Advertisement

ಯಜ್ಞದಿಂದ ಮನೋಭಿಲಾಷೆ ಈಡೇರಿಕ

12:29 PM Jun 04, 2018 | |

ಯಾದಗಿರಿ: ಅಧಿಕ ಮಾಸದಲ್ಲಿ ಯಜ್ಞ ಮಾಡುವುದರಿಂದ ಭಗವಂತ ಸಂತೃಪ್ತನಾಗಿ ಪ್ರಕೃತಿಯ ಸಮತೋಲನ ಕಾಪಾಡುವುದರ ಜತೆಗೆ ಸಕಲ ಜೀವಿಗಳ ಮನೋಭಿಲಾಷೆಗಳನ್ನು ಈಡೇರಿಸುತ್ತಾನೆ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ನುಡಿದರು.

Advertisement

ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥರ ಜನ್ಮ ಶತಮಾನೋತ್ಸವ, ಅಧಿಕ ಮಾಸದ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಶ್ರೀ ವಿಶ್ವ ಮಧ್ವಮಹಾ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಶ್ರೀ ಲಕ್ಷ್ಮೀ ನರಸಿಂಹ ಯಜ್ಞ, ಜ್ಞಾನಸತ್ರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವರ್ಷದ 12 ತಿಂಗಳು ವಿಶೇಷತೆ ಹೊಂದಿದ್ದರೂ, ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಈ ಅಧಿಕ ಮಾಸ ವಿಶಿಷ್ಟತೆಯಿಂದ ಕೂಡಿದೆ. ಈ ತಿಂಗಳನ್ನು ಭಗವಂತನ ಮಾಸ ಎನ್ನಲಾಗುತ್ತದೆ. ಈ ಮಾಸದಲ್ಲಿ ಕೈಗೊಳ್ಳುವ ಪ್ರತಿಯೊಂದು ಧಾರ್ಮಿಕ ಕಾರ್ಯ, ಮಾಡುವ ದಾನದಿಂದ ಭಗವಂತ ತೃಪ್ತನಾಗಿ ಮೋಕ್ಷ ಪ್ರಾಪ್ತಿ ಮಾಡುತ್ತಾನೆ. ಅದಕ್ಕಾಗಿ ಈ ತಿಂಗಳಲ್ಲಿ ಭಾಗವತ, ಭಗವದ್ಗೀತೆ ಶ್ರವಣ, ಗಾಯತ್ರಿ ಮಂತ್ರ ಜಪ ಮಾಡುವುದು ಅವಶ್ಯಕವಾಗಿದೆ ಎಂದರು.

ಪ್ರತಿದಿನವೂ ಕೈಲಾದಷ್ಟು ದಾನ ಮಾಡಬೇಕು ಎಂದು ಮನು ಸೇರಿದಂತೆ ಅನೇಕ ಮಹನೀಯರು ಹೇಳಿದ್ದಾರೆ. ಆದರೆ ಇವತ್ತಿನ ಕಾಲದಲ್ಲಿ ಪ್ರತಿನಿತ್ಯ ದಾನ ಮಾಡಲು ಆಗುವುದಿಲ್ಲ. ಅದಕ್ಕಾಗಿ ಅಧಿಕ ಮಾಸದಲ್ಲಿ ದಾನ ಮಾಡಬೇಕು. ವಿಶೇಷವಾಗಿ ಏನೇ ದಾನ ಮಾಡಿದರೂ ಅದು 33 ಸಂಖ್ಯೆ ಹೊಂದಿರಬೇಕು ಎಂದು ವಿವರಿಸಿದರು. ಬೆಳಗ್ಗೆ ವಿಷ್ಣು ಸಹಸ್ರನಾಮ, ಸುಂದರ ಕಾಂಡ, ದೇವರ ಸ್ತೋತ್ರಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು. ಪುರುಷರು ಗಾಯತ್ರಿ ಮಂತ್ರ, ಮಹಿಳೆಯರು ಭಗವಂತನ ನಾಮ ಜಪ ಮಾಡಿದರು. ನಂತರ ಐದು ಪ್ರತ್ಯೇಕ ಹೋಮ ಮಾಡಿ ಪೂರ್ಣಾಹುತಿ ನೀಡಲಾಯಿತು.

ಪಂಡಿತ ಸತ್ಯಭೋದಾಚಾರ್ಯ ಯರಗೋಳ, ರಾಘವೇಂದ್ರಾಚಾರ್ಯ ಬಳಿಚಕ್ರ, ಶ್ರೀಕಾಂತಾಚಾರ್ಯ ಹಂದರಕ್ತಿ, ಪವನಾಚಾರ್ಯ ಗಾಜರಕೋಟ ಹೋಮದ ನೇತೃತ್ವ ವಹಿಸಿದ್ದರು. ಸಂಜೆ ವಿವಿಧ ಭಜನಾ ಮಂಡಳಿಯಿಂದ 33 ದೇವರನಾಮವಳಿ, ದೇವರಿಗೆ 33 ನಮಸ್ಕಾರ, ಪ್ರದಕ್ಷಣೆ ಹಾಗೂ ದೀಪೋತ್ಸವ ಆಚರಿಸಲಾಯಿತು.

Advertisement

ಮೂರು ದಿನಗಳ ಕಾಲ ನಡೆದ ಭಾಗವತ ಪುರಾಣವನ್ನು ಸಂಪನ್ನಗೊಳಿಸಲಾಯಿತು. ಧಾರ್ಮಿಕ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next