Advertisement
ಇದು ಮೆಟ್ರೋ ರೈಲಿನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಿದ ಮೊದಲ ದಿನ ಕಂಡುಬಂದ ಮಹಿಳೆಯರ ಸಂತಸ. ಬೆಳಗ್ಗೆ 9ರ ಸುಮಾರಿಗೆ ನಿಲ್ದಾಣ ಪ್ರವೇಶಿಸಿದ ಮಹಿಳಾ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ಪ್ಲಾಟ್ ಫಾರಂನ ಮೊದಲ ತುದಿಯಲ್ಲಿ “ಮಹಿಳೆಯರಿಗೆ ಮಾತ್ರ ಪ್ರವೇಶ’ ಎಂಬ ಫಲಕ ಇತ್ತು.
Related Articles
Advertisement
ಈ ಮಧ್ಯೆ ಮೊದಲೆರಡು ಮಾತ್ರ ಮಹಿಳೆಯರಿಗೆ ಎಂಬ ತಪ್ಪು ಕಲ್ಪನೆಯಿಂದ ರೈಲು ತಪ್ಪಿಸಿಕೊಂಡವರೂ ಕಂಡುಬಂದರು. ಈ ನೂಕುನುಗ್ಗಲಿನಿಂದ ತಪ್ಪಿಸಿಕೊಂಡು ಎರಡು-ಮೂರನೇ ಬೋಗಿಗಳಿಗೆ ಏರಲು ಮುಂದಾಗಿ ಗಲಿಬಿಲಿಗೊಂಡವರೂ ಇದ್ದರು.
ಪ್ರತ್ಯೇಕ ಬೋಗಿ ಮೀಸಲಿಡಬೇಕು: ಈ ಸಂದರ್ಭದಲ್ಲಿ “ಉದಯವಾಣಿ’ಯೊಂದಿಗೆ ಮಾತಿಗಿಳಿದ ಅವನಿ, “ಮೊದಲೆರಡು ದ್ವಾರಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ಇಡೀ ಬೋಗಿಯನ್ನು ಮೀಸಲಿಟ್ಟರೆ ತುಂಬಾ ಅನುಕೂಲ ಆಗುತ್ತದೆ. ನಿರಾತಂಕವಾಗಿ ಪ್ರಯಾಣಿಸಬಹುದು’ ಎಂದು ಅಭಿಪ್ರಾಯಪಟ್ಟರು.
ಮತ್ತೂಬ್ಬ ಪ್ರಯಾಣಿಕರಾದ ಉಷಾ, “ಕೊನೆಯ ಬೋಗಿಯ ಒಂದು ದ್ವಾರವನ್ನೂ ಮಹಿಳೆಯರಿಗೆ ಮೀಸಲಿಡಬೇಕು. ಇದರಿಂದ ಮೆಜೆಸ್ಟಿಕ್‌ನಂತಹ ನಿಲ್ದಾಣಗಳಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್ ಏರಲು ಅನುಕೂಲ ಆಗುತ್ತದೆ. ಇಲ್ಲವಾದರೆ, ಎರಡು ಬೋಗಿಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ’ ಎಂದರು.
ಅಭಿಪ್ರಾಯ ಸಂಗ್ರಹಿಸಿದ ಎಂಡಿ: ಹೊಸ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಲು ಸ್ವತಃ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಎಂ.ಜಿ. ರಸ್ತೆಯಿಂದ ಮೆಜೆಸ್ಟಿಕ್ ನಡುವೆ ಮೆಟ್ರೋ ರೈಲಿನಲ್ಲಿ ಒಂದು ಸುತ್ತು ಪ್ರಯಾಣ ಮಾಡಿದರು. ಈ ವೇಳೆ ಮಹಿಳಾ ಪ್ರಯಾಣಿಕರೊಂದಿಗೆ ಚರ್ಚಿಸಿದ ಅವರು, ಮಹಿಳೆಯರಿಗಾಗಿಯೇ ದ್ವಾರಗಳನ್ನು ಮೀಸಲಿಟ್ಟಿರುವುದು ಹೇಗೆ ಅನಿಸುತ್ತಿದೆ?
