ಬಾಗಲಕೋಟೆ: ಪೊಲೀಸರ ಹಿತರಕ್ಷಣೆಗಾಗಿ ರಾಘವೇಂದ್ರ ಔರಾದ್ಕರ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೋರಾಟಗಾರ, ವಕೀಲ ಯಲ್ಲಪ್ಪ ಹೆಗಡೆ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ಕರ್ ವರದಿಯಲ್ಲಿನ ಯಾವ ಅಂಶವೂ ಸೇವಾನಿರತ ಪೊಲೀಸರಿಗೆ ಪೂರಕವಾಗಿ ಮತ್ತು ಅನುಕೂಲಕರವಾಗಿ ಪರಿಣಮಿಸಿಲ್ಲ. ಈ ವರದಿಯಿಂದ ಸೇವಾನಿರತ ಹಿರಿಯರ ಪಾಲಿಗೆ ಮರಣ ಶಾಸನವಾಗಿದೆ ಎಂದು ಬಹುತೇಕ ಪೊಲೀಸರು ಅಳಲು ತೋಡಿಕೊಂಡಿದ್ದಾರೆ ಎಂದರು. 2016ರಲ್ಲಿ ಔರಾದ್ಕರ್ ವರದಿ ಸರ್ಕಾರದ ಕೈ ಸೇರಿದಾಗ ಪೊಲೀಸರಿಗೆ ಶೇ.30 ರಿಂದ ಶೇ.35 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಂದಿನ ಗೃಹಮಂತ್ರಿ ಜಿ.ಪರಮೇಶ್ವರ ಹಲವು ಬಾರಿ ಹೇಳಿದ್ದರು. ಇಂದಿನ ಸರ್ಕಾರ ವರದಿಯ ಎಲ್ಲ ಶಿಫಾರಸ್ಸುಳನ್ನು ಜಾರಿಗೆ ತರಲಾಗಿದೆ ಎಂದು ಮಖ್ಯಮಂತ್ರಿಗಳು ಹೇಳಿದ್ದಾರೆ.
ವರದಿ ಜಾರಿಗೆಗೊಂಡರು ಪೊಲೀಸಗೂ ಅನ್ಯಾಯವಾಗುತ್ತಿರುವುದು ಯಾರಿಂದ. ಔರಾದ್ಕರ್ ವರದಿಯಲ್ಲಿ ಲೋಪವಿತ್ತೆ. ಸರ್ಕಾರ ವರದಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ತಿರುಚಿ ತನ್ನ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಪೊಲೀಸರು ತೆಲಂಗಾಣ ಮಾದರಿಯ ವೇತನ ಶ್ರೇಣಿಗೆ ಆಗ್ರಹಿಸಿದ್ದರು. ತೆಲಂಗಾಣ, ಕೇರಳ, ಪಂಜಾಬ್ ರಾಜ್ಯಗಳಲ್ಲಿ ಪೊಲೀಸರಿಗೆ ಉತ್ತಮ ವೇತನ ಶ್ರೇಣಿಯಜೊತೆಗೆ ಮಾನವೀಯ ಸೌಲಭ್ಯ ನೀಡಿವೆ. ಆದರೆ ಕರ್ನಾಟಕದಲ್ಲಿ ಪೊಲೀಸರಿಗೆ ಮೂರು ವರ್ಷ ಚಾತಕ ಪಕ್ಷಿಯಂತೆ ಕಾಯಿಸಿ ಕೊನೆಗೊಮ್ಮೆ ತೆಗೆದುಕೊಂಡ ನಿರ್ಧಾರ ಪೊಲೀಸರ ಮತ್ತಷ್ಟು ಅಸಹನೆಗೆ ಕಾರಣವಾಗಿದೆ. ಸರ್ಕಾರ ಕಳೆದ ಎರಡು ತಿಂಗಳಿನ ವೇತನವನ್ನು ಎಲ್ಲ ಪೊಲೀಸ ಸಿಬ್ಬಂದಿಗಳಿಗೆ ಏಕ ರೂಪವಾಗಿ ನೀಡಬೇಕು. ಇಲಾಖೆಯಲ್ಲಿನ ವೇತನ ತಾರತಮ್ಯ ನೀತಿ ನಿವಾರಿಸಬೇಕು. ಇಲ್ಲದಿದ್ದರೆ ಸರ್ಕಾರದವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶ್ರೀಶೈಲನಾಯಕ, ಮುಖಂಡರಾದ ಗೋವಿಂದ ಮೆಟಗುಡ್ಡ, ಸೋಮಲಿಂಗ ಮದರಖಂಡಿ, ಟಿ.ಎಂ. ನದಾಫ್, ಸಹದೇವ ಕಣಬೂರ ಮುಂತಾದವರು ಉಪಸ್ಥಿತರಿದ್ದರು.