Advertisement

ಅರಾಮ್ಕೋ ಮೇಲೆ ದಾಳಿ; ಜಗತ್ತಿಗೆ ಇಂಧನ ಬಿಕ್ಕಟ್ಟು

08:46 AM Sep 19, 2019 | mahesh |

ಸೌದಿಯ ಅರಾಮ್ಕೋಕ್ಕೆ ದಾಳಿ ನಡೆಸಿದ್ದರಿಂದ ಏನಾಯಿತು?
ದಾಳಿ ನಡೆಸಿದ್ದು ಯಾರು? ತೈಲ ಮಾರುಕಟ್ಟೆಯಲ್ಲಿ ಏರು ಪೇರು!

Advertisement

ಸೌದಿ ಅರೇಬಿಯಾದಲ್ಲಿನ ವಿಶ್ವದ ಅತೀ ದೊಡ್ಡ
ತೈಲ ರಫ್ತು ಸಂಸ್ಥೆಯಾಗಿರುವ ಅರಾಮ್ಕೋದ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಜಾಗತಿಕ ತೈಲ ಪೂರೈಕೆ ಸರಪಣಿಗೆ ಹೊಡೆತ ಬಿದ್ದಿದೆ. ಹೌತಿ ಬಂಡುಕೋರರ ಈ ಕೃತ್ಯಕ್ಕೆ ಕಾರಣವೇನು? ಇಲ್ಲಿದೆ ವಿವರ.

ಯೆಮೆನ್‌ನ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಹೌತಿ ಬಂಡುಕೋರರ (ಉತ್ತರ ಯೆಮೆನ್‌ ಭಾಗದವರು) ಕೋಪ ಸೌದಿ ಅರೇಬಿಯಾ ವಿರುದ್ಧ ತಿರುಗಿದೆ. ಯೆಮೆನ್‌ನಲ್ಲಿ ಸೌದಿ ಹಸ್ತಕ್ಷೇಪ ನಡೆಸುತ್ತಿದೆ ಎನ್ನುವುದು ಅವರ ಆರೋಪ. ಶಿಯಾ-ಸುನ್ನಿ ಕಾರಣವೂ ಇದರ ಹಿಂದಿದೆ. ಸೌದಿ ಹಸ್ತಕ್ಷೇಪ ಸ್ಥಗಿತಗೊಳ್ಳುವವರೆಗೆ ಹೋರಾಟ ನಡೆಯಲಿದೆ ಎಂದಿದ್ದಾರೆ.

ದಾಳಿ ನಡೆದಿದ್ದು ಯಾಕೆ?
ಯೆಮೆನ್‌ನಲ್ಲಿನ ಆಡಳಿತಕ್ಕಾಗಿ 2015ರಿಂದ ಅಲ್ಲಿನ ಸರಕಾರ ಮತ್ತು ಇರಾನ್‌ ಬೆಂಬಲಿತ ಎಂದು ಹೇಳಲಾಗುವ ಹೌತಿ ಬಂಡುಕೋರರ ನಡುವೆ ಸಮರಗಳು ನಡೆಯುತ್ತಿವೆ. ಸೌದಿ ಜತೆಗೂ ತಿಕ್ಕಾಟ ನಡೆಯುತ್ತಿದೆ. ಇತ್ತೀಚೆಗೆ ಯೆಮೆನ್‌ನ ಬಂಡುಕೋರರ ನೆಲೆಗಳ ಮೇಲೆ ಸೌದಿ ಬಾಂಬ್‌ ದಾಳಿಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ  ನಾವು ದಾಳಿ ನಡೆಸಿದ್ದೇವೆ ಎಂಬುದು ಹೌತಿಗಳ ವಾದ.

ಏನಿದು ಸೌದಿ ಅರಾಮ್ಕೋ
ಸರಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ಜಗತ್ತಿನ ಅತೀ ದೊಡ್ಡ ತೈಲ ಸಂಸ್ಕರಣ ಮತ್ತು ತೈಲ ತೆಗೆಯುವ ಸಂಸ್ಥೆ. ಸೌದಿಯ ಪೂರ್ವ ಪ್ರಾಂತ್ಯದಲ್ಲಿರುವ ಈ ಕೇಂದ್ರ 1933ರಲ್ಲಿ ಸ್ಥಾಪನೆಯಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರದೊಂದಿಗೆ ವ್ಯಾಪಾರ ವಹಿವಾಟನ್ನು ಇಟ್ಟುಕೊಂಡಿದೆ. ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಪೈಕಿ ಸೌದಿ ಎರಡನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ತೈಲ ನಿಕ್ಷೇಪಗಳಲ್ಲಿ ಸೌದಿ ಅರೇಬಿಯಾ ಶೇ. 18 ನಿಕ್ಷೇಪಗಳನ್ನು ಹೊಂದಿದೆ. ಸೌದಿ ಪ್ರತಿ ದಿನ ಸುಮಾರು 1 ಕೋಟಿ ಬ್ಯಾರೆಲ್‌ ತೈಲವನ್ನು ರಫ್ತು ಮಾಡುತ್ತದೆ.