ಪ್ರಯಾಣ ಮೊದಲಿಗಿಂತ ತೃಪ್ತಿಕರವಾಗಿದೆಯೇ? ಎಂದು ಕೇಳಿದರು. ಇದಕ್ಕೆ ಮಹಿಳೆಯೊಬ್ಬರು, “ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದು ಸಂತಸ. ಆದರೆ, ಆಸನಗಳನ್ನೂ ಮೀಸಲಿಟ್ಟರೆ ಉತ್ತಮ’ ಎಂದರು. ಬೆನ್ನಲ್ಲೇ “ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಿ’ ಎಂಬ ದನಿ ಮತ್ತೋರ್ವ ಮಹಿಳೆಯಿಂದ ತೂರಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮಹೇಂದ್ರ ಜೈನ್, “ಮೆಟ್ರೋ ಆರು ಬೋಗಿಗಳಾಗುತ್ತಿದ್ದಂತೆ ಇದಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದರು.
ಮೂರು ದ್ವಾರಗಳು ಮಹಿಳೆಗೆ?: ಪ್ರಸ್ತುತ ಎರಡು ದ್ವಾರಗಳನ್ನು ಮಹಿಳೆಯರ ಪ್ರವೇಶ-ನಿರ್ಗಮನಕ್ಕೆ ಸೀಮಿತಗೊಳಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ವ್ಯವಸ್ಥೆಯನ್ನು ಮೂರು ದ್ವಾರಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದರು.ಮೆಟ್ರೋ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದ ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, “ಒಂದು ವಾರ ಪ್ರಾಯೋಗಿಕವಾಗಿ ಎರಡು ದ್ವಾರಗಳನ್ನು ಮೀಸಲಿಡಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತರೆ, ಮೂರು ದ್ವಾರಗಳಿಗೆ ಈ ಸೇವೆಯನ್ನು ವಿಸ್ತರಿಸುವ ಉದ್ದೇಶ ಇದೆ. ಅಷ್ಟೇ ಅಲ್ಲ, ಪೀಕ್ ಅವರ್‌ಗೆ ಸೀಮಿತವಾಗಿರುವ ಈ ಸೇವೆ ಪೂರ್ಣಾವಧಿಗೆ ವಿಸ್ತರಿಸಲಾಗುವುದು’ ಎಂದರು. ನಿತ್ಯ ಸಂಚರಿಸುವ ಒಟ್ಟಾರೆ ಮೆಟ್ರೋ ಪ್ರಯಾಣಿಕರಲ್ಲಿ ಶೇ. 35ರಿಂದ 40ರಷ್ಟು ಮಹಿಳೆಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮೊದಲು ಮಾ. 1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಪ್ರಾಯೋಗಿಕವಾಗಿ ಸೋಮವಾರದಿಂದಲೇ ಜಾರಿಗೊಳಿಸಲಾಗಿದೆ ಎಂದರು. ಮಹಿಳೆಯರಿಗೆ ಮೀಸಲಿಟ್ಟ ದ್ವಾರಗಳಲ್ಲಿ ಪುರುಷರು ಪ್ರವೇಶಿಸಿದರೆ, ದಂಡ ವಿಧಿಸುವ ಆಲೋಚನೆ ಇಲ್ಲ. ಆದರೆ, ಈ ರೀತಿಯ ಪ್ರವೇಶ-ನಿರ್ಗಮನಗಳಿಗೆ ಅವಕಾಶ ನೀಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ.
-ಮಹೇಂದ್ರ ಜೈನ್, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ “ಸಬ್ ವೇ’ ಇಂದು ಸೇವೆಗೆ ಮುಕ್ತ: ಬಿಎಂಆರ್‌ಸಿ, ಬಿಬಿಎಂಪಿ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ “ಸಬ್ ವೇ’ ಮಂಗಳವಾರ ಸೇವೆಗೆ ಮುಕ್ತಗೊಳ್ಳಲಿದೆ. ಅಂದು ಸಂಜೆ 5.30ಕ್ಕೆ ಸಬ್ ವೇ ಉದ್ಘಾಟನೆಗೊಳ್ಳಲಿದ್ದು, ಸಚಿವರಾದ ಕೆ.ಜೆ. ಜಾರ್ಜ್, ಎಚ್.ಎಂ. ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿರುವರು. ಇದೇ ವೇಳೆ, ಆನೇಕಲ್ ತಾಲೂಕಿನ ವೀರಸಂಗ್ರಾಮದಲ್ಲಿರುವ ವೀರಸಂದ್ರ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿ ಮತ್ತು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಟೈಟಾನ್ ಕಂಪೆನಿ ಲಿ., ನಡುವೆ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಿವೆ.