Advertisement

ಬೇಸಿಗೆಗಾಗಿ ಫ್ರೂಟ್‌ ಮಾಸ್ಕ್ಗಳು

01:33 PM Oct 08, 2020 | mahesh |

ಬೇಸಿಗೆಯಲ್ಲಿ ಬಗೆಬಗೆಯ ಹಣ್ಣುಗಳು ವಿಪುಲವಾಗಿ ದೊರೆಯುತ್ತವೆ. ಹಣ್ಣುಗಳಿಂದ ವಿವಿಧ ಬಗೆಯ ಫೇಸ್‌ಮಾಸ್ಕ್ ಗಳನ್ನು ತಯಾರಿಸಿ ಲೇಪಿಸಿದರೆ ಬಿರುಬೇಸಿಗೆಯಲ್ಲೂ ಮುಖ ಕಾಂತಿಯುತ ಹಾಗೂ ತಾಜಾ ಆಗಿ ಹೊಳೆಯುತ್ತದೆ.

Advertisement

ಮಾವಿನ ಹಣ್ಣಿನ ಮಾಸ್ಕ್
ಕಳಿತ ಮಾವಿನ ಹಣ್ಣಿನ ತಿರುಳು 3 ಚಮಚ, ಮುಲ್ತಾನಿಮಿಟ್ಟಿ- 8 ಚಮಚ, ಗುಲಾಬಿ ಜಲ- 10 ಚಮಚ- ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಹಾಗೂ ಕುತ್ತಿಗೆಗೆ ಲೇಪಿಸಿ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ತೊಳೆದರೆ ಮುಖ ಮೃದು ಹಾಗೂ ತಾಜಾ ಆಗಿರುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಮೊಡವೆ ನಿವಾರಣೆ ಹಾಗೂ ಒಣಚರ್ಮ ನಿವಾರಣೆಗೂ ಇದು ಪರಿಣಾಮಕಾರಿ.

ಕಲ್ಲಂಗಡಿ ಹಣ್ಣು ಹಾಗೂ ಜೇನಿನ ಫೇಸ್‌ಮಾಸ್ಕ್
ತಾಜಾ ಕಲ್ಲಂಗಡಿ ಹಣ್ಣಿನ ತಿರುಳು- 4 ಚಮಚ, ಜೇನು 2 ಚಮಚ ಬೆರೆಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಹಚ್ಚಬೇಕು. 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ವಿಟಮಿನ್‌ “ಎ’, “ಸಿ’ ಹಾಗೂ ಲೈಕೊಪಿನ್‌ಗಳಿಂದ ಸಮೃದ್ಧವಾದ ಈ ಫ್ರೂಟ್‌ಮಾಸ್ಕ್ ಮುಖಕ್ಕೆ ಹೊಳಪು ನೀಡುತ್ತದೆ. ಒಣ ಚರ್ಮದವರಿಗೆ ಮಾಯಿಶ್ಚರೈಸ್‌ ಮಾಡುವ ಉತ್ತಮ ಫೇಸ್‌ಮಾಸ್ಕ್.

ನೆರಿಗೆ ನಿವಾರಕ ಬೆಣ್ಣೆಹಣ್ಣು-ಕಲ್ಲಂಗಡಿ ಹಣ್ಣಿನ ಮಾಸ್ಕ್
ಬೆಣ್ಣೆಹಣ್ಣು ತಿರುಳು 3 ಚಮಚ, ಕಲ್ಲಂಗಡಿ ಹಣ್ಣಿನ ತಿರುಳು 2 ಚಮಚ ಚೆನ್ನಾಗಿ ಬ್ಲೆಂಡ್‌ ಮಾಡಿ, ಈ ಪೇಸ್ಟನ್ನು ಮುಖಕ್ಕೆ ಲೇಪಿಸಬೇಕು. 1/2 ಗಂಟೆಯ ಬಳಿಕ ತೊಳೆಯಬೇಕು. ಇದರ ನಿತ್ಯ ಉಪಯೋಗ ನೆರಿಗೆಗಳನ್ನು ನಿವಾರಣೆ ಮಾಡುತ್ತದೆ. ಇದು ಆ್ಯಂಟಿಏಜಿಂಗ್‌ ಫೇಸ್‌ ಮಾಸ್ಕ್ ಕೂಡ ಆಗಿದೆ.

