Advertisement

ಅಪಾರ್ಟ್‌ಮೆಂಟ್‌ ಬಾಗಿಲಿಗೇ ಹಣ್ಣು ತರಕಾರಿ?

10:21 AM Apr 03, 2020 | Suhan S |

ಬೆಂಗಳೂರು: ಒಂದೆಡೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳೆದುನಿಂತ ತೋಟಗಾರಿಕೆ ಉತ್ಪನ್ನಗಳು ಖರೀದಿಸುವವರಿಲ್ಲದೆ ರಸ್ತೆ ಪಾಲಾಗುತ್ತಿದೆ. ಮತ್ತೂಂದೆಡೆ ಮಹಾನಗರಗಳಲ್ಲಿ ಅದೇ ಉತ್ಪನ್ನಗಳು ತತ್ವಾರ ಪ್ರಾರಂಭವಾಗಿದೆ. ಈ ಎರಡೂ ವರ್ಗಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಮುಂದಾಗಿದೆ.

Advertisement

ಹೌದು, ಮಣ್ಣುಪಾಲಾಗುತ್ತಿರುವ ರೈತರ ಉತ್ಪನ್ನಗಳನ್ನು ನಗರದಲ್ಲಿರುವ ಹಾಪ್‌ಕಾಮ್ಸ್‌ಗಳ ಮೂಲಕ ನೇರವಾಗಿ ಬೆಂಗಳೂರು ಗ್ರಾಹಕರ ಮನೆ ಬಾಗಿಲಿಗೇ ಕೊಂಡೊಯ್ಯಲು ಚಿಂತನೆ ನಡೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ರೈತರಿಗೆ ಇದು ನೇರ ಮಾರುಕಟ್ಟೆಗೆ ರಹದಾರಿ ಆಗುವುದರ ಜತೆಗೆ ಗ್ರಾಹಕರಿಗೆ ತಾಜಾ ಹಣ್ಣು-ತರಕಾರಿ ಲಭ್ಯವಾಗಲಿದೆ. ಅಲ್ಲದೆ, ಈ ನೇರ ಖರೀದಿಯಿಂದ ಉಂಟಾಗುವ ಸ್ಪರ್ಧೆಯು ಮಾರುಕಟ್ಟೆ ಮತ್ತೆ ಯಥಾಸ್ಥಿತಿಗೆ ಮರಳಲು ಕಾರಣವಾಗಬಹುದು.

ನಗರದಲ್ಲಿ ಸೂಪರ್‌ ಮಾರ್ಕೆಟ್‌ನಂಥ ದೊಡ್ಡ ಮಳಿಗೆಗಳು ಮತ್ತು ಬೀದಿ ಬದಿಯಲ್ಲಿ ಹಣ್ಣು-ತರಕಾರಿ ಮಾರಾಟ ಆಗುತ್ತಿದೆ. ಆದರೆ, ಜನ ನಿಗದಿತ ಅವಧಿಯಲ್ಲಿ ಮಾತ್ರ ಲಭ್ಯವಿದ್ದು, ಜನ ಹೊರಬರಲಿಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮುಂದೆ ಬಂದರೆ, ಹಾಪ್‌ಕಾಮ್ಸ್‌ಗಳಿಂದ ರೈತರ ಉತ್ಪನ್ನಗಳನ್ನು ಆಯಾ ಅಪಾರ್ಟ್‌ಮೆಂಟ್‌ಗಳ ಆವರಣಕ್ಕೇ ಪೂರೈಸಬಹುದು. ಅಲ್ಲಿ ಮಾರಾಟ ವ್ಯವಸ್ಥೆಯನ್ನು ಸಂಘಗಳೇ ಸ್ವಯಂಪ್ರೇರಿತವಾಗಿ ಮಾಡಿ ಕೊಳ್ಳಬೇಕಾಗುತ್ತದೆ. ವ್ಯಾಪಾರದಿಂದ ಬಂದ ಹಣ ವನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂಬುದು ಸರ್ಕಾರ ಪರಿಕಲ್ಪನೆಯಾಗಿದೆ. ಆದರೆ, ಇದೆಲ್ಲವೂ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳ ಸ್ಪಂದನೆಯನ್ನು ಅವಲಂಬಿಸಿದೆ ಎಂದು ಹೆಸರು ಹೇಳಲಿಚ್ಛಿಸದ ತೋಟ ಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಾಥಮಿಕ ಸಭೆ: ಪ್ರಾಥಮಿಕವಾಗಿ ಕಲ್ಲಂಗಡಿ, ಕರಬೂಜದಂತಹ ವಾರಗಟ್ಟಲೆ ಸಂಗ್ರಹಿಸಿಡಬಹುದಾದ ಹಣ್ಣುಗಳನ್ನು ಈ ಮಾದರಿಯಲ್ಲಿ ಮಾರಾಟ ಮಾಡಲು ಚಿಂತನೆ ನಡೆದಿದೆ. ಇದರಲ್ಲಿ ಮುಖ್ಯವಾಗಿ ವಸತಿ ಸಮುಚ್ಛಯಗಳನ್ನು ಗುರಿ ಯಾಗಿಟ್ಟುಕೊಳ್ಳಲಾಗಿದೆ. ಏಕೆಂದರೆ, ಒಂದೇ ಕಡೆಗೆ ಅನ್‌ಲೋಡ್‌ ಮಾಡಿದರೆ, ಸಾವಿರಾರು ಗ್ರಾಹಕರಿಗೆ ಅನುಕೂಲ ಎಂಬುದು ಲೆಕ್ಕಾಚಾರ. ಉದಾಹರಣೆಗೆ 500 ಫ್ಲ್ಯಾಟ್‌ಗಳಿರುವ ಮನೆಗಳಲ್ಲಿ 400 ಗ್ರಾಹಕರು ಖರೀದಿಸಿದರೂ ವಾರದಲ್ಲಿ 3-4 ಟನ್‌ ಮಾರಾಟ ಆಗುತ್ತದೆ. 300 ಅಪಾರ್ಟ್‌ಮೆಂಟ್‌ಗಳನ್ನು ತೆಗೆದುಕೊಂಡರೆ, ವಾರದಲ್ಲಿ ಅನಾಯಾಸವಾಗಿ 600-700 ಟನ್‌ ಬಿಕರಿ ಆಗಲಿದೆ. ಇದರಿಂದ ರೈತರಿಗೂ ಲಾಭ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಈ ಸಂಬಂಧ ಉನ್ನತ ಮಟ್ಟದಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹಾಪ್‌ ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next