ಗುಳೇದಗುಡ್ಡ (ಬಾಗಲಕೋಟೆ): ಇಡೀ ವಿಶ್ವವೇ ಕೋವಿಡ್ ಕೂಪದಲ್ಲಿ ನಲುಗುತ್ತಿದ್ದು, ಸರಕಾರ ರೋಗ ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಿದೆ. ಆದರೆ ಇಲ್ಲೊಂದು ಊರಿನಲ್ಲಿ ರಜೆಯ ಮಜಾ ಕಳೆಯಲು ಕೋವಿಡ್ ಸೋಂಕನ್ನೇ ಮರೆತು ದಿಡಗಿನ ಹಳ್ಳದ ಜಲಪಾತದಲ್ಲಿ ಮಿಂದೇಳುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಕೋಟೆಕಲ್ ಹಿರೇಹಳ್ಳದ ದಿಡಗಿನ ಜಲಪಾತದಲ್ಲಿ ರವಿವಾರ ನೂರಾರು ಜನರು ಆಟವಾಡಿ ರಜೆಯ ಸಮಯವನ್ನು ಕಳೆದರು.
ರಾಜ್ಯದಲ್ಲಿ ಸರಕಾರ ಕೋವಿಡ್ ನಿಗ್ರಹಿಸಲು ಸಾಕಷ್ಟು ಶ್ರಮಪಡುತ್ತಿದೆ. ಅದಕ್ಕಾಗಿ ಲಾಕ್ ಡೌನ್ ಕೂಡ ಮಾಡಿದೆ. ಆದರೆ ಇದನೆಲ್ಲವನ್ನು ಮರೆತು ನಿರ್ಸಗದ ಮಡಿಲಲ್ಲಿ ಮೈನವಿರೇಳಿಸುವಂತೆ ಬೀಳುವ ಜಲಪಾತದಲ್ಲಿ ಮೈಯೊಡ್ಡಿ ಸಂಭ್ರಮಿಸಿದರು.
ಇದನ್ನೂ ಓದಿ:ಕೆಲವು ವಿದ್ಯಮಾನಗಳಿಂದ ನೋವಾಗಿ ಸಿಎಂ ‘ರಾಜೀನಾಮೆ’ ಹೇಳಿಕೆ ನೀಡಿದ್ದಾರೆ: ಅಶೋಕ್
ಗುಳೇದಗುಡ್ಡ ಪಟ್ಟಣ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿನ ಜನರು ಜನಪಾತ ನೋಡಲು ಆಗಮಿಸಿ ಜಲಪಾತದಲ್ಲಿ ಸ್ನಾನ ಮಾಡಿ ಖುಷಿಪಟ್ಟು ಅಲ್ಲಿಯೇ ಊಟ ಮಾಡಿ ಮನೆ ಕಡೆ ತೆರಳಿದರು.
30 ಅಡಿಗಳಿಂದ ರಭಸದಿಂದ ಬೀಳುವ ನೀರಿಗೆ ಮೈಯೊಡ್ಡಿ ಕೇಕೆ ಹಾಕುತ್ತ ಸಂಭ್ರಮಿಸಿದರು. ಯುವಕರಷ್ಟೇ ಅಲ್ಲದೇ ಕೆಲವರು ತಮ್ಮ ಕುಟುಂಬ ಸಮೇತ ಬಂದು ಜಲಪಾತದ ಸವಿ ಅನುಭವಿಸಿದರು.
ಸರಕಾರ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಿಸುತ್ತಿದೆ. ಆದರೆ ಜನರು ಇದನ್ನೆಲ್ಲವನ್ನು ಮರೆತು ತಮ್ಮದೇ ಖುಷಿಯಲ್ಲಿದ್ದಾರೆ. ಸಾಮಾಜಿಕ ಅಂತರವಂತು ಇಲ್ಲವೇ ಇಲ್ಲ. ಮೊದಲೇ ಹೊರಗಡೆ ಬರಬಾರದೆಂಬ ನಿಯಮವಿದ್ದರೂ ಜನರು ಇದನ್ನು ಕಾಳಜಿ ವಹಿಸದಿರುವದು ವಿಪರ್ಯಾಸ.
ಅಧಿಕಾರಿಗಳು ಹಗಲು ರಾತ್ರಿ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಆದರೆ ಈ ರೀತಿಯಾದರೆ ಅಧಿಕಾರಿಗಳ ಶ್ರಮವೆಲ್ಲವೂ ವ್ಯರ್ಥವೆನಿಸುವದರಲ್ಲಿ ಎರಡು ಮಾತಿಲ್ಲ.