Advertisement

ಸೈನಿಕರ ಬೇಡಿಕೆ ಈಡೇರಿಸಿ

06:15 AM Jan 14, 2019 | |

ಬೆಂಗಳೂರು: ಕೇಂದ್ರ ಸರ್ಕಾರ ಸೈನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಒತ್ತಾಯಿಸಿದರು.

Advertisement

ನಗರದ ಕೆಆರ್‌ಐ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರಿ ನೌಕರರ (ಮಾಜಿ ಸೈನಿಕರು) ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗಡಿ ಕಾಯುವ ಯೋಧರ ಏಳ್ಗೆ ಕುರಿತಂತೆ ಹಲವು ಭವರಸೆಗಳನ್ನು ನೀಡುತ್ತದೆ. ಆದರೆ, ಅವುಗಳನ್ನು ಈಡೇರಿಸುವತ್ತ ಗಮನಹರಿಸುವುದಿಲ್ಲ. ಆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಮಾಜಿ ಸೈನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸೈನಿಕರು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಆ ನಿಟ್ಟಿನಲ್ಲಿ ಮಾಜಿ ಸೈನಿಕರ ಸಂಘ ಅಸ್ತಿತ್ವಕ್ಕೆ ಬಂದಿರುವುದು ಸಂತಸ ತಂದಿದೆ. ಒಕ್ಕೂಟವು ಸೈನಿಕರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಲಿ ಎಂದು ಆಶಿಸಿದರು.

30 ಬಾರಿ ವರ್ಗಾವಣೆ: ಲೋಕಾಯುಕ್ತಕ್ಕೆ ಬರುವ ಮೊದಲು ಸಮಾಜದಲ್ಲಿನ ಅವ್ಯವಸ್ಥೆಯ ಬಗ್ಗೆ ಅರಿವಿರಲಿಲ್ಲ. ಆದರೆ, ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸಿದ ನಂತರ ಸಮಾಜದಲ್ಲಿನ ಭ್ರಷ್ಟಾಚಾರ ಅರಿವಿಗೆ ಬಂತು. ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಹತ್ತು ವರ್ಷದಲ್ಲಿ ಮೂವತ್ತು ಬಾರಿ ವರ್ಗಾವಣೆ ಮಾಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸೌಕರ್ಯಗಳಿಗಾಗಿ ಹೋರಾಟ: ನಿವೃತ್ತ ಏರ್‌ ಕಮಾಂಡರ್‌ ಜಿ.ಜೆ.ಸೇನ್‌ ಮಾತನಾಡಿ, ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಬೇಕಾಗಿದ್ದ ಸೈನಿಕರು ಈಗ ಸೌಕರ್ಯಗಳಿಗಾಗಿ ಸರ್ಕಾರದ ವಿರುದ್ಧ ಹೋರಾಡುವ ಸ್ಥಿತಿ ಬಂದಿರುವುದು ಬೇಸರದ ಸಂಗತಿ. ಸೈನಿಕರ ಸಮಸ್ಯೆಗಳ ವಿಚಾರವಾಗಿ ರಾಜಕೀಯ ಮುಖಂಡರಿಗೆ ಕಠಿಣವಾದ ಸಂದೇಶ ರವಾನಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮಾಜಿ ಸೈನಿಕರ ಫೆಡರೇಷನ್‌ ಅಸ್ತಿತ್ವಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. 

Advertisement

ರಾಜ್ಯ ಸರ್ಕಾರಿ ನೌಕರರ (ಮಾಜಿ ಸೈನಿಕರು) ಒಕ್ಕೂಟದ ಅಧ್ಯಕ್ಷ ಕೆ.ಮಥಾಯಿ ಮಾತನಾಡಿ, ಅಧಿಕಾರದಲ್ಲಿದ್ದಾಗಲೇ ಯಾವುದಕ್ಕೂ ಹೆದರದೆ ನಿಯಮಾನುಸಾರ ಜನರ ಸೇವೆ ಮಾಡಬೇಕು. ಕೇವಲ ನಾಲ್ಕು ತಿಂಗಳಲ್ಲೇ ನನಗೆ ಒಂಬತ್ತು ಬಾರಿ ವರ್ಗಾವಣೆ ಮಾಡಲಾಗಿತ್ತು. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಕ್ರಮವನ್ನು ಬಯಲಿಗೆಳೆಯುತ್ತಾ ಬಂದಿದ್ದೇನೆ ಎಂದು ತಿಳಿಸಿದರು. ಸೇನೆಯ ನಿವೃತ್ತ ಅಧಿಕಾರಿಗಳಾದ ಸಿ.ಆರ್‌.ಸಂಪತ್‌ಕುಮಾರ್‌, ಎಸ್‌.ವೈ.ಸವೂರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next