ನವದೆಹಲಿ : ಕಳೆದ ಆರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಸುಂಕದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಆದಾಯ ಹರಿದು ಬಂದಿದೆ.
ಇಂದು ಲೋಕಸಭೆಯಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ನೀಡಿರುವ ವರದಿಯನ್ವಯ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರಿಂದ ಕಳೆದ ಆರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹವು ಶೇಕಡಾ 300 ಪಟ್ಟು ಹೆಚ್ಚಾಗಿದೆ.
2014-15ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಿಂದ 29,279 ಕೋಟಿ ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 42,881 ಕೋಟಿ ರೂ. ಸಂಗ್ರಹವಾಗಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದ (2020-21) ಮೊದಲ 10 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಸಂಗ್ರಹವು 2.94 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಲಿಖಿತ ರೂಪದಲ್ಲಿ ಅನುರಾಗ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
2014-15ರಲ್ಲಿ ನೈಸರ್ಗಿಕ ಅನಿಲದ ಮೇಲಿನ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರವು 74,158 ಕೋಟಿ ರೂ. ಸಂಗ್ರಹಿಸಿದ್ದು, ಇದು 2020ರ ಏಪ್ರಿಲ್ ಮತ್ತು 20 ಜನವರಿ 2021ರ ಅವಧಿಯಲ್ಲಿ 2.95 ಲಕ್ಷ ಕೋಟಿ ರೂ.ಗೆ ಏರಿದೆ.
ಸಚಿವರು ತಿಳಿಸಿರುವಂತೆ ಒಟ್ಟು ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದ ಮೇಲೆ ಸಂಗ್ರಹಿಸಿದ ತೆರಿಗೆಗಳು ಶೇಕಡಾ 5. 4ರಿಂದ ಶೇಕಡಾ 12.2 ಕ್ಕೆ ಏರಿಕೆಯಾಗಿದೆ.
2014 ರಲ್ಲಿ ಪೆಟ್ರೋಲ್ ಮೇಲಿನ ಸುಂಕವನ್ನ 9.48 ರೂ.ಗಳಿಂದ 32.90 ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ಅವಧಿಗೆ ಡೀಸೆಲ್ ಮೇಲಿನ ಸುಂಕವನ್ನ ಪ್ರತಿ ಲೀಟರ್ ಗೆ 3.56 ರಿಂದ 31.80 ರೂ.ಗೆ ಏರಿಕೆಯಾಗಿದೆ.