ಬಾಗಲಕೋಟೆ: ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ 72 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಪೂರ್ಣ ಪಟ್ಟಿ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳ ಘೋಷಣೆಯಿಂದ ಯಾರೂ ಅಸಮಾಧಾನಗೊಳ್ಳಬೇಡಿ. ಅವಕಾಶ ಸಿಗದವರಿಗೆ ಮುಂದೆ ನಮ್ಮದೇ ಸರ್ಕಾರ ಬರಲಿದ್ದು, ಆಗ ಸೂಕ್ತ ಸ್ಥಾನಮಾನ ಕಲ್ಪಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮುಧೋಳ ನಗರದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗದ ಬಿಜೆಪಿ ಬೂತ್ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 150 ಸ್ಥಾನ ಗೆಲ್ಲಲು ನಮಗೆ ತೊಂದರೆ ಇಲ್ಲ. ನಾನು ಈಗಾಗಲೇ ಮೂರು ಬಾರಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ್ದು, ಬಿಜೆಪಿ ಪರವಾಗಿ ಉತ್ತಮ ವಾತಾವರಣವಿದೆ. ಇದನ್ನು ಕಾರ್ಯಕರ್ತರು, ಪ್ರಮುಖರು ಬಳಸಿಕೊಳ್ಳಬೇಕು.
ಅಭ್ಯರ್ಥಿಯಾರೇ ಆಗಿದ್ದರೂ ನೀವು ಬಿಜೆಪಿಗಾಗಿ ಕೆಲಸ ಮಾಡಬೇಕು ಎಂದರು. 24 ಜನ ಹಿಂದೂಗಳ ಹತ್ಯೆ ಮಾಡಿದ ಸರ್ಕಾರ ಕಿತ್ತೂಗೆಯುವ ಸಮಯ ಈಗ ಬಂದಿದೆ. ಐದು ವರ್ಷಗಳಿಂದ ನಮ್ಮ ಕಾರ್ಯಕರ್ತರು ಹೋರಾಟ ಮಾಡಿದ್ದು, ಅದಕ್ಕೆ ಪ್ರತಿಫಲ ಸಿಗುವ ಸಮಯ ಇದಾಗಿದೆ. ಚುನಾವಣೆಗೆ ಕೇವಲ 29 ದಿನ ಉಳಿದಿದೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಮುಂದಾಗಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯಲ್ಲಿದ್ದಾರೆ.
ಹೀಗಾಗಿ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಅವರು ಎಲ್ಲೇ ಹೋದರೂ ಅವರನ್ನು ಸೋಲಿಸಬೇಕು. ಚಾಮುಂಡೇಶ್ವರಿ ಬಿಟ್ಟು ಈಗ ಬಾದಾಮಿಗೆ ಬರುತ್ತಾರೆ. ಕಾಂಗ್ರೆಸ್‌ನವರು ಯಾವುದೇ ತಂತ್ರ ರೂಪಿಸಿದರೂ ಅದಕ್ಕೆ ಸೂಕ್ತ ರಣತಂತ್ರ ರೂಪಿಸಲು ಅಮಿತ್ ಶಾ ಸಮರ್ಥರಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು.
ಕಾಂಗ್ರೆಸ್ ಈಗ ಮುಳುಗುವ ಹಡಗು. ಕೊಲೆಗಡುಕ ಸರ್ಕಾರ ಕಿತ್ತೂಗೆಯಬೇಕು. ಹಣ, ಹೆಂಡದ ಬಲ, ಜಾತಿಯ ವಿಷ ಬೀಜ
ಬಿತ್ತಿದ ಸರ್ಕಾರ ಈ ರಾಜ್ಯದಲ್ಲಿ ಇರಬಾರದು ಎಂದರು.