ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ಸ್ ಪ್ರಕರಣದ ಎಫ್ ಎಸ್ ಎಲ್ ವರದಿ 10 ತಿಂಗಳ ಬಳಿಕ ಪೊಲೀಸರ ಕೈಗೆ ಸೇರಿದ್ದು, ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಮಾದಕ ವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ಎಫ್ ಎಫ್ ಎಲ್ ಲ್ಯಾಬ್ ನಿಂದ ಬಂದ ವರದಿಯಲ್ಲಿಸಂಜನಾ, ರಾಗಿಣಿ ದ್ವಿವೇದಿ ಹಾಗೂ ಅವರ ಸಹಚರರಾದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ಎಫ್ ಎಫ್ ಎಲ್ ಪರೀಕ್ಷೆಯಲ್ಲಿ ದೃಡಪಟ್ಟಿದೆ ಎನ್ನಲಾಗಿದೆ.
ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಮಾತ್ರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದರೆ ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳ ತಡವಾಗಿ ಬಂಧನವಾಗುತ್ತದೆ. ಇಂತಹ ಪರಿಸ್ಥಿತಿಯತ್ತಿ ವರದಿ ನೆಗೆಟಿವ್ ಬಂದು ಅವರು ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ CFSLಗೆ ಟೆಸ್ಟ್ಗಾಗಿ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.
ಕೋರ್ಟ್ ಗೆ ವರದಿ ಸಲ್ಲಿಕೆ
ಇನ್ನು ಸಿಸಿಬಿ ಅಧಿಕಾರಿಗಳು ಕಲೆಹಾಕಿರುವ ಎಫ್‌ಎಸ್‌ಎಲ್ ವರದಿಯನ್ನು ತನಿಖಾಧಿಕಾರಿ ಪುನೀತ್ ಅವರು, 33ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದೆ.
ಏನಿದು ಪ್ರಕರಣ:
2020ರ ಸೆಪ್ಟೆಂಬರ್ 14ನೇ ತಾರೀಖಿನಂದು ನಟಿ ರಾಗಿಣಿ ದ್ವಿವೇದಿ ಇದೇ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು. 2020ರ ಸೆಪ್ಟೆಂಬರ್ 16ರಂದು ಜೈಲು ಸೇರಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.