ದಾಳಿ ನಡೆದಿದ್ದು ಎಲ್ಲಿ?
ಅರಾಮ್ಕೋದ ಮುಖ್ಯ ಕಚೇರಿ ಇರುವ ದಾಹ್ರಾನ್‌ನಿಂದ ಸುಮಾರು 60 ಕಿ.ಮೀ. ದೂರದದಲ್ಲಿರುವ ಅಬ್‌ಕೈಬ್‌ ಮತ್ತು 190 ಕಿ.ಮೀ. ದೂರಲ್ಲಿರುವ ಖುರಾಯಿಸ್‌ ತೈಲ ಘಟಕಗಳ ಮೇಲೆ ಡ್ರೋನ್‌ ದಾಳಿ ನಡೆದಿದೆ. ದಾಳಿ ನಡೆದ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ಹೌತಿಗಳು ತಮ್ಮ ಉಪಗ್ರಹದಿಂದ ಪ್ರಸಾರಗೊಳ್ಳುವ ಮಾಧ್ಯಮವೊಂದರಲ್ಲಿ ಪ್ರಸಾರ ಮಾಡಿದ್ದಾರೆ.

Advertisement

ಶೇ. 5ರಷ್ಟು ಕೊರತೆ
ಈ ದಾಳಿಯಿಂದ ಜಗತ್ತಿನ ಇಂಧನ ಅನಿವಾರ್ಯತೆಗೆ ಶೇ. 5ರಷ್ಟು ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಭಾರತ ಮತ್ತು ಪರ್ಶಿಯನ್‌ ಗಲ್ಫ್ ರಾಷ್ಟ್ರಗಳು ಈ ಕೇಂದ್ರದಿಂದ ಅತೀ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ಈ ದಾಳಿಯಿಂದ ಕೇಂದ್ರದಿಂದ ರಫ್ತಾಗುವ ಸುಮಾರು ಅರ್ಧ ಕಚ್ಚಾ ತೈಲಕ್ಕೆ ಕೊರತೆಯಾಗಲಿದೆ. ಘಟನೆಯಿಂದ ಈಗಾಗಲೇ ಬ್ಯಾರೆಲ್‌ ತೈಲದ ದರ ಏರಿಕೆಯಾಗಿದೆ.