ಕಾಂತಿವರ್ಧಕ, ಶ್ವೇತವರ್ಣಕಾರಕ ಚಂದನ, ಕಲ್ಲಂಗಡಿ ಫೇಸ್‌ಮಾಸ್ಕ್
ಬೇಸಿಗೆಯಲ್ಲಿ ಮುಖ ಕಳಾಹೀನವಾಗುವುದರ ಜೊತೆಗೆ ಮುಖ ಕಪ್ಪು ವರ್ಣಕ್ಕೆ ಬದಲಾಗುವುದು ಹೆಚ್ಚು. ಸೂರ್ಯನ ಕಿರಣಗಳ ಝಳದಿಂದ ಅಧಿಕ “ಮೆಲಾನಿನ್‌’ ಎಂಬ ದ್ರವ್ಯಸ್ರಾವವಾಗುವುದೇ ಇದಕ್ಕೆ ಕಾರಣ.

Advertisement

2 ಚಮಚ ಚಂದನದ ಪೌಡರ್‌, 10 ಚಮಚ ಸೌತೆಕಾಯಿರಸ, 5 ಚಮಚ ಕಲ್ಲಂಗಡಿ ತಿರುಳು ಬೆರೆಸಿ ಫೇಸ್‌ ಪ್ಯಾಕ್‌ ಮಾಡಿ, 1/2 ಗಂಟೆಯ ಬಳಿಕ ತಣ್ಣೀರಲ್ಲಿ ತೊಳೆದರೆ ಮುಖ ಶ್ವೇತವರ್ಣ ಪಡೆಯುತ್ತದೆ.

ಕಲೆನಿವಾರಕ ಅನಾನಸು ಮಾಸ್ಕ್
ಕಳಿತ ಅನಾನಸು ಹಣ್ಣಿನ ತುಂಡುಗಳನ್ನು ಬ್ಲೆಂಡರ್‌ನಲ್ಲಿ ತಿರುವಿ ಪೇಸ್ಟ್‌ ಮಾಡಿ 3 ಚಮಚ ತೆಗೆದುಕೊಂಡು, 2 ಚಮಚ ಕಡಲೆಹಿಟ್ಟು ಬೆರೆಸಿ ಫೇಸ್‌ಮಾಸ್ಕ್ ಹಾಕಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ವಾರಕ್ಕೆ 2-3 ಸಾರಿ ಈ ಹಣ್ಣಿನ ಮಾಸ್ಕ್ ಬಳಸಿದರೆ ಇದು ಚರ್ಮದ ಉತ್ತಮ ಕ್ಲೆನ್ಸರ್‌. ಹಾಗಾಗಿ ಇದರಿಂದ ಮೊಗದ ಕಲೆನಿವಾರಣೆಯಾಗಿ ಕಾಂತಿ ವರ್ಧಿಸುತ್ತದೆ.

ಕಾಂತಿವರ್ಧಕ ಕೀವಿಹಣ್ಣು ಹಾಗೂ ದ್ರಾಕ್ಷೆಯ ಮಾಸ್ಕ್
ಕೀವಿಹಣ್ಣಿನ ತಿರುಳನ್ನು ಚೆನ್ನಾಗಿ ಮಸೆದು 3 ಚಮಚ ತೆಗೆದುಕೊಂಡು ಕಪ್ಪು ಅಥವಾ ಬಿಳಿದ್ರಾಕ್ಷೆಯ ಪೇಸ್ಟ್‌ 2 ಚಮಚ ಅದಕ್ಕೆ ಬೆರೆಸಿ, ದಪ್ಪ ಮೊಸರನ್ನು 2 ಚಮಚ ಸೇರಿಸಿ, ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ 15-20 ನಿಮಿಷಗಳ ಬಳಿಕ ಮುಖ ತೊಳೆದರೆ, ಮೊಗ ತಾಜಾತನ, ಮೃದುತ್ವ ಹಾಗೂ ಸ್ನಿಗ್ಧತೆ ಪಡೆಯುತ್ತದೆ.

