020 | mahesh |

ಮಂಗಳೂರು/ಉಡುಪಿ: ಲಾಕ್‌ಡೌನ್‌ 4.0 ಹಿನ್ನೆಲೆಯಲ್ಲಿ ರವಿವಾರ ದಿನಪೂರ್ತಿ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಬಂದ್‌ ವಾತಾವರಣ ಇರಲಿದೆ. ಹಾಲು, ಪತ್ರಿಕೆ ಸೇರಿದಂತೆ ದಿನಸಿ ಖರೀದಿಗೆ ಮಾತ್ರ ರವಿವಾರ ಅವಕಾಶವಿದ್ದು, ಸಂಚಾರ ಹಾಗೂ ಉಳಿದ ಅಂಗಡಿ ಮುಂಗಟ್ಟುಗಳು ಬಂದ್‌ ಆಗಲಿದೆ.

Advertisement

ಲಾಕ್‌ಡೌನ್‌ ಶನಿವಾರ ರಾತ್ರಿ 7ರಿಂದ ಆರಂಭವಾಗಿ ಸೋಮವಾರ ಬೆಳಗ್ಗೆ 7ರವರೆಗೆ ಜಾರಿಯಲ್ಲಿರಲಿದೆ. ಲಾಕ್‌ಡೌನ್‌ 1 ಹಾಗೂ 2ರ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳು ರವಿವಾರ ಜಾರಿಯಲ್ಲಿರುತ್ತದೆ. ಹೀಗಾಗಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿರುತ್ತದೆ. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಪೊಲೀಸ್‌ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಲಿದೆ. ಮದ್ಯ ಮಾರಾಟಕ್ಕೂ ಅವಕಾಶವಿಲ್ಲ.

ಆಹಾರ ಸಾಮಗ್ರಿಗಳನ್ನು ಖರೀದಿಸಲು ಒಂದು ಮನೆಯಿಂದ ಕುಟುಂಬದ ಒಬ್ಬ ಸದಸ್ಯ ಮಾತ್ರ ಅಂಗಡಿಗೆ ತೆರಳಬೇಕು. ದಿನಸಿ ತರುವ ನೆಪದಲ್ಲಿ ವಾಹನದಲ್ಲಿ ತೆರಳಲು ಅವಕಾಶವಿಲ್ಲ; ಬದಲಾಗಿ ಮನೆ ಸಮೀಪದ ದಿನಸಿ ಅಂಗಡಿಯಿಂದಲೇ ಸಾಮಾನುಗಳನ್ನು ತರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಸಂಪೂರ್ಣ ಲಾಕ್‌ಡೌನ್‌ ಸಂದರ್ಭ ಹಿರಿಯರು ಮತ್ತು ಮಕ್ಕಳು ಯಾವುದೇ ಕಾರಣಕ್ಕೂ ಪೇಟೆಗೆ ಹೋಗಬಾರದು. ಅಗತ್ಯ ವಸ್ತುಗಳ ಖರೀದಿಗೆ ಸಾಧ್ಯವಾದಷ್ಟರ ಮಟ್ಟಿಗೆ ಮನೆಯ ಇತರ ವ್ಯಕ್ತಿಗಳೇ ಹೋಗಬೇಕು ಎಂದು ಸೂಚಿಸಲಾಗಿದೆ.

ವಿವಾಹ ಸಮಾರಂಭ: ಅನುಮತಿ ಕಡ್ಡಾಯ
ರವಿವಾರ ನಡೆಯುವ ವಿವಾಹ ಸಮಾರಂಭಕ್ಕೆ ಸಂಬಂಧಿಕರು ತೆರಳುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಯ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ. ರವಿವಾರದಂದು ಲಾಕ್‌ಡೌನ್‌ ಘೋಷಿಸಲಾಗಿರುವ ಕಾರಣ ಆ ದಿನ ಮದುವೆ ಸಮಾರಂಭ ನಡೆಸುವುದಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಲಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಆವಶ್ಯಕತೆ ಇದ್ದಲ್ಲಿ ಅಂಥವರು ತೆರಳುವ ಖಾಸಗಿ ವಾಹನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. 50 ಮಂದಿಯ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲು ಅವಕಾಶ ಇದೆ. ರವಿವಾರದಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 5 ಮದುವೆ ಸಮಾರಂಭ ಈಗಾಗಲೇ ನೋಂದಣಿಯಾಗಿದೆ.

ಏನೆಲ್ಲ ಇರಲಿವೆ?
ಹಾಲಿನ ವಿತರಣಾ ವ್ಯವಸ್ಥೆ, ಔಷಧಾಲಯ ಮತ್ತು ಆನ್‌ಲೈನ್‌ ಔಷಧಿ ಸೇವೆಗಳು, ಗೃಹಬಳಕೆ ಇಂಧನದ ಟ್ಯಾಂಕರ್‌ಗಳು, ಸಿಲಿಂಡರ್‌ಗಳ ವಿತರಣೆ, ದಿನಪತ್ರಿಕೆಗಳ ವಿತರಣೆ ಹಾಗೂ ಪೆಟ್ರೋಲ್‌ ಬಂಕ್‌ಗಳು ಇರಲಿವೆ. ಈ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಶನಿವಾರ ಪ್ರಕಟವಾಗಲಿದೆ ಎಂದು ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Advertisement

ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಲಾಕ್‌ಡೌನ್‌ ದ.ಕ., ಉಡುಪಿ ಯಲ್ಲಿ ಜಾರಿಯಲ್ಲಿರುತ್ತದೆ. ಹಾಲು, ಪತ್ರಿಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರಲಿದೆ. ಸಂಚಾರ ವ್ಯವಸ್ಥೆ ಸಂಪೂರ್ಣ ಬಂದ್‌ ಆಗಲಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಜಿಲ್ಲಾಧಿಕಾರಿಗಳು, ದ.ಕ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next