ದಾಳಿ ನಡೆದದ್ದು ಹೇಗೆ?
ಡ್ರೋನ್‌ ದಾಳಿಯಲ್ಲಿ ಒಳ್ಳೆಯ ಹಿಡಿತ ಹೊಂದಿರುವ ಯೆಮೆನ್‌ ಬಂಡುಕೋರರು ತೈಲ ಘಟಕದ ಮೇಲೆ ರಿಮೋಟ್‌ ತಂತ್ರಜ್ಞಾನದಿಂದ ದಾಳಿ ನಡೆಸಿದ್ದಾರೆ ಎನ್ನಲಾಗುತ್ತದೆ. ಈ ಕೃತ್ಯಕ್ಕೆ 10 ಡ್ರೋನ್‌ಗಳನ್ನು ಬಳಸಲಾಗಿದೆ. ಈ ಹಿಂದೆ ಸೌದಿ ಮುಂದಾಳತ್ವದಲ್ಲಿ ಯೆಮೆನ್‌ನಲ್ಲಿ ನಡೆದ ಯುದ್ಧದಲ್ಲಿ ಹೌತಿ ಬಂಡುಕೋರರು ಇದೇ ಮಾದರಿ ಡ್ರೋನ್‌ ಬಳಸಿದ್ದರು. ಇದು ಯುಎವಿ-ಎಕ್ಸ್‌ ಡ್ರೋನ್‌ ಎಂದು ಗುರುತಿಸಲಾಗಿದ್ದು ಸುಮಾರು 1,500 ಕಿ.ಮೀ. ದೂರದಿಂದ ನಿಯಂತ್ರಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಈ ಕೇಂದ್ರದ ಸಾಮರ್ಥ್ಯವೇನು?
ಅಬ್‌ಕೈಬ್‌ ಜಗತ್ತಿನ ಅತೀ ದೊಡ್ಡ ತೈಲ ಉತ್ಪಾದನಾ ಕೇಂದ್ರವಾಗಿದೆ. ಇಲ್ಲಿಂದ ಕಚ್ಚಾತೈಲವನ್ನು ಸ್ವೀಟ್‌ ಕ್ರೂಡ್‌ ಆಗಿ ಪರಿವರ್ತಿಸಿ ಪರ್ಶಿಯನ್‌ ಗಲ್ಫ್ ಭಾಗಕ್ಕೆ ರಫ್ತು ಮಾಡಲಾಗುತ್ತದೆ. ಪ್ರತಿದಿನ ಈ ಕೇಂದ್ರ ಅಂದಾಜು 70 ಲಕ್ಷ ಬ್ಯಾಲರ್‌ ತೈಲವನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಮತ್ತೂಂದು ಕೇಂದ್ರ ಖುರಾಯಿಸ್‌ 2ನೇ ಪ್ರಮುಖ ರಫ್ತು ಕೇಂದ್ರವೂ ಹೌದು. ಇಲ್ಲಿಂದ ಪ್ರತಿದಿನ 10 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಉತ್ಪಾದಿಸಲಾಗುತ್ತಿದೆ. ಅಂದರೆ ಸುಮಾರು 80 ಲಕ್ಷ ತೈಲ ಉತ್ಪಾದನೆ ಮಾಡುವ ಈ 2 ಕೇಂದ್ರಗಳ ಮೇಲೆ ದಾಳಿ ನಡೆದಿದೆ. ಇಲ್ಲಿ ಸುಮಾರು 2 ಸಾವಿರ ಕೋಟಿ ಬ್ಯಾರೆಲ್‌ ಸಂಗ್ರಹಿಸುವ ಸಾಮರ್ಥ್ಯವಿದೆ. ಹಾನಿಗೊಳಗಾದ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಲು ವಾರಗಳು ಬೇಕು ಎಂದು ಆರಾಮ್ಕೋ ಹೇಳಿದೆ.

ಭಾರತ ಮತ್ತು ಸೌದಿ
ಭಾರತ ಮತ್ತು ಸೌದಿ ರಾಷ್ಟ್ರ ವ್ಯಾಪಾರಕ್ಕೆ ಹೆಚ್ಚು ಆಪ್ತವಾಗಿರುವ ರಾಷ್ಟ್ರಗಳಾಗಿವೆ. ಭಾರತಕ್ಕೆ ಸೌದಿಯಿಂದ ಪೆಟ್ರೋಲಿಯಂ ಉತ್ಪನ್ನ ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತದೆ. ಈಗ ಪೆಟ್ರೋಲ್‌ ಕೊರತೆ/ ಬೆಲೆ ಏರಿಕೆ ಸಾಧ್ಯತೆ ಇದ್ದು ಭಾರತಕ್ಕೆ ಬಿಲ್‌ ದರ ಹೆಚ್ಚಾಗಬಹುದು. ಸೌದಿ ಅರೇಬಿಯಾದಿಂದ ರಫ್ತಾಗುವ ಕಚ್ಚಾ ತೈಲ ಮತ್ತು ಅಡುಗೆ ಅನಿಲಗಳ ಪೈಕಿ ಭಾರತ ಎರಡನೇ ಅತೀ ದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, 36.8 ಮಿಲಿಯನ್‌ ಟನ್‌ ಕಚ್ಚಾತೈಲವನ್ನು ಭಾರತ ಆಮದು ಮಾಡುತ್ತದೆ. ಇರಾನ್‌ನಿಂದ 40.33 ಮಿ. ಟನ್‌ಆಮದು ಮಾಡಲಾಗುತ್ತದೆ. ಯುಎಇ ಮತ್ತು ವೆನಿಜು ವೆ‌ಲ್ಲಾ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