ಸ್ಟ್ರಾಬೆರಿ ದ್ರಾಕ್ಷೆಯ ಹಣ್ಣಿನ ಮಾಸ್ಕ್
ಚೆನ್ನಾಗಿ ಕಳಿತ 3 ಸ್ಟ್ರಾಬೆರಿ ಹಣ್ಣು ಹಾಗೂ ದ್ರಾಕ್ಷೆಹಣ್ಣು (10) ತೆಗೆದುಕೊಂಡು ಬ್ಲೆಂಡ್‌ ಮಾಡಿ ಪೇಸ್ಟ್‌ ತಯಾರಿಸಬೇಕು. ಇದಕ್ಕೆ 2 ಚಮಚ ಶುದ್ಧ ಜೇನುತುಪ್ಪ ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 1/2 ಗಂಟೆಯ ಬಳಿಕ ತೊಳೆದರೆ ಅಧಿಕ ಎಣ್ಣೆಯ ಪಸೆ, ಜಿಡ್ಡಿನ ಮುಖವುಳ್ಳವರಲ್ಲಿ ಅಧಿಕ ತೈಲಾಂಶ ನಿವಾರಣೆಯಾಗುತ್ತದೆ. ಜೊತೆಗೆ ಮೊಗವು ಶುಭ್ರವಾಗಿ ಹೊಳಪು ಪಡೆದುಕೊಳ್ಳುತ್ತದೆ.

ಪಪ್ಪಾಯ-ದಾಲ್ಚಿನಿ-ಜೇನಿನ ಮಾಸ್ಕ್
ಬೇಸಿಗೆಯ ಉರಿಬಿಸಿಲಿನಲ್ಲಿ ಈ ಫೇಸ್‌ಪ್ಯಾಕ್‌ ಮುಖ ತಾಜಾ ಆಗಿ ಹೊಳೆಯುವಂತೆ ಮಾಡುತ್ತದೆ. 4 ಚಮಚ ಪಪ್ಪಾಯ ಹಣ್ಣಿನ ತಿರುಳು, 1/4 ಚಮಚ ನಯವಾಗಿ ಪುಡಿಮಾಡಿರುವ ದಾಲ್ಚಿನಿ (ಚಕ್ಕೆ) ಪುಡಿ, ಜೇನು 2 ಚಮಚ ಇವೆಲ್ಲವನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು.

ಸ್ಟ್ರಾಬೆರಿ ಹಾಗೂ ಚಾಕೋ ಮಾಸ್ಕ್
4 ಕಳಿತ ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಮಸೆದು ಅದಕ್ಕೆ 5 ಚಮಚ ಕೊಕೋ ಪೌಡರ್‌ ಹಾಗೂ 1 ಚಮಚ ಜೇನು ಬೆರೆಸಬೇಕು. ಮುಖಕ್ಕೆ ಲೇಪಿಸಿ 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ವಾರಕ್ಕೆ 1-2 ಬಾರಿ ಈ ಫೇಸ್‌ಮಾಸ್ಕ್ ಬಳಸಬೇಕು. ಈ ಫೇಸ್‌ಮಾಸ್ಕ್ನಲ್ಲಿ “ಎಂಥೊಸೈನಿನ್‌’ ಎಂಬ ದ್ರವ್ಯವಿದ್ದು ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಬೇಸಿಗೆಯಲ್ಲಿ ಚರ್ಮಕ್ಕೆ ಉಂಟಾಗುವ ಹಾನಿಯನ್ನು ನಿವಾರಣೆ ಮಾಡುತ್ತವೆ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next