ಗದಗ: ಕೋವಿಡ್ ಲಾಕ್‌ಡೌನ್ ಸರಣಿ ತುಂಡರಿಸುವ ಉದ್ದೇಶದಿಂದ ಈಗಾಗಲೇ ಐದು ದಿನಗಳ ಕಾಲ ಜಾರಿಯಲ್ಲಿದ್ದ ಸಂಪೂರ್ಣ ಲಾಕ್‌ಡೌನ್ ಅನ್ನು ಜೂ.1 ಮತ್ತು 2ರಂದು ಕೆಲ ಸಡಲಿಕೆಯೊಂದಿಗೆ ಜೂ.7ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರುತ್ತಿದ್ದರಿಂದ ಮೇ 27 ರಿಂದ 5 ದಿನಗಳ ಕಾಲ ಜಾರಿಗೊಳಿಸಲಾದ ಸಂಪೂರ್ಣ ಲಾಕ್‌ಡೌನ್ ಜೂ.1ಕ್ಕೆ ಪೂರ್ಣಗೊಳ್ಳಲಿದೆ. ಆದರೂ ಜಿಲ್ಲೆಯಲ್ಲಿ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜೂ.7ರವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು, ನಗರ ಹಾಗೂ ಗ್ರಾಮೀಣ ಪ್ರದೇಶದ ಹೋಟೆಲ್‌ಗಳು ಬಂದ್ ಇರಲಿವೆ. ಪಾರ್ಸೆಲ್ ಸೇವೆಯನ್ನೂ ನಿಷೇ ಧಿಸಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ರಾಜ್ಯ ಸರ್ಕಾರ ವಿಧಿ ಸಿದ ಕೋವಿಡ್ ಮಾರ್ಗಸೂಚಿಗಳನುಸಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಖರೀದಿಗಾಗಿ ಈವರೆಗೆ ಬೆಳಿಗ್ಗೆ 6 ರಿಂದ 10ರವರೆಗೆ ನೀಡಲಾಗಿದ್ದ ಸಮಯವನ್ನು ಬೆಳಗ್ಗೆ 6 ರಿಂದ 12 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇತ್ತೀಚೆಗೆ 300ಕ್ಕಿಂತ ಕಡಿಮೆ ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಆದರೂ ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಬೆಡ್‌ಗಳು ಲಭ್ಯವಿವೆ. ಸದ್ಯ ಜಿಲ್ಲೆಯಲ್ಲಿ 14710 ಡೋಸ್ ಕೋವಿಶೀಲ್ಡ್, 4540 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಅರ್ಹರು ಪಡೆಯಬಹುದು. ಸರ್ಕಾರದಿಂದ ಗದಗ ಜಿಲ್ಲೆಗೆ 50 ಆಕ್ಸಿಜನ್ ಕಾನ್ಸ್‌ಂಟ್ರೇಟರ್ ಒದಗಿಸಲಾಗಿದೆ. ಇದಲ್ಲದೇ, 100 ಆಕ್ಸಿಜನ್ ಕಾನ್ಸ್‌ಂಟ್ರೇಟರ್‌ಗಳನ್ನು ದಾನಿಗಳು ನೀಡಿದ್ದಾರೆ.
ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು 40 ಲಕ್ಷ ರೂ. ವೆಚ್ಚದ 22 ಕಾನ್ಸಂಟ್ರೇಟರ್ ಸೇರಿದಂತೆ ಆಕ್ಸಿಜನ್ ಸಿಲಿಂಡರ್ ಹಾಗೂ ವೈದ್ಯಕೀಯ ಸಾಮಗ್ರಿಗಳ ನೆರವು ಒದಗಿಸಿದ್ದಾರೆ ಎಂದರಲ್ಲದೇ ಅಭಿನಂದನೆ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಪರ ಜಿಲ್ಲಾ ಧಿಕಾರಿ ಸತೀಶ್ ಕುಮಾರ್ ಎಂ., ಉಪವಿಭಾಗಾಧಿ ಕಾರಿ ರಾಯಪ್ಪ ಹುಣಸಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.