50.7 ಲಕ್ಷ  ಬ್ಯಾರೆಲ್‌ ಕೊರತೆ
ಯೆಮೆನ್‌ ಬಂಡುಕೋರರ ಈ ಕೃತ್ಯದಿಂದ ಅಬ್‌ಕೈಬ್‌ ಮತ್ತು¤ ಖುರಾಯಿಸ್‌ ಕೇಂದ್ರದಿಂದ ಪ್ರತಿದಿನ ಉತ್ಪಾದನೆಯಾಗುವ 50.7 ಲಕ್ಷ ಬ್ಯಾರೆಲ್‌ಗೆ ಅಡ್ಡಿಯಾಗಿದೆ ಎಂದು ಸೌದಿ ಅರಾಮೊRà ಹೇಳಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಶೇ. 20ರಷ್ಟು ಏರಿಕೆಯಾಗಿದೆ.

188 ಮಿಲಿಯನ್‌ ಬ್ಯಾರೆಲ್‌ ಸೇಫ್
ಸದ್ಯ ಅರಾಮ್ಕೋ ಬಳಿ ಸುಮಾರು 188 ಮಿಲಿಯನ್‌ ಬ್ಯಾರೆಲ್‌ ಕಚ್ಚಾತೈಲ ಸಂಗ್ರಹವಿದೆ. ಅಂದರೆ ಮುಂದಿನ 37 ದಿನಗಳಲ್ಲಿ ಯಾವುದೇ ಉತ್ಪಾದನಾ ಪ್ರಕ್ರಿಯೆ ನಡೆಯದೇ ಇದ್ದರೂ ಅನಿಲ ಪೂರೈಕೆಗೆ ಯಾವುದೇ ತೊಂದರೆಯಾಗದು.

ಇರಾನ್‌ ಮೇಲೆ ಬೊಟ್ಟು
ದಾಳಿ ನಡೆಸಿದ್ದು ನಾವೇ ಎಂದು ಯೆಮೆನ್‌ನ ಬಂಡುಕೋರರು ಒಪ್ಪಿಕೊಂಡಿದ್ದರೂ ಅಮೆರಿಕ ಮಾತ್ರ ಇರಾನ್‌ನತ್ತ ಬೊಟ್ಟು ಮಾಡಿದೆ. ಆದರೆ ಈ ದಾಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಇರಾನ್‌ ಹೇಳಿದ್ದು ಪರ ವಿರೋಧ ಮುಂದುವರೆದಿದೆ. ಭೌಗೋಳಿಕವಾಗಿ ನೋಡುವುದಾದರೆ ಇರಾನ್‌ ಮತ್ತು ಅರಾಮ್ಕೋದ ಈ ಜಾಗಕ್ಕೆ ಸುಲಭವಾಗಿ ಸಂಪರ್ಕ ಪಡೆಯಬಹುದಾಗಿದೆ. ಮಾತ್ರವಲ್ಲದೇ ಈ ಹಿಂದೆೆ ಇರಾನ್‌ ಜತೆ ಈ ಹೌತಿಗಳು ಸಂಪರ್ಕ ಇಟ್ಟುಕೊಂಡಿದ್ದರು. ಅಮೆರಿಕ ಇರಾನ್‌ನನ್ನು ದೂಷಿಸುವುದರ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವೆ ಸೌಹಾರ್ದವಾದ ವಾತಾವರಣ ಇದೆ. ಆದರೆ ಇರಾನ್‌ ಜತೆ ಅಮೆರಿಕ ಒಳ್ಳೆಯ ಭಾವನೆ ಹೊಂದಿಲ್ಲ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾವನ್ನು ಮುಂದಿಟ್ಟು ವ್ಯಾಪಾರವನ್ನು ವೃದ್ಧಿಸಲು ಅಮೆರಿಕ ಪ್ರಯತ್ನಿಸುತ್ತಿದ್ದು, ಈ ಮೂಲಕ ಇರಾನ್‌ನನ್ನು ಹಣಿಯುವ ತಂತ್ರ ಇದಾಗಿದೆ. ಈ ಕಾರಣಕ್ಕೆ ಯೆಮನ್‌ನ ಹೌತಿಗಳ ವಿಚಾರದಲ್ಲಿ ಇರಾನ್‌ ಮತ್ತು ಅಮೆರಿಕ ಪರಸ್ಪರ ಕೆಸರೆರೆಚಾಟ ಮುಂದುವರೆಸಿವೆ.

Advertisement

Udayavani is now on Telegram. Click here to join our channel and stay updated with the latest news.